ನವದೆಹಲಿ: ಚುನಾವಣಾ ಬಾಂಡ್ ಕುರಿತ ಸಂಪೂರ್ಣ ಮಾಹಿತಿಯನ್ನು ಬಹಿರಂಗಗೊಳಿಸಬೇಕು ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(ಎಸ್‌ಬಿಐ)ಕ್ಕೆ ಸುಪ್ರೀಂ ಕೋರ್ಟ್ ಸೋಮವಾರ ತಾಕೀತು ಮಾಡಿದೆ.
ಚುನಾವಣಾ ಬಾಂಡ್‌ಗಳಿಗೆ ಸಂಬಂಧಿಸಿದ ಸಂಪೂರ್ಣ ವಿವರಗಳನ್ನು ಇದೇ ತಿಂಗಳು ಮಾರ್ಚ್ 21ರೊಳಗೆ ಬಿಡುಗಡೆ ಮಾಡಬೇಕು ಎಂದು ಎಸ್‌ಬಿಐಗೆ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರ ನೇತೃತ್ವದ ಐವರು ನ್ಯಾಯಾಧೀಶರ ಪೀಠವು ತಾಕೀತು ಮಾಡಿದೆ.
ಯೂನಿಕ್ ಬಾಂಡ್ ನಂಬರ್‌ಗಳನ್ನೂ ಒಳಗೊಂಡಂತೆ ಎಲ್ಲ ವಿವರಗಳನ್ನು ಎಸ್‌ಬಿಐ ಅಧ್ಯಕ್ಷರು ಮಾರ್ಚ್ 21 ಸಂಜೆ 5ರೊಳಗೆ ಅಫಿಡವಿಟ್ ಮೂಲಕ ಕೋರ್ಟ್‌ಗೆ ಸಲ್ಲಿಸಬೇಕು ಎಂದು ಅದು ತಿಳಿಸಿದೆ. ಯೂನಿಕ್ ಬಾಂಡ್ ನಂಬರ್ ವಿವರಗಳು ಬಾಂಡ್ ಖರೀದಿಸಿದವರು ಹಾಗೂ ಪಡೆದವರು ಯಾರು ಎಂಬ ವಿವರಗಳನ್ನು ಒಳಗೊಂಡಿರುತ್ತವೆ.
ಈ ಯೋಜನೆಯನ್ನು ರದ್ದುಗೊಳಿಸಲಾದ ತೀರ್ಪನ್ನು ವಿವಿಧ ವ್ಯಕ್ತಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂಬ ಬಗ್ಗೆ ಕೇಂದ್ರ ಸರ್ಕಾರ ವ್ಯಕ್ತಪಡಿಸಿದ್ದ ಕಳವಳವನ್ನು ಸಹ ಸುಪ್ರೀಂ ಕೋರ್ಟ್ ತಳ್ಳಿಹಾಕಿದೆ.
ಚುನಾವಣಾ ಬಾಂಡ್ ಮೂಲಕ ಬಹಿರಂಗಪಡಿಸಲಾದ ಎಲ್ಲ ವಿವರಗಳನ್ನು ತಮ್ಮ ಕಾರ್ಯಸೂಚಿಗೆ ತಕ್ಕಂತೆ ತಿರುಚಲಾಗುತ್ತಿದ್ದು ಇದರಿಂದಾಗಿ ನ್ಯಾಯಾಲಯ ಮುಜಗರಕ್ಕೊಳಗಾಗುತ್ತಿದೆ ಎಂದು ಕೇಂದ್ರದ ಪರವಾಗಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಸುಪ್ರೀಂ ಕೋರ್ಟ್ ಸಿಜೆಐ ಡಿ.ವೈ. ಚಂದ್ರಚೂಡ, ನ್ಯಾಯಮೂರ್ತಿಗಳಾದ ಸಂಜೀವ ಖನ್ನಾ, ಬಿ.ಆರ್. ಗವಾಯಿ, ಜೆ ಬಿ ಪರ್ದಿವಾಲಾ ಹಾಗೂ ಮನೋಜ ಮಿಶ್ರಾ ಅವರಿದ್ದ ಐವರು ಸದಸ್ಯರ ಪೀಠಕ್ಕೆ ತಿಳಿಸಿದರು. ಆದರೆ ಇದನ್ನು ಪೀಠ ಸ್ಪಷ್ಟವಾಗಿ ತಳ್ಳಿ ಹಾಕಿತು. ತನ್ನ ತೀರ್ಪುಗಳನ್ನು ಮೂರನೆಯವರು ಹೇಗೆ ವ್ಯಾಖ್ಯಾನಿಸುತ್ತಾರೆ ಎಂಬುದರ ಬಗ್ಗೆ ತಾನು ತಲೆಕೆಡಿಸಿಕೊಳ್ಳುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ.