ಬೆಳ್ತಂಗಡಿ : ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರು ಸುಬ್ರಮಣ್ಯ-ಧರ್ಮಸ್ಥಳ-ಕೊಲ್ಲೂರು ಹೊಸ ರೈಲ್ವೆ ಮಾರ್ಗ ನಿರ್ಮಾಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಈ ಬಗ್ಗೆ ರೈಲ್ವೆ ಸಚಿವ ಅಶ್ವಿನಿ ವೈಷ್ಣವ ಅವರ ಬಳಿ ಸಮಗ್ರವಾಗಿ ಚರ್ಚಿಸಿ ಸರ್ವೇ ಮಾಡಲು ಒಪ್ಪಿಸುತ್ತೇನೆ ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಹೇಳಿದರು.
ಬೆಳ್ತಂಗಡಿಯ ಶ್ರೀ ಧರ್ಮಸ್ಥಳ ಮಂಜುನಾಥ ಸ್ವಾಮಿ ಕಲಾಭವನದಲ್ಲಿ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ಬಿಜೆಪಿ ಮಂಡಲದ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಕರ್ನಾಟಕದಲ್ಲಿ 11,000 ಕೋಟಿ ರೂಪಾಯಿ ವೆಚ್ಚದ ರೈಲ್ವೆ ಯೋಜನೆಗಳನ್ನು ಮರು ಕಾರ್ಯರೂಪಕ್ಕೆ ತರಲಾಗುತ್ತಿದೆ. ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಜನರ ಆಶೋತ್ತರಗಳಿಗೆ ಅನುಗುಣವಾಗಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರ ಬೇಡಿಕೆಯಂತೆ ಶೀಘ್ರವೇ ಈ ಯೋಜನೆ ಕುರಿತು ಸಂಪುಟದಲ್ಲಿ ಚರ್ಚಿಸಲಾಗುವುದು. ಕೊಲ್ಲೂರು, ಧರ್ಮಸ್ಥಳ, ಸುಬ್ರಮಣ್ಯ ರೈಲ್ವೆ ಯೋಜನೆ ಸರ್ವೇ ಕಾರ್ಯ ಆರಂಭಿಸಲಾಗುವುದು ಎಂದು ಅವರು ಹೇಳಿದರು.
ರೈಲ್ವೆ ಇಲಾಖೆಗೆ ಸಂಬಂಧಿಸಿದ ನೂರಾರು ಕೋಟಿ ರೂಪಾಯಿ ಯೋಜನೆಗೆ ಚಾಲನೆ ನೀಡಲಾಗಿದೆ. ಬಹು ವರ್ಷದ ಬೇಡಿಕೆಯಾದ ಕಡೂರು, ಮೂಡಿಗೆರೆ ರೈಲ್ವೆ ಮಾರ್ಗವನ್ನು ಮುಂದುವರಿಸಿದ್ದೇವೆ. ಹೀಗಾಗಿ ಭಕ್ತರ ಅನುಕೂಲಕ್ಕೆ ಧಾರ್ಮಿಕ ಕ್ಷೇತ್ರವನ್ನು ಕೇಂದ್ರೀಕರಿಸಿ ದಿಲ್ಲಿಗೆ ತೆರಳಿ ನಂತರ ಕೊಲ್ಲೂರು- ಧರ್ಮಸ್ಥಳ-ಸುಬ್ರಮಣ್ಯ ಈ ಧಾರ್ಮಿಕ ಕ್ಷೇತ್ರಗಳನ್ನು ಸಂಪರ್ಕಿಸುವ ಬಗ್ಗೆ ಇಲಾಖೆ ವಿಸ್ತೃತ ಯೋಜನೆಯನ್ನು ಕಾರ್ಯರೂಪಕ್ಕೆ ತರಲಾಗುವುದು. ಸುಬ್ರಹ್ಮಣ್ಯ- ಮಂಜುನಾಥ ಮತ್ತು ಮೂಕಾಂಬಿಕೆಯರ ಕೃಪೆ ಇದ್ದರೆ ಶಾಸಕರು ಹೇಳಿದ ಕಾರ್ಯ ಶೀಘ್ರದಲ್ಲೇ ನೆರವೇರಲಿದೆ.
ಜಲಶಕ್ತಿ ಯೋಜನೆಯನ್ನು ಈ ಭಾಗದಲ್ಲಿ ಅಳವಡಿಸುವ ದಿಸೆಯಲ್ಲಿ ಪೂರ್ಣ ಪ್ರಮಾಣದ ಸಭೆಯನ್ನು ಇಷ್ಟರಲ್ಲೇ ಬೆಳ್ತಂಗಡಿಯಲ್ಲಿ ಕರೆಯಲಾಗುವುದು ಎಂದು ಜಲ ಶಕ್ತಿ ಖಾತೆಯನ್ನು ನಿಭಾಯಿಸುತ್ತಿರುವ ಸೋಮಣ್ಣ ಹೇಳಿದರು.ಶಾಸಕ ಹರೀಶ್ ಪೂಂಜ ಉತ್ತಮ ನಡೆತೆಯುಳ್ಳವರು. ಅವರಿಗೆ ದೊಡ್ಡ ಭವಿಷ್ಯವಿದೆ. ಕೇವಲ ಐದಾರು ವರ್ಷಗಳಲ್ಲಿ ಬಹಳ ಎತ್ತರಕ್ಕೆ ಬೆಳೆಯುತ್ತಿರಾ ನಿಮಗೆ ಅರ್ಹತೆ ಇದೆ. ರಾಜಕೀಯ ಎನ್ನುವುದು ಮುಳ್ಳಿನ ಹಾಸಿಗೆ. ಬರುವ ಎಡರು ತೊಡರುಗಳನ್ನು ಇವರು ಸಮರ್ಥವಾಗಿ ನಿರ್ವಹಿಸಿ ನಿಭಾಯಿಸಬಲ್ಲರು. ಅವರಿಗೆ ಉತ್ತಮ ಭವಿಷ್ಯವಿದೆ. ಆದರೆ ಎಲ್ಲಿಯೂ ತಾಳ್ಮೆ ಕಳೆದುಕೊಳ್ಳಬಾರದು. ಅವರು ಇನ್ನೊಬ್ಬ ಸೋಮಣ್ಣನಂತಹ ಆಗಬೇಕು ಎಂದು ಹರೀಶ್ ಪೂಂಜ ಅವರನ್ನು ಉದ್ದೇಶಿಸಿ ಹೇಳಿದರು.
ಭಗವಂತ ನನಗೆ ನಿಮ್ಮೆಲ್ಲರ ಸೇವೆ ಮಾಡಲು ನರೇಂದ್ರ ಮೋದಿಯವರ ಸಚಿವ ಸಂಪುಟದಲ್ಲಿ ಒಂದು ದೊಡ್ಡ ಅವಕಾಶ ಕಲ್ಪಿಸಿದ್ದಾನೆ. ರೈಲ್ವೆ ಹಾಗೂ ಜಲ ಶಕ್ತಿ ಖಾತೆಗಳನ್ನು ನರೇಂದ್ರ ಮೋದಿ ಅವರು ನೀಡಿದ್ದಾರೆ. ಎರಡು ಇಲಾಖೆಗಳಲ್ಲಿ ಕೆಲಸ ಮಾಡಲು ಶಕ್ತಿಮೀರಿ ಪ್ರಯತ್ನಿಸುವೆ.
ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ವರಿಷ್ಠರ ಮಾತು ಕೇಳಿ ಎರಡು ಕಡೆ ಸೋತೆ. ಈಗ ಆ ಬಗ್ಗೆ ಚರ್ಚೆ ಅನಗತ್ಯ. ಆದರೆ, ಅದೇ ವರಿಷ್ಠರು ನನಗೆ ಲೋಕಸಭೆಯಲ್ಲಿ ಟಿಕೆಟ್ ನೀಡಿ ಗೆಲ್ಲುವಂತೆ ಮಾಡಿದ್ದಾರೆ. ಮಂತ್ರಿ ಆಗುತ್ತೇನೆ ಎಂದು ಬಯಸಿರಲಿಲ್ಲ. ಬಿಜೆಪಿಯ ಮೊದಲ ಸಭೆಯಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರು ನನಗೆ ಡಬಲ್ ಶುಭಾಶಯ ಹೇಳಿದಾಗ ನಾನು ಮಂತ್ರಿ ಆಗಲಿದ್ದೇನೆ ಎಂಬ ಅರಿವಾಯಿತು ಎಂದು ಹೇಳಿದರು.ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಮಾತನಾಡಿ, ಕರಾವಳಿ ಜಿಲ್ಲೆಗಳು ರೈಲ್ವೆ ಯೋಜನೆಗಳಿಂದ ವಂಚಿತವಾಗಿದ್ದು ಈ ನಿಟ್ಟಿನಲ್ಲಿ ರೈಲ್ವೆ ಇಲಾಖೆ ಇನ್ನಾದರೂ ಈ ಭಾಗಕ್ಕೆ ಅಗತ್ಯ ಆದ್ಯತೆ ನೀಡಬೇಕು. ಬೆಳ್ತಂಗಡಿ ರೈಲ್ವೆಯಿಂದ ವಂಚಿತವಾದ ತಾಲೂಕು. ಕುಕ್ಕೆ ಸುಬ್ರಮಣ್ಯ- ಧರ್ಮಸ್ಥಳ-ಮೂಡಬಿದರೆ-ಕಾರ್ಕಳ-ಹೆಬ್ರಿ-ಕೊಲ್ಲೂರು ಹೊಸ ರೈಲ್ವೆ ಮಾರ್ಗ ರಚನೆಯಾದರೆ ಈ ಭಾಗದ ಸಮಗ್ರ ಅಭಿವೃದ್ಧಿ ಸಾಧ್ಯವಿದೆ. ಹಾಸನ, ಬೇಲೂರು, ಬೈರಾಪುರ, ಉಪ್ಪಿನಂಗಡಿ, ಬಿ.ಸಿ.ರೋಡ್ ಸಂಪರ್ಕಿಸಲು ಸರ್ವೇ ನಡೆಸಿ ಯೋಜನೆ ಅನುಷ್ಠಾನಗೊಳಿಸಿದರೆ ಜನರಿಗೆ ವರದಾನವಾಗಲಿದೆ ಎಂದರು.