• ಪುತ್ತೂರು; ಪುತ್ತೂರು ನೋಂದಣಿ ಕಚೇರಿಯಲ್ಲಿ ಅನ್‌ಡಿವೈಡೆಡ್ ರೈಟ್ಸ್( ಪಾಲುದಾರ ಆಸ್ತಿ ನೋಂದಣಿ) ನೋಂದಣಿಯಾಗದ ಕಾರಣ ತೀವ್ರ ಸಮಸ್ಯೆ ಉಂಟಾಗುತ್ತಿದ್ದು, ಸಮಸ್ಯೆಯನ್ನು ಸರಿಪಡಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವಂತೆ ಕಂದಾಯ ಇಲಾಖೆ ಕಾರ್ಯದರ್ಶಿಯವರಿಗೆ ಪುತ್ತೂರು ಶಾಸಕ ಅಶೋಕ್ ರೈ ಅವರು ಗುರುವಾರ ಮನವಿ ಸಲ್ಲಿಸಿದ್ದಾರೆ.

ಗುರುವಾರ ಇಲಾಖಾ ಕಾರ್ಯದರ್ಶಿ (ವಿಪತ್ತು ನಿರ್ವಹಣೆ) ಮುನೀಶ್ ಮೌದ್ಗಿಲ್ ಅವರನ್ನು ಭೇಟಿಯಾದ ಶಾಸಕರು ಈ ಸಮಸ್ಯೆಯ ಕಳೆದ ಹಲವಾರು ದಿನಗಳಿಂದ ಆಗುತ್ತಿದ್ದು ಪಾಲುದಾರ ಆಸ್ತಿ ನೋಂದಣಿ ಮಾಡುವಲ್ಲಿ ತೊಂದರೆಯಾಗಿದ್ದು ಸಾರ್ವಜನಿಕರಿಗೆ ಇದರಿಂದ ತೀವ್ರ ಇಕ್ಕಟ್ಟಿನ ಪರಿಸ್ಥಿತಿ ಎದುರಾಗಿದೆ. ನೋಂದಣಿ ಕಚೇರಿಯಲ್ಲಿ ಈ ಸಮಸ್ಯೆ ಸೇರಿದಂತೆ ಇತರೆತಾಂತ್ರಿಕ ಸಮಸ್ಯೆಗಳಿದ್ದು ಅವುಗಳನ್ನು ಕೂಡಲೇ ಸರಿಪಡಿಸುವಂತೆ ಮನವಿ ಮಾಡಿದ್ದಾರೆ. ಸಮಸ್ಯೆಯ ಬಗ್ಗೆ ತಕ್ಷಣ ಗಮನಹರಿಸಿ ಕ್ರಮಕೈಗೊಳ್ಳುವುದಾಗಿ ಅಧಿಕಾರಿ ಶಾಸಕರಿಗೆ ತಿಳಿಸಿದ್ದಾರೆ.

 

 

ಯಾವುದೇ ಇಲಾಖಾ ಕಚೇರಿ ಇರಲಿ ಅದು ಜನರ ಸೇವೆಗೆ ಇರುವಂತದ್ದು ಅಲ್ಲಿ ದೋಷಗಳು ಕಂಡು ಬಂದಲ್ಲಿ ತಕ್ಷಣ ಇಲಾಖಾ ಮೇಲಧಿಕಾರಿಗಳು ಸರಿಪಡಿಸಬೇಕು. ಪುತ್ತೂರು ಉಪ ನೋಂದಣಿ ಕಚೇರಿಯಲ್ಲಿ ಪಾಲುದಾರ ಆಸ್ತಿ ನೋಂದಣಿಯಾಗುತ್ತಿಲ್ಲ ಎಂಬ ದೂರುಗಳು ಬಂದ ಕಾರಣ ಅದನ್ನು ಸರಕಾರದ ಗಮನಕ್ಕೆ ತಂದಿದ್ದೇನೆ, ಇದಲ್ಲದೆ ನೋಂದಣಿ ಕಚೇರಿಯಲ್ಲಿರುವ ಎಲ್ಲಾ ತಾಂತ್ರಿಕ ಸಮಸ್ಯೆಯನ್ನು ಬಗೆಹರಿಸಿ ಎಂದು ಮನವಿ ಮಾಡಿದ್ದೇನೆ.-ಅಶೋಕ್ ರೈ, ಶಾಸಕರು, ಪುತ್ತೂರು

ಪುತ್ತೂರು ನಗರಸಭೆಗೆ ೧೫ ಕೋಟಿ, ವಿಟ್ಲಕ್ಕೆ ೫ ಕೋಟಿ

ಅನುದಾನಕ್ಕೆ ನಗರಾಭಿವೃದ್ದಿ ಸಚಿವರಿಗೆ ಶಾಸಕ ಅಶೋಕ್ ರೈ ಮನವಿ

ಪುತ್ತೂರು: ಪುತ್ತೂರು ನಗರಸಭೆ ಹಾಗೂ ವಿಟ್ಲ ಪಟ್ಟಣ ಪಂಚಾಯತ್‌ಗೆ ವಿಶೇಷ ಯೋಜನೆಯಡಿ ೨೦ ಕೋಟಿ ಅನುದಾನ ನೀಡುವಂತೆ ಪುತ್ತೂರು ಶಾಸಕ ಅಶೋಕ್ ರೈ ಅವರು ನಗರಾಭಿವೃದ್ದಿ ಸಚಿವ ರಹೀಂ ಖಾನ್ ಅವರಿಗೆ ಮನವಿ ಮಾಡಿದ್ದಾರೆ.ಪುತ್ತೂರು ನಗರಸಭಾ ವ್ಯಾಪ್ತಿಯಲ್ಲಿ ತುರ್ತಾಗಿ ಅನೇಕ ಅಭಿವೃದ್ದಿ ಕಾಮಗಾರಿ ನಡೆಯಬೇಕಿದ್ದು ಇದಕ್ಕಾಗಿ ವಿಶೇಷ ಯೋಜನೆಯಡಿ ೧೫ ಕೋಟಿ ಅನುದಾನ ನೀಡಬೇಕು ಮತ್ತು ವಿಟ್ಲ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಅಭಿವೃದ್ದಿ ಕಾಮಗಾರಿಗೆ ಹೆಚ್ಚುವರಿ ೫ ಕೋಟಿ ನೀಡುವಂತೆ ಸಚಿವರಿಗೆ ಶಾಸಕರು ಮನವಿ ಮಾಡಿದ್ದಾರೆ.

 

ಪಶುಸಂಗೋಪನಾ ಕಾಲೇಜು ಆರಂಭಕ್ಕೆ ಮನವಿ

ಪುತ್ತೂರು: ಈ ಶೈಕ್ಷಣಿಕ ವರ್ಷದಲ್ಲೇ ಕೊಯಿಲದಲ್ಲಿರುವ ಪಶುವೈದ್ಯಕೀಯ ಕಾಲೇಜು ಪ್ರಾರಂಭ ಮಾಡುವಂತೆ ಪಶು ಸಂಗೋಪನಾ ಸಚಿವ ವೆಂಕಟೇಶ್ ಅವರಿಗೆ ಶಾಸಕ ಅಶೋಕ್ ರೈ ಮನವಿ ಸಲ್ಲಿಸಿದ್ದಾರೆ. ಅನೇಕ ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಪಶು ವೈದ್ಯಕೀಯ ಕಾಲೇಜಿಗೆ ಈಗಾಗಲೇ ಸರಕಾರದಿಂದ ಅನುದಾನ ಬಿಡುಗಡೆಯಾಗಿದ್ದು ಕಾಲೇಜು ಪ್ರಾರಂಭ ಮಾಡುವ ಬಗ್ಗೆ ಸರಕಾರ ತೀರ್ಮಾನ ಮಾಡಿದೆ ಎಂದು ಶಾಸಕರಿಗೆ ಸಚಿವರು ಈ ಹಿಂದೆ ತಿಳಿಸಿದ್ದರು. ಕಾಲೇಜು ಪ್ರಾರಂಭಕ್ಕೆ ಬೇಕಾದ ಎಲ್ಲಾ ಸಿದ್ದತೆಗಳನ್ನು ಶೀಘ್ರವೇ ರೂಪೀಕರಿಸಿ ಕಾಲೇಜು ಆರಂಭ ಮಾಡುವಂತೆ ಶಾಸಕರು ಮನವಿ ಮಾಡಿದ್ದಾರೆ.