ಮಂಗಳೂರು: ಬಜಪೆಯಲ್ಲಿ ನಡೆದ ಹಿಂದುತ್ವವಾದಿ ಕಾರ್ಯಕರ್ತ ಸುಹಾಸ್ ಶೆಟ್ಟಿ ಬರ್ಬರ ಹತ್ಯೆ ಪ್ರಕರಣವನ್ನು ರಾಜ್ಯ ಸರ್ಕಾರವು ತಕ್ಷಣವೇ ರಾಷ್ಟ್ರೀಯ ತನಿಖಾ ಸಂಸ್ಥೆಗೆ (ಎನ್‌ಐಎ) ವರ್ಗಾಯಿಸಬೇಕೆಂದು ಒತ್ತಾಯಿಸಿ ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದಿದ್ದಾರೆ.

ಗೃಹ ಸಚಿವವರಿಗೆ ಬರೆದ ಪತ್ರದಲ್ಲಿ ಸಂಸದರು, ಸುಹಾಸ್‌ ಶೆಟ್ಟಿ ಬರ್ಬರ ಹತ್ಯೆ ಘಟನೆಯಿಂದ ನಾನು ದಿಗ್ಧಮೆಗೊಂಡಿದ್ದು, ಭೀಕರ ಕೊಲೆ ಕೃತ್ಯದ ಕುರಿತು ತೀವ್ರ ಆತಂಕ ಮತ್ತು ನೋವಿನಿಂದ ಈ ಪತ್ರವನ್ನು ಬರೆಯುತ್ತಿದ್ದೇನೆ. ಈ ಘಟನೆಯು ಕರಾವಳಿ ಕರ್ನಾಟಕ ಪ್ರದೇಶದಲ್ಲಿ ಹೆಚ್ಚುತ್ತಿರುವ ಕಾನೂನುಬಾಹಿರ ಕೃತ್ಯ, ಬಲಗೊಳ್ಳುತ್ತಿರುವ ಇಸ್ಲಾಮಿಕ್ ಮೂಲಭೂತವಾದ ಮತ್ತು ರಾಷ್ಟ್ರ ವಿರೋಧಿ ಶಕ್ತಿಗಳ ಅಟ್ಟಹಾಸಕ್ಕೆ ಸ್ಪಷ್ಟ ನಿದರ್ಶನವಾಗಿದೆ. ಸುಹಾಸ್ ಶೆಟ್ಟಿ ಹತ್ಯೆಯು ಕರಾವಳಿ ಮಾತ್ರವಲ್ಲ ಇಡೀ ರಾಜ್ಯದ ಜನರನ್ನೇ ಬೆಚ್ಚಿ ಬೀಳುವಂತೆ ಮಾಡಿದೆ ಎಂದಿದ್ದಾರೆ.

ಈ ಹಿಂದೆಯೂ ಇದೇ ರೀತಿಯಲ್ಲಿ ಬಿಜೆಪಿ ಕಾರ್ಯಕರ್ತ ಸುಳ್ಯದ ಪ್ರವೀಣ್ ನೆಟ್ಟಾರು ಅವರ ಹತ್ಯೆಯನ್ನು ನಿಷೇಧಿತ ಪಿಎಫ್‌ಐ ಸಂಘಟನೆ ಕಾರ್ಯಕರ್ತರು ನಡೆಸಿದ್ದರು. ಈಗ ಪ್ರವೀಣ್‌ ಮಾದರಿಯಲ್ಲೇ ಮತ್ತೊಬ್ಬ ಹಿಂದೂ ಯುವಕನನ್ನು ಕಳೆದುಕೊಂಡಿರುವುದು ನೋವಿನ ವಿಚಾರ. ಈ ರೀತಿಯ ಹತ್ಯೆಯು ಈ ಪ್ರದೇಶದಲ್ಲಿ ಪಿಎಫ್‌ಐ ನಂತಹ ಮೂಲಭೂತವಾದಿ ಸಂಘಟನೆಗಳು
ಇನ್ನೂ ಸ್ಟೀಪ‌ರ್ ಸೆಲ್‌ನಂತೆ ಜೀವಂತವಾಗಿರುವುದನ್ನು ಸ್ಪಷ್ಟಪಡಿಸುತ್ತದೆ ಎಂದಿದ್ದಾರೆ.

ಈ ಭೀಕರ ಘಟನೆಯಲ್ಲಿ ನಿಷೇಧಿತ ಪಿಎಫ್‌ಐ ಸಂಘಟನೆಯ ಕಾರ್ಯಕರ್ತರ ಕೈವಾಡದ ಸಾಧ್ಯತೆ ಇರುವುದರಿಂದ ಈ ಕುರಿತು ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಬೇಕಾಗಿರುವುದು ಅಗತ್ಯ. ಕೊಲೆ ಕೃತ್ಯದ ಹಿಂದಿರುವ ಸಮಾಜ ಘಾತುಕ ಸಂಘಟನೆಗಳು, ಹತ್ಯೆ ಹಿಂದಿನ ಒಳಸಂಚು, ಇದರಲ್ಲಿ ಭಾಗಿಯಾದವರು ಹಾಗೂ ಕುಮ್ಮಕ್ಕು ನೀಡಿರುವ ದುಷ್ಟಶಕ್ತಿಯನ್ನು ಬುಡ ಸಮೇತ ಕಿತ್ತು ಹಾಕಬೇಕು. ಆ ಮೂಲಕ ಕಾನೂನಿನ ಮೇಲೆ ಇರುವ ಜನರ ವಿಶ್ವಾಸವನ್ನು ಮರುಸ್ಥಾಪಿಸಬೇಕು ಎಂದು ಅವರು ಪತ್ರದಲ್ಲಿ ಆಗ್ರಹಿಸಿದ್ದಾರೆ.

ಸುಹಾಸ್‌ ಶೆಟ್ಟಿ ಹತ್ಯೆ ವಿಚಾರವಾಗಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಮಧ್ಯಪ್ರವೇಶಿಸಿ, ಕೇವಲ ಅಪರಾಧಿಗಳು ಮಾತ್ರವಲ್ಲದೆ ಅವರಿಗೆ ಬೆಂಬಲ ನೀಡಿದ ಮತ್ತು ಹಣಕಾಸು ನೆರವು ನೀಡಿದ ಎಲ್ಲರನ್ನು ತ್ವರಿತವಾಗಿ ಕಾನೂನಿನ ಮುಂದೆ ತರಲು ಕ್ರಮ ಕೈಗೊಳ್ಳಬೇಕೆಂದು ಚೌಟ ವಿನಂತಿಸಿದ್ದಾರೆ.

ಎನ್ ಐಎಗೆ ಹಸ್ತಾಂತರಿಸಲು ಅಮಿತ್ ಶಾಗೆ ಶೋಭಾ ಪತ್ರ

ಬೆಂಗಳೂರು: ಹಿಂದುತ್ವವಾದಿ ಕಾರ್ಯಕರ್ತ ಸುಹಾಸ್‌ ಶೆಟ್ಟಿ ಬರ್ಬರ ಹತ್ಯೆ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಕೇಂದ್ರ ಕಾರ್ಮಿಕ ಇಲಾಖೆಯ ರಾಜ್ಯ ಖಾತೆ ಸಚಿವೆ ಶೋಭಾ ಕರಂದ್ಲಾಜೆ, ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ (ಎನ್‌ಐಎ) ವರ್ಗಾಯಿಸಬೇಕೆಂದು ಕೋರಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಶುಕ್ರವಾರ ಮನವಿ ಮಾಡಿದ್ದಾರೆ.

ಶೆಟ್ಟಿ ಅವರನ್ನು ಬಜಪೆ ಸಮೀಪದ ಕಿನ್ನಿಪಡವು ಗ್ರಾಮದಲ್ಲಿ ಮೇ 1ರಂದು ಹತ್ಯೆ ಮಾಡಲಾಗಿದೆ.

ಈ ಕುರಿತು ಪತ್ರ ಬರೆದಿರುವ ಅವರು, ಇದೊಂದೇ ಪ್ರಕರಣವಲ್ಲ. ಕೋಮು ಸಂಘರ್ಷವನ್ನು ಸೃಷ್ಟಿಸಲು ಬಯಸುತ್ತಿರುವ ದೇಶವಿರೋಧಿ ಶಕ್ಷಿಗಳ ಬೆಂಬಲದೊಂದಿಗೆ ಹಿಂದೂಗಳ ಮೇಲಿನ ಹಲ್ಲೆ ಪ್ರಕರಣಗಳು ನಿರಂತರವಾಗಿ ನಡೆಯುತ್ತಿವೆ. ಆ ಮೂಲಕ ಹಿಂದೂ ಪರ ಧ್ವನಿಯನ್ನು ಹತ್ತಿಕ್ಕುವ ಪ್ರಯತ್ನಗಳು ನಡೆಯುತ್ತಿವೆ ಎಂದು ಉಲ್ಲೇಖಿಸಿದ್ದಾರೆ.

ಸದ್ಯ ಕರ್ನಾಟಕದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ರಾಜ್ಯ ಸರ್ಕಾರದ ನಿಷ್ಕ್ರಿಯತೆ ಹಾಗೂ ಓಲೈಕೆ ರಾಜಕಾರಣವು ಸಮಾಜ ವಿರೋಧಿ ಶಕ್ಷಿಗಳಿಗೆ ಉತ್ತೇಜನ ನೀಡುತ್ತಿದೆ. ಹುಬ್ಬಳ್ಳಿ ಪೊಲೀಸ್‌ ಠಾಣೆ ಮೇಲೆ ದಾಳಿ ನಡೆಸಿದವರ ವಿರುದ್ಧದ ಪ್ರಕರಣಗಳನ್ನು ಇತ್ತೀಚೆಗೆ ಹಿಂಪಡೆದದ್ದು ಮತ್ತು ಮೈಸೂರಿನ ಉದಯಗಿರಿಯಲ್ಲಿ ಪೊಲೀಸ್‌ ಠಾಣೆ ಮೇಲೆ ನಡೆದ ದಾಳಿ ಪ್ರಕರಣಗಳು ಅದಕ್ಕೆ ಉದಾಹರಣೆಯಾಗಿವೆ. ಈ ರೀತಿಯ ಮೃದು ಧೋರಣೆಗಳು ಕಾನೂನು ಉಲ್ಲಂಘಿಸುವವರನ್ನು ಮೌನವಾಗಿ ಬೆಂಬಲಿಸುವ ಸಂದೇಶ ರವಾನಿಸುತ್ತವೆ. ಇದರಿಂದಾಗಿಯೇ, ಪದೇಪದೆ ಗಲಭೆ ಮತ್ತು ದಾಳಿ ಪ್ರಕರಣಗಳು ವರದಿಯಾಗುತ್ತಿವೆ ಎಂದು ಆರೋಪಿಸಿದ್ದಾರೆ.

ಮುಂದುವರಿದು, ಸುಹಾಸ್ ಶೆಟ್ಟಿ ಅವರ ಹತ್ಯೆ ಪ್ರಕರಣವನ್ನು ಎನ್‌ಐಎಗೆ ವರ್ಗಾಯಿಸಬೇಕು ಎಂದು ಕೋರುತ್ತೇನೆ. ಆಗಷ್ಟೇ ಶೆಟ್ಟಿ ಅವರ ಕುಟುಂಬಕ್ಕೆ ನ್ಯಾಯ ಒದಗಿಸಲು ಸಾಧ್ಯ ಎಂದು ಒತ್ತಾಯಿಸಿದ್ದಾರೆ.