This is the title of the web page
This is the title of the web page

Live Stream

March 2023
S M T W T F S
 1234
567891011
12131415161718
19202122232425
262728293031  

| Latest Version 9.4.1 |

State News

ಹಿಂದುಳಿದ ವರ್ಗದ ಆಯೋಗದ ಮಧ್ಯಂತರ ವರದಿ ಸಲ್ಲಿಕೆ

Join The Telegram Join The WhatsApp

ಕಾನೂನಾತ್ಮಕ ಚರ್ಚೆಯ ನಂತರ ತೀರ್ಮಾನ – ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

 

ಬೆಳಗಾವಿ, ಡಿಸೆಂಬರ್ 22 :

ಹಿಂದುಳಿದ ವರ್ಗದ ಆಯೋಗದ ಮಧ್ಯಂತರ ವರದಿಯನ್ನು ಆದಷ್ಟು ಬೇಗನೇ ಕಾನೂನಾತ್ಮಕ ಚರ್ಚೆ ಮಾಡಿ , ಎಲ್ಲ ಪಕ್ಷದ ನಾಯಕರೊಂದಿಗೆ ಸಮಾಲೋಚಿಸಿ ಈ ಬಗ್ಗೆ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.ಅವರು ಇಂದು ಬೆಳಗಾವಿ ಸುವರ್ಣಸೌಧದ ಬಳಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.

ಇಂದು ಬೆಳಿಗ್ಗೆ ಹಿಂದುಳಿದ ವರ್ಗ ಆಯೋಗದ ಅಧ್ಯಕ್ಷರ ಜಯಪ್ರಕಾಶ ಹೆಗ್ಡೆಯವರು ಭೇಟಿಯಾಗಿ ಮಧ್ಯಂತರ ವರದಿಯನ್ನು ನೀಡಿದ್ದಾರೆ. ಈ ವರದಿಯನ್ನು ಪರಿಶೀಲಿಸಿ, ಕಾನೂನು ಮತ್ತುಸಂಸದೀಯ ಸಚಿವರೊಂದಿಗೆ ಚರ್ಚಿಸಿ ಸೂಕ್ತ ಕಾನೂನಾತ್ಮಕ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು. ನಾಗಮೋಹನ್ ದಾಸ್ ವರದಿ ಬಂದು ಒಂದು ವರ್ಷದ ನಂತರ ವಿವರಗಳನ್ನು ನೀಡಲಾಗಿತ್ತು. ಸದಾಶಿವ ಆಯೋಗ ವರದಿ ಬಂದು ಹತ್ತು ವರ್ಷವಾಗಿದ್ದು, ಸರ್ಕಾರದ ಒಪ್ಪಿಗೆ ಪಡೆದಿಲ್ಲವಾದ್ದರಿಂದ ಇನ್ನೂ ವಿವರ ನೀಡಲಾಗಿಲ್ಲ. ಕಾಂತರಾಜು ವರದಿ ಇನ್ನೂ ಆಯೋಗದಲ್ಲೇ ಇದ್ದು, ಸರ್ಕಾರದ ಮಟ್ಟಕ್ಕೆ ಬಂದಿಲ್ಲವಾದ್ದರಿಂದ ವಿವರ ನೀಡಲಾಗಿಲ್ಲ. ಆದರೆ ಹಿಂದುಳಿದ ವರ್ಗದ ಆಯೋಗದ ಮಧ್ಯಂತರ ವರದಿ ಬಗ್ಗೆ ಕಾನೂನು ರೀತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.

ಕೋವಿಡ್ ನಿಯಂತ್ರಣ ಹಾಗೂ ಮುಂಜಾಗ್ರತಾ ಕ್ರಮಕ್ಕಾಗಿ ಇಂದು ಸಭೆ :

ಕೋವಿಡ್ ಬಗ್ಗೆ ಕೇಂದ್ರ ಆರೋಗ್ಯ ಇಲಾಖೆ ಕೆಲವೊಂದು ಸೂಚನೆಗಳನ್ನು ನೀಡಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಕೋವಿಡ್ ದೊಡ್ಡ ಪ್ರಮಾಣದಲ್ಲಿ ಹಾಗೂ ವಿವಿಧ ತಳಿಗಳಲ್ಲಿ ಬರುತ್ತಿದೆ. ಹೊಸ ತಳಿ ಕಂಡುಬಂದಿದ್ದು ವೇಗದಲ್ಲಿ ಹರುಡುತ್ತಿರುವ ಮಾಹಿತಿಗಳ ಹಿನ್ನೆಲೆಯಲ್ಲಿ ಇಂದು ಸಭೆಯನ್ನು ನಡೆಸಲಾಗುತ್ತಿದೆ. ಆರೋಗ್ಯ ಸಚಿವರು, ಆರೋಗ್ಯ ಇಲಾಖೆ ಅಧಿಕಾರಿಗಳು, ತಂಜ್ಞರ ಸಮಿತಿಯೊಂದಿಗೆ ಚರ್ಚಿಸಿ, ರಾಜ್ಯದಲ್ಲಿ ಕೋವಿಡ್ ನ್ನು ನಿಯಂತ್ರಿಸಲು ಹಾಗೂ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲು ತೀರ್ಮಾನಗಳನ್ನು ಕೈಗೊಳ್ಳಲಾಗುವುದು. ಸಾರ್ವಜನಿಕರು ಈ ಬಗ್ಗೆ ಭಯ ಆತಂಕ ಪಡುವ ಅಗತ್ಯವಿಲ್ಲ. ತಜ್ಞರ ಸಲಹೆಗಳನ್ನು ಪರಿಪಾಲನೆ ಮಾಡುವ ಮೂಲಕ ಕೋವಿಡ್ ನ್ನು ಸಂಪೂರ್ಣ ನಿಯಂತ್ರಣ ಮಾಡಬಹುದು. ಬೂಸ್ಟರ್ ಡೋಸ್ ನ್ನು ಕಾರ್ಯಕ್ರಮವನ್ನು ರೂಪಿಸುವ ಸಾಧ್ಯತೆ ಇಂದಿನ ಸಭೆಯಲ್ಲಿದೆ ಎಂದರು.

ಅವಧಿ ಮುನ್ನ ಚುನಾವಣೆಯ ಪ್ರಸ್ತಾವನೆ ಇಲ್ಲ :

ಕೋವಿಡ್ ನಿಂದಾಗಿ ಅವಧಿ ಮುನ್ನವೇ ಚುನಾವಣೆ ನಡೆಯಲಿದೆ ಹಾಗೂ ದಿಲ್ಲಿಯ ನಾಯಕರು ಮುಖ್ಯಮಂತ್ರಿಗಳ ಜೊತೆ ಮಾತನಾಡಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಎಂದು ಮಾಧ್ಯಮಗಳಲ್ಲಿ ಹೇಳಿಕೆ ನೀಡಿದ್ದಾರೆ. ದಿಲ್ಲಿಯ ನಾಯಕರು ಈ ವಿಚಾರವಾಗಿ ಮಾತನಾಡಿಲ್ಲ. ಅವಧಿಗೂ ಮುನ್ನವೇ ಚುನಾವಣೆ ಮಾಡುವ ಯಾವುದೇ ಪ್ರಸ್ತಾವನೆ ನಮ್ಮ ಮುಂದಿಲ್ಲ ಎಂದು ಸ್ಪಷ್ಟೀಕರಿಸುತ್ತೇನೆ ಎಂದರು.

ಸಚಿವ ಸಂಪುಟ ವಿಸ್ತರಣೆ :

ಮಾಜಿ ಸಚಿವರಾದ ಈಶ್ವರಪ್ಪಹಾಗೂ ರಮೇಶ ಜಾರಕಿಹೊಳಿಯವರು ನಿನ್ನೆ ಭೇಟಿಯಾಗಿದ್ದು, ತಮ್ಮನ್ನು ಸಚಿವ ಸಂಪುಟದಲ್ಲಿ ವಿಸ್ತರಿಸುವ ಬಗ್ಗೆ ಕೇಳಿದ್ದರು. ನಾನು ನವದೆಹಲಿಗೆ ಹೋದಾಗ ಈ ಬಗ್ಗೆ ಮಾಡಿರುವ ಚರ್ಚೆಯ ವಿವರಗಳನ್ನು ಅವರಿಗೆ ನೀಡಿದ್ದೇನೆ. ಇಷ್ಟರಲ್ಲಿಯೇ ಮತ್ತೊಮ್ಮೆ ನವದೆಹಲಿಗೆ ಭೇಟಿ ನೀಡಿ ಈ ವಿಚಾರ ಹಾಗೂ ಇನ್ನಿತರ ರಾಜಕೀಯ ವಿಚಾರಗಳ ಬಗ್ಗೆ ಚರ್ಚೆ ನಡೆಸಲಾಗುವುದು. ಈಗಾಗಲೇ ಸಚಿವ ಸಂಪುಟ ವಿಸ್ತರಣೆ, ಅದರ ಅಗತ್ಯತೆಗಳ ಬಗ್ಗೆ ವಿವರಿಸಲಾಗಿದೆ. ಈ ಬಾರಿ ಸಂಪುಟ ವಿಸ್ತರಣೆ ಬಗ್ಗೆ ಪಕ್ಷದ ಹೈಕಮಾಂಡ್ ಅಂತಿಮ ತೀರ್ಮಾನವನ್ನು ನೀಡಲಿದೆ ಎಂಬ ವಿಶ್ವಾಸವಿದೆ ಎಂದರು.

ಸುಪ್ರೀಂ ಕೋರ್ಟ್ ನಲ್ಲಿ ರಾಜ್ಯ ತನ್ನ ನಿಲುವನ್ನು ಗಟ್ಟಿಯಾಗಿ ಮಂಡಿಸಲಿದೆ:

ಮಹಾರಾಷ್ಟ್ರದಿಂದ ನೀರು ಬಿಡುವ ಬಗ್ಗೆ ಯೋಚಿಸಬೇಕಾಗುತ್ತದೆ ಎಂಬ ಮಹಾರಾಷ್ಟ್ರ ನಾಯಕರ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ಈ ಹೇಳಿಕೆಯನ್ನು ವಿಪಕ್ಷ ಸದಸ್ಯರು ಹೇಳಿದ್ದು, ಎಲ್ಲ ನದಿಗಳು ಮೂರ್ನಾಲ್ಕು ರಾಜ್ಯಗಳಲ್ಲಿ ಹರಿಯುತ್ತಿದೆ. ಅಂತರರಾಜ್ಯ ನದಿಗಳು ಅಂತರರಾಜ್ಯ ಜಲ ವಿವಾದ ಕಾಯ್ದೆಯಡಿಯಲ್ಲಿ ಕಾರ್ಯನಿರ್ವಹಿಸಬೇಕಾಗುತ್ತದೆ. ರಾಜ್ಯಗಳ ನಡುವೆ ನಿಲುವುಗಳಲ್ಲಿ ವ್ಯತ್ಯಾಸವಿದ್ದರೂ, ಇಂತಹ ಹೇಳಿಕೆಗಳನ್ನು ನೀಡಬಾರದು. ಇಂತಹ ಉದ್ಘಟತನದ ಮಾತುಗಳಿಂದ ಏನೂ ಪ್ರಯೋಜನವಿಲ್ಲ. ರಾಜಕೀಯ ಪ್ರೇರಿತ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇಂತಹ ಹೇಳಿಕೆಗಳನ್ನು ಕಾರ್ಯಗತ ಮಾಡುವುದು ಸಾಧ್ಯವಿಲ್ಲ. ರಾಜ್ಯಗಳ ನಡುವೆ ಪರಸ್ಪರ ಸಂಬಂಧವಿದ್ದೇ ಇರುತ್ತದೆ. ಈಗಾಗಲೇ ಗಡಿ ವಿಚಾರ ಸುಪ್ರೀಂ ಕೋರ್ಟ್ ನಲ್ಲಿದೆ. ಅಲ್ಲಿ ಅವರು ಹೋರಾಡಲಿ. ಸಂವಿಧಾನ ಪ್ರಕಾರ ರಾಜ್ಯ ನಿಲುವು ಸರಿಯಾಗಿದೆ. ಸುಪ್ರೀಂ ಕೋರ್ಟ್ ನಲ್ಲಿ ಕರ್ನಾಟಕದ ವಾದವನ್ನು ಗಟ್ಟಿಯಾಗಿ ಮಂಡಿಸಲಾಗುವುದು ಎಂದರು.

ಸಂಜಯ್ ರಾವತ್ ಅವರು ಚೀನಾ ಸೇನೆ ಭಾರತಕ್ಕೆ ನುಗ್ಗಿದಂತೆ, ಬೆಳಗಾವಿಗೆ ನುಗ್ಗುತ್ತೇವೆ ಎಂಬ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ಸಂಜಯ್ ರಾವತ್ ಅವರ ಪ್ರಾಮುಖ್ಯತೆ ಏನು ಎಂದು ಎಲ್ಲರಿಗೂ ತಿಳಿದಿದೆ. ಅವರು ಸದಾ ಪ್ರಚೋದನಕಾರಿ ಹೇಳಿಕೆಗಳನ್ನೇ ನೀಡುತ್ತಾರೆ. ಅವರು ಚೈನಾದಂತೆ ಬಂದರೆ ಕನ್ನಡಿಗರು ಭಾರತೀಯ ಸೈನ್ಯದಂತೆ ಅವರನ್ನು ಹಿಮ್ಮೆಟ್ಟಿಸುತ್ತೇವೆ ಎಂದರು.


Join The Telegram Join The WhatsApp
Admin
the authorAdmin

Leave a Reply