ಮೂಡಲಗಿ : ಗ್ರಾಮೀಣ ಪ್ರದೇಶದ ಶಾಲೆಗಳಿಗೆ ಸ್ಮಾರ್ಟ್‌ಕ್ಲಾಸ್, ಸ್ಟೆಮ್ ಲ್ಯಾಬ್, ಪೀಠೋಪಕರಣ, ಆಟದ ಸಾಮಗ್ರಿಗಳಂತ ವಸ್ತುಗಳಿಗಾಗಿ ಸಂಸದರ ಅನುಧಾನ ನೀಡಿದರೆ ಅದು ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗೆ ಅನುಕೂಲವಾಗಲಿದೆ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದರು.

ಗುರುವಾರ ಫೆ-15 ರಂದು ತಾಲೂಕಿನ ಹುಣಶ್ಯಾಳ ಪಿ.ಜಿ ಗ್ರಾಮದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಗೆ 2022-23ನೇ ಸಾಲಿನ ರಾಜ್ಯಸಭಾ ಸಂಸದರ ಸ್ಥಳೀಯ ಪ್ರದೇಶಾಭಿವೃದ್ದಿ ಯೋಜನೆಯ ಅನುದಾನದಡಿ ಪೂರೈಸಲಾದ ಸಾಮಗ್ರಿಗಳನ್ನು ವಿತರಿಸಿ ಮಾತನಾಡಿದ ಅವರು ವಿದ್ಯಾರ್ಥಿಗಳ ಸರ್ವತೋಮುಖ ವಿಕಾಸಕ್ಕೆ ಪಠ್ಯ ವಿಷಯ ಮಾತ್ರವಲ್ಲದೇ ಪಠ್ಯತೇತರ ವಿಷಯಗಳ ಕಲಿಕೆಯು ಅತ್ಯವಶ್ಯಕ. ಶಾಲಾ ಮಟ್ಟದಲ್ಲಿಯೇ ಕ್ರೀಡೆ, ಕಲೆ, ಸಾಹಿತ್ಯ ಸೇರಿ ವಿವಿಧ ಆಯಾಮಗಳ ಶಿಕ್ಷಣಕ್ಕೆ ಒತ್ತು ನೀಡಬೇಕಾದ ಅವಶ್ಯಕತೆ ಇದೆ ಎಂದರು.

ಇಂದಿನ ಆಧುನಿಕ ತಂತ್ರಜ್ಞಾನ ಯುಗದಲ್ಲಿ ವಿದ್ಯಾರ್ಥಿಗಳು ಸ್ಪರ್ಧೆ ಎದುರಿಸಬೇಕಾಗಿರುವುದರಿಂದ ವಿದ್ಯಾರ್ಥಿಗಳಿಗೆ ತಂತ್ರಜ್ಞಾನವುಳ್ಳ ಕಲಿಕಾ ಶಕ್ತಿ ಹೆಚ್ಚು ಮಾಡಬೇಕಾಗಿದೆ. ಜಿಲ್ಲೆಯಲ್ಲಿ ಈಗಾಗಲೇ 7 ಸರ್ಕಾರಿ ಶಾಲೆಗಳಲ್ಲಿ ಪ್ರಾಯೋಗಿಕವಾಗಿ ಸ್ಮಾರ್ಟ್ ಕ್ಲಾಸ್ ಅಳವಡಿಸಲಾಗಿದೆ ಎಂದರಲ್ಲದೇ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಗೆ ಅನುಗುಣವಾಗಿ ನಮ್ಮ ಶಾಲೆ ಮಕ್ಕಳ ಕಲಿಕೆಯ ಗುಣಮಟ್ಟವನ್ನು ಎತ್ತರಿಸಬೇಕಾದದ್ದು ಅನಿವಾರ್ಯವಾಗಿದೆ. ಅದಕ್ಕೆ ಪೂರಕವಾಗಿ ಹೊಸ ತಂತ್ರಜ್ಞಾನವುಳ್ಳ ಶಿಕ್ಷಣ ಜಾರಿಗೊಳಿಸುವುದಕ್ಕಾಗಿ ಸ್ಟೆಮ್ ಲ್ಯಾಬ್, ಅಟಲ್ ಟಿಂಕರಿಂಗ್ ಲ್ಯಾಬ್ ಮತ್ತು ಸ್ಮಾರ್ಟ್‌ಕ್ಲಾಸ್ ಪರಿಕಲ್ಪನೆ ಮೂಡಿ ಬಂದಿದ್ದು ಅವುಗಳ ಉಪಯೋಗದಿಂದ ವಿದ್ಯಾರ್ಥಿಗಳ ಕಲಿಕಾ ಮಟ್ಟ ಹೆಚ್ಚಿಸಿಕೊಳ್ಳಲು ಅನುಕೂಲವಾಗಲಿದೆ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಅಜೀತ ಮನ್ನಿಕೇರಿ ಪ್ರಮುಖರಾದ ಅವಣ್ಣ ಡಬ್ಬನವರ, ಸಿದ್ದಾರೂಡ ಇಂಚಲ, ಸಿದ್ದಾರ್ಥ ಅಥಣಿ, ಬಸವರಾಜ ಹುಡೇದ, ಮಹಾಂತೇಶ ರೊಡ್ಡನ್ನವರ, ಅಜೀತ ಪಾಟೀಲ, ಗಂಗಪ್ಪ ಡಬ್ಬನವರ, ಬಸಲಿಂಗ ಸೋಮನಟ್ಟಿ, ತುಕಾರಾಮ ಬಂಗೇರ, ಬಸವರಾಜ ಕರೆಬನ್ನಿ, ಪಂಚಾಯತ ಅಭಿವೃದ್ಧಿ ಅಧಿಕಾರಿ ಶಿವಾನಂದ ಗುಡಸಿ, ಮುಖೋಪಾಧ್ಯಯರಾದ ಎಸ್. ಜಿ. ಕುಳ್ಳೂರ, ಕೆ.ಆರ್.ಆಯ್.ಡಿ.ಎಲ್ ಎ.ಇ.ಇ ಆರತಿ ನಾರಾಯಣಕರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.