ಬೆಳಗಾವಿ : ನಗರದ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯದ ಸಭಾಂಗಣದಲ್ಲಿ ಬೆಂಗಳೂರು ರಾಷ್ಟ್ರೀಯ ಸಂತ ಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ ಅವರು ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಮುನ್ನೋಟ : ವಿದ್ವಾಂಸರೊಂದಿಗೆ ಸಮಾಲೋಚನ ಗೋಷ್ಠಿಯನ್ನು ಶನಿವಾರ ಆಯೋಜಿಸಿದ್ದರು.
ಗೋಷ್ಠಿಯ ಧ್ಯೇಯೋದ್ದೇಶದ ಕುರಿತು ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ಅಧ್ಯಕ್ಷ ಕಾ. ತ. ಚಿಕ್ಕಣ್ಣ ಅವರು ಕನಕದಾಸ ಕೇಂದ್ರದ ಮುಖ್ಯ ಉದ್ದೇಶವೇ ಕನಕದಾಸರ ಕುರಿತು ಸಮಗ್ರ ಮಾಹಿತಿಯನ್ನು ಸಮಾಜಕ್ಕೆ ಕೊಡುವುದು. ಅದು ಮೂರು ರೀತಿಯಲ್ಲಿ ಕೊಡಲು ಪ್ರಯತ್ನಿಸುತ್ತಿದ್ದೇವೆ. ವಿದ್ಯಾರ್ಥಿಗಳು, ಮಕ್ಕಳು ಮತ್ತು ವಿದ್ವಾಂಸರನ್ನು ಅನುಲಕ್ಷಿಸಿ ಕನಕದಾಸರನ್ನು ಅವರೆಲ್ಲರಿಗೂ ತಲುಪಿಸುವ ಕಾರ್ಯ ಮಾಡುತ್ತಿದ್ದೇವೆ. ಕನಕದಾಸರ ಕುರಿತು ಇನ್ನೂರ ಐವತ್ತು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕನಕದಾಸರ ಸಾಹಿತ್ಯವನ್ನು ಈಗಾಗಲೇ ಹದಿನೈದು ಭಾಷೆಗಳಿಗೆ ಭಾಷಾಂತರವಾಗಿದೆ. ಇದು ವಚನ ಸಾಹಿತ್ಯದ ತರುವಾಯ ಕನಕದಾಸರ ಸಾಹಿತ್ಯಕ್ಕೆ ಸಿಕ್ಕ ಗೌರವವಾಗಿದೆ. ಕನಕದಾಸರ ಸಾಹಿತ್ಯದಲ್ಲಿ ಭಕ್ತಿ, ಕ್ರಾಂತಿಕಾರಿ, ಸಮ ಸಮಾಜ, ವ್ಯವಸ್ಥೆಯ ಸುಧಾರಣೆಯ ಬೀಜ ಮಂತ್ರವಿದೆ. ಭಕ್ತಿ ಎನ್ನುವುದು ಆತ್ಮವಿಕಾಸದ ಬೆಳಕು. ಅದು ಇಂದು ಬೇರೆ ದಾರಿಯನ್ನು ಹಿಡಿಯುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ತತ್ವಪದ ಸಾಹಿತ್ಯವನ್ನು ಐವತ್ತು ಸಂಪುಟಗಳಲ್ಲಿ ಮುದ್ರಿಸುವ ಬ್ರಹತ್ ಯೋಜನೆಯನ್ನು ಕೈಗೆತ್ತಿಕೊಂಡು, ಇದರಲ್ಲಿ ಮೂವತ್ತೆರಡು ಸಂಪುಟಗಳು ಈಗಾಗಲೇ ಮುದ್ರಣಗೊಂಡಿವೆ. ಉಳಿದ ಸಂಪುಟಗಳು ಅತೀ ಶೀಘ್ರದಲ್ಲಿ ಮುದ್ರಣಗೊಂಡು ಬಿಡುಗಡೆಗೊಳ್ಳಲಿದೆ.
ಡಾ. ಸರಜೂ ಕಾಟ್ಕರ್ ಅವರು ಈ ಗೋಷ್ಠಿಯಲ್ಲಿ ಉತ್ಕೃಷ್ಟ ವಾದ ರಚನಾತ್ಮಕ ಸಲಹೆಗಳು ಬಂದವು. ಕನಕದಾಸರನ್ನು ರಾಷ್ಟ್ರೀಯ ಸಂತ ಎನ್ನುವುದಕ್ಕಿಂತ ಅವನೊಬ್ಬ ಬಂಡಾಯ ಕವಿ. ಕನಕದಾಸರನ್ನು ಬೇರೆ ಭಾಷೆಯ ಕವಿಗಳೊಂದಿಗೆ ತೌಲನಿಕ ಅಧ್ಯಯನ ಆಗಬೇಕು, ಕನಕರ ಬರವಣಿಗೆಯನ್ನು ನಾಟಕಕ್ಕೆ ಅಳವಡಿಸಬೇಕು ಎಂದರು. ಪ್ರಾಚಾರ್ಯ ಪ್ರೊ. ಎಂ. ಜಿ. ಹೆಗಡೆ ಅವರು ದಾಸ ಅಥವಾ ದಾಸಪಂಥ ಎನ್ನುವುದು ಯಾವಾಗ ಬಂತು. ಕನಕರ ಕಾಲದಲ್ಲಿ ಇದರ ಸುಳಿವು ನಮಗೆ ಸಿಗುವುದಿಲ್ಲ. ಮಾಸ್ತಿ ಅವರ ಇಂಗ್ಲಿಷ್ ಬರಹಗಳಲ್ಲಿ ಇದರ ಕುರಿತು ಇದೆ. ಪ್ರಾಯಶಃ ಅದಕ್ಕೊಂದು ವಿಶಾಲ ವ್ಯಾಪ್ತಿ ಕೊಡುವ ದೃಷ್ಟಿಯಿಂದ ಈ ಕಲ್ಪನೆ ತಂದಿರಬಹುದು. ಕನಕರ ಬರವಣಿಗೆ ಎಲ್ಲರನ್ನೂ ಒಳಗೊಳ್ಳುವ ಸಾಂಸ್ಕೃತಿಕ ನಾಯಕತ್ವವನ್ನು ರೂಪಿಸುವುದಾಗಿದೆ. ಅವರ ಕಾಲದಲ್ಲಿ ನಡೆದ ಅನೇಕ ವಿಷಮ ಸ್ಥಿತಿಯನ್ನು, ವಿದ್ಯಮಾನಗಳನ್ನು ಮೆಟ್ಟಿನಿಂತು ಎಲ್ಲರನ್ನೂ ಒಳಗೊಳ್ಳುವಂತೆ ಮಾಡಿದರು ಎಂದರು.
ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ. ಎಂ. ಜಿ. ಹೆಗಡೆ ಸ್ವಾಗತಿಸಿದರು. ಡಾ. ಕವಿತಾ ಕುಸುಗಲ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಳಗಾವಿ ವಿಭಾಗದ ಜಂಟಿ ನಿರ್ದೇಶಕ ಕೆ. ಎಚ್ ಚೆನ್ನೂರ ವಂದಿಸಿದರು. ಗೋಷ್ಠಿಯಲ್ಲಿ ಬೆಳಗಾವಿಯ ಸುಮಾರು ನಾಲ್ವತ್ತು ವಿದ್ವಾಂಸರು ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಮುನ್ನೋಟದ ಕುರಿತು ತಮ್ಮ ಅಭಿಪ್ರಾಯ ಮತ್ತು ಸಲಹೆ, ಸೂಚನೆಗಳನ್ನು ನೀಡಿದರು. ಗೋಷ್ಠಿಯಲ್ಲಿ ಮಹಾವಿದ್ಯಾಲಯದ ಅಧ್ಯಾಪಕರು ಉಪಸ್ಥಿತರಿದ್ದರು.