ಬೆಂಗಳೂರು : ಕನ್ನಡ ಚಿತ್ರರಂಗದಲ್ಲಿ ಈ ತಲೆಮಾರಿನ ಹೀರೋಗಳ ನಡುವೆ ಕುಚಿಕ್ಕು ಗೆಳೆಯರೆಂದೇ ಪ್ರಸಿದ್ಧರಾಗಿದ್ದವರು ಕಿಚ್ಚ ಸುದೀಪ್ ಮತ್ತು ಚಾಲೆಂಜಿಂಗ್ ಸ್ಟಾರ್ ದರ್ಶನ್. ಆದರೆ ಈ ಸ್ನೇಹ ಕಳೆದ 07 ವರ್ಷಗಳಿಂದ ಗ್ರಹಣ ಕವುಚಿಕೊಂಡಂತೆ ಮಂಕಾಗಿತ್ತು. ಒಂದು ವೇಳೆ ರೆಬೆಲ್ ಸ್ಟಾರ್ ಜೀವಂತವಾಗಿದ್ದಿದ್ದರೆ ಪರಸ್ಪರ ವಿರುದ್ಧ ದಿಕ್ಕುಗಳಂತಾಗಿದ್ದ ಸುದೀಪ್ ಮತ್ತು ದರ್ಶನ್ ಮತ್ತೆ ಒಂದೇ ಬಿಂದುವಿನಲ್ಲಿ ಸಂಧಿಸೋ ಕಾಲ ಕೂಡಿರುತ್ತಿತ್ತು. ಆದರೆ ದುರಾದೃಷ್ಟವಶಾತ್ ಹಾಗಾಗಲಿಲ್ಲ.
ಹಾಗಂಥ ಈ ಇಬ್ಬರು ಮತ್ತೆ ಒಂದಾಗಲು ಸಾಧ್ಯವೇ ಇಲ್ಲ ಅಂತೇನು ಇಲ್ಲ. ಯಾಕೆಂದರೆ .. ಭವಿಷ್ಯದಲ್ಲಿ ಇಬ್ಬರೂ ಒಂದಾಗಬಹುದು. ಕಾಲವನ್ನೂ ತಡೆಯೋರು ಯಾರು ಇಲ್ಲ ಎಂದು ಇಬ್ಬರೂ ಹಾಡನ್ನು ಹಾಡಿದರು ಹಾಡಬಹುದು. ಆ ಕಾಲ ಯಾವತ್ತು ಬರುತ್ತೆ ಅನ್ನುವುದಕ್ಕೆ ಸ್ಪಷ್ಟ ಉತ್ತರ ಇಲ್ಲವಾದರೂ, ಸುದೀಪ್ ಅವರಿಗೆ ತಮ್ಮ ನಡೆ ಮತ್ತು ನುಡಿಯಲ್ಲಿ ಸ್ಪಷ್ಟತೆಯಂತೂ ಇದೆ. ಇದಕ್ಕೆ ಕೈಗನ್ನಡಿಯೇ ಕೆಚ್ಚದೆಯ ಕಿಚ್ಚ ಸುದೀಪ್, ಪೊರ್ಕಿ ದರ್ಶನ್ ಬಗ್ಗೆ ಆಡಿದ ಮಾತುಗಳು.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಬಂಧನದ ಬಗ್ಗೆ ಮತ್ತೊಂದು ದೊಡ್ಡ ನಟ ಸುದೀಪ್ ಮೊದಲ ಬಾರಿ ಪ್ರತಿಕ್ರಿಯೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿರುವ ಅವರು, ಮೃತ ರೇಣುಕಾಸ್ವಾಮಿ ಮತ್ತು ಆತನ ಕುಟುಂಬಕ್ಕೆ ನ್ಯಾಯ ಸಿಗಬೇಕು ಎಂದಿದ್ದಾರೆ.
ಈ ತರದ ಯಾವುದೇ ಘಟನೆ ಆದರೂ ಇಡೀ ಚಿತ್ರರಂಗದ ಮೇಲೆ ಪರಿಣಾಮ ಬೀರುತ್ತದೆ. ಮೊದಲೇ ಜನ ಸಿನಿಮಾ ನೋಡಲು ಬರುತ್ತಿಲ್ಲ, ನಾವು ಒಳ್ಳೆ ಸಿನಿಮಾ ಮಾಡಿ ಪ್ರಯತ್ನ ಪಟ್ಟರೆ ಮಾತ್ರ ಚಿತ್ರರಂಗ ಬೆಳೆಯುತ್ತದೆ ಎಂದು ಹೇಳಿದರು.