ಬೆಳಗಾವಿ : ಸುರೇಶ ಅಂಗಡಿ ಅವರ ಮನೆಯೇ ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ್ ಅವರ ಅಡ್ರೆಸ್ ಎಂದು ಮಾಜಿ ಸಚಿವ ಹಾಗೂ ಅರಬಾವಿ ಬಿಜೆಪಿ ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದ್ದಾರೆ.

ಪತ್ರಕರ್ತರ ಜೊತೆ ಮಾತನಾಡಿದ ಅವರು, ಜಗದೀಶ ಶೆಟ್ಟರ್ ಅವರ ಅಡ್ರೆಸ್ ಎಲ್ಲಿದೆ ಎಂಬ ಕಾಂಗ್ರೆಸ್ ನವರ ಪ್ರಶ್ನೆಗೆ ಸುರೇಶ ಅಂಗಡಿ ಅವರ ಮನೆಯೇ ಜಗದೀಶ ಶೆಟ್ಟರ್ ಅವರ ಅಡ್ರೆಸ್ ಎಂದು ಪ್ರತ್ಯುತ್ತರ ನೀಡಿದರು.

ಮಂತ್ರಿ ಆದರೆ ಎಲ್ಲರೂ ಅವರ ಮನೆ ಅಡ್ರೆಸ್ ಹುಡುಕಿಕೊಂಡು ಹೋಗುತ್ತಾರೆ ಎಂದು ಇದೇ ಸಂದರ್ಭದಲ್ಲಿ ಉತ್ತರ ನೀಡಿದರು.

ಚಿಕ್ಕೋಡಿ ಲೋಕಸಭಾ ಕ್ಷೇತ್ರಕ್ಕೆ ಪ್ರಚಾರಕ್ಕೆ ಹೋಗುವಿರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನಮ್ಮದು ಬೆಳಗಾವಿ ಲೋಕಸಭಾ ಕ್ಷೇತ್ರ. ಇಲ್ಲಿ ಪ್ರಚಾರ ಮಾಡುವುದಾಗಿ ತಿಳಿಸಿದರು. ನಾನು ಮತ್ತು ರಮೇಶ ಜಾರಕಿಹೊಳಿ ಬೆಳಗಾವಿ ಕ್ಷೇತ್ರದಲ್ಲಿ ಹೆಚ್ಚು ಕೆಲಸ ಮಾಡುತ್ತೇವೆ. ಪಕ್ಷ ಹೇಳಿದರೆ ರಮೇಶ್ ಚಿಕ್ಕೋಡಿಗೆ ಹೋಗಬಹುದು. ಜಗದೀಶ ಶೆಟ್ಟರ್ ನಿನ್ನೆ ಗೋಕಾಕ ಮತ್ತು ಅರಬಾವಿ ಕ್ಷೇತ್ರದಲ್ಲಿ ಸಂಚರಿಸಿದ್ದಾರೆ. ಏಪ್ರಿಲ್ 7 ರಂದು ಗೋಕಾಕ ಹಾಗೂ ಅರಬಾವಿಯಲ್ಲಿ ದೊಡ್ಡ ಕಾರ್ಯಕ್ರಮ ಏರ್ಪಡಿಸಲಿದ್ದು ಈ ಸಲ ಬಿಜೆಪಿಯನ್ನು ದೊಡ್ಡ ಅಂತರದಿಂದ ಗೆಲ್ಲಿಸುವುದಾಗಿ ಅವರು ತಿಳಿಸಿದರು.