ಕಾಪು : ಜೀರ್ಣೋದ್ಧಾರಗೊಳ್ಳುತ್ತಿರುವ ಕಾಪು ಶ್ರೀ ಹೊಸಮಾರಿಗುಡಿ ದೈವಸ್ಥಾನಕ್ಕೆ ಇಂದು ದಿನಾಂಕ 09-07-2024 ರಂದು ಭಾರತೀಯ ಕ್ರಿಕೆಟ್ ತಂಡದ ಆಟಗಾರ ಸೂರ್ಯ ಕುಮಾರ್ ಯಾದವ್ ಭೇಟಿ ನೀಡಿದರು.
2024ರ ಟಿ20 ವಿಶ್ವಕಪ್ ಭಾರತ ತನ್ನ ಮುಡಿಗೆರಿಸಿಕೊಂಡಿದ್ದು, ಭಾರತ ತಂಡದಲ್ಲಿ ಆಡಿ ಟಿ20 ವಿಶ್ವಕಪ್ ಗೆಲುವಿಗೆ ಕಾರಣಿಕರ್ತರಾದ ಸೂರ್ಯ ಕುಮಾರ್ ಯಾದವ್ ಅವರನ್ನು ಶಾಸಕರು, ಕಾಪು ಶ್ರೀ ಹೊಸಮಾರಿಗುಡಿ ದೈವಸ್ಥಾನದ ಅಭಿವೃದ್ಧಿ ಸಮಿತಿಯ ಕಾರ್ಯಾಧ್ಯಕ್ಷ ಗುರ್ಮೆ ಸುರೇಶ್ ಶೆಟ್ಟಿ ಅವರು ಅಭಿನಂದಿಸಿದರು.
ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ನಾನು ಕ್ಯಾಚ್ ಹಿಡಿಯುವ ಸಂದರ್ಭ ಬೌಂಡರಿ ಲೈನ್ ಅನ್ನು ಸ್ಪರ್ಶಿಸಿಲ್ಲ. ಪ್ರಪಂಚದ ಎಲ್ಲಾ ಜನರನ್ನು ಖುಷಿಪಡಿಸಲು ಸಾಧ್ಯವಿಲ್ಲ. ದೇವರ ಆಶೀರ್ವಾದದಿಂದ ನಾನು ಆ ಸಂದರ್ಭದಲ್ಲಿ ಆ ಜಾಗದಲ್ಲಿ ಇದ್ದುದರಿಂದ ಅಂತಹ ಒಂದು ಅದ್ಭುತ ಕ್ಯಾಚ್ ಪಡೆಯಲು ಅವಕಾಶ ನನಗೆ ಸಿಕ್ಕಿತು ಎಂದು ಭಾರತ ಕ್ರಿಕೆಟ್ ತಂಡದ ಆಟಗಾರ ಸೂರ್ಯ ಕುಮಾರ್ ಯಾದವ್ ತಿಳಿಸಿದ್ದಾರೆ.
ಕಾಪು ಶ್ರೀ ಹೊಸ ಮಾರಿಗುಡಿ ದೈವಸ್ಥಾನಕ್ಕೆ ಇಂದು ಪತ್ನಿ ದೇವಿಶಾ ಜೊತೆ ಭೇಟಿ ನೀಡಿದ ಬಳಿಕ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಕ್ಯಾಚ್ ಬಗ್ಗೆ ನಡೆಯುತ್ತಿರುವ ಚರ್ಚೆ ಹಾಗೂ ವಿವಾದ ಕುರಿತ ಮಾಧ್ಯಮದವರ ಪ್ರಶ್ನೆಗೆ ಅವರು ಈ ರೀತಿ ಪ್ರತಿಕ್ರಿಯಿಸಿದರು.
ಪ್ರಾಕ್ಟಿಸ್ ಮಾಡುವಾಗ ಅಂತಹ ಕ್ಯಾಚ್ ಗಳನ್ನು ಪಡೆಯಲು ನಾವು ತರಬೇತಿ ಪಡೆಯುತ್ತೇವೆ. ದೇಶಕ್ಕೆ ಕಪ್ ತಂದುಕೊಡಲು ಅಂತಹ ಸಂದರ್ಭವನ್ನು ದೇವರ ಸೃಷ್ಟಿ ಮಾಡಿದ್ದಾನೆ. ಆ ಸಂದರ್ಭದಲ್ಲಿ ನಾನು ದೇವರನ್ನು ನೆನೆದುಕೊಂಡಿದ್ದೆ ಎಂದರು.
ತಂಡದ ಕಪ್ತಾನ ಆಗುವುದು ನಮ್ಮ ಕೈಯಲ್ಲಿಲ್ಲ. ದೇಶಕ್ಕಾಗಿ ಉತ್ತಮವಾಗಿ ಆಡುವುದು ಮಾತ್ರ ನಮ್ಮ ಗುರಿಯಾಗಿದೆ. ದೇವರು ಇಚ್ಛಿಸಿದರೆ ಹಣೆಯಲ್ಲಿ ಬರೆದಂತೆ ಆಗುತ್ತದೆ. ವಿಶ್ವಕಪ್ ಸೆಲೆಬ್ರೇಶನ್ ಜನಸ್ತೋಮ ನೋಡಿ ಬಹಳ ಖುಷಿಯಾಯಿತು. ಕಾಪುವಿನಲ್ಲಿ ಕೂಡ ಜನರು ಪ್ರೀತಿಯಿಂದ ಬರಮಾಡಿ ಕೊಂಡಿರುವುದು ಆತ್ಮೀಯವಾಗಿತ್ತು. ದೇವಸ್ಥಾನದಲ್ಲಿ ಇಷ್ಟು ಮಂದಿ ಸೇರುತ್ತಾರೆ ಎಂಬ ನಿರೀಕ್ಷೆ ಇರಲಿಲ್ಲ ಎಂದು ಅವರು ಹೇಳಿದರು.
ನಾನೊಬ್ಬ ಸಾಮಾನ್ಯ ವ್ಯಕ್ತಿಯಾಗಿ ಇಲ್ಲಿಗೆ ಬಂದಿದ್ದೇನೆ. ನಾನು ಯಾವುದೇ ಸೆಲೆಬ್ರಿಟಿಯಾಗಿ ಬಂದಿಲ್ಲ. ನಾನೊಬ್ಬ ಸೆಲೆಬ್ರಿಟಿ ಎಂಬ ಆಲೋಚನೆ ಕೂಡ ನನಗೆ ಬಂದಿಲ್ಲ. ಸಾಮಾನ್ಯ ವ್ಯಕ್ತಿಯಾಗಿಯೇ ದೊಡ್ಡ ಜೀವನವನ್ನು ಸಾಗಿಸಬೇಕಾಗಿದೆ. ವರ್ಲ್ಡ್ ಕಪ್ ಎಂಬುದು ಇಡೀ ಜೀವನ ಅಲ್ಲ. ಅದೊಂದು ಭಾಗ ಮಾತ್ರ ಎಂದು ಅವರು ತಿಳಿಸಿದರು.
ನಾನು ಮೈದಾನಕ್ಕೆ ಇಳಿಯುವಾಗ ಬಬುಲ್ ಗಂ ಜಗಿಯಲು ಇಷ್ಟ ಪಡುತ್ತೇನೆ. ಬ್ಯಾಟಿಂಗ್ ಮಾಡಲು ಮತ್ತು ಚೆನ್ನಾಗಿ ಆಡಲು ಬಬುಲ್ ಗಂ ಜಗಿಯುವುದು ನನಗೆ ಖುಷಿ ಕೊಡುತ್ತದೆ. ಒಂದು ಸಣ್ಣ ಚ್ಯುಯಿಂಗ್ ಗಂ ಹಾಕಿಕೊಂಡು ನಾನು ಆ ಸಂದರ್ಭವನ್ನು ಸಂಭ್ರಮಿಸುತ್ತೇನೆ ಎಂದರು.
ಕಾಪು ಮಾರಿಯಮ್ಮನ ದರ್ಶನ ಮಾಡಿದ ಮೇಲೆ ಮನಸ್ಸಿಗೆ ಬಹಳ ನೆಮ್ಮದಿಯಾಗಿದೆ. ಪೂಜೆ ಸಲ್ಲಿಕೆ ಮಾಡಿರುವುದರಿಂದ ಶಾಂತಿ ಪ್ರಾಪ್ತಿಯಾದ ಅನುಭವವಾಗಿದೆ. ದೇವಸ್ಥಾನದ ಜೀರ್ಣೋದ್ಧಾರ ಸಂದರ್ಭ ಬರಬೇಕು ಎಂಬ ಇಚ್ಛೆ ಇದೆ. ಆ ಸಂದರ್ಭದಲ್ಲಿ ಅವಕಾಶ ದೊರೆತರೆ ಖಂಡಿತವಾಗಿಯೂ ಬರುತ್ತೇನೆ ಎಂದು ಅವರು ತಿಳಿಸಿದರು.
ಸೂರ್ಯ ಕುಮಾರ್ ಪತ್ನಿ ದೇವಿಶಾ ಮಾತನಾಡಿ, ಕಾಪು ಮಾರಿಗುಡಿಗೆ ಬಂದು ಮನಸ್ಸಿಗೆ ಖುಷಿಯಾಗಿದೆ. ಐದು ವರ್ಷಗಳ ಹಿಂದೆ ನಾವು ಒಮ್ಮೆ ಉಡುಪಿಗೆ ಬಂದಿದ್ದೆವು. ಮತ್ತೊಮ್ಮೆ ಕಾಪು ಅಮ್ಮನ ಭೇಟಿ ಮಾಡಬೇಕು ಎಂಬ ಇಚ್ಛೆ ಇತ್ತು. ಕಾಪು ಮಾರಿಯಮ್ಮನನ್ನು ನೋಡಲು ಪತಿಯನ್ನೂ ಕರೆದುಕೊಂಡು ಬಂದಿದ್ದೇನೆ. ಯಾವುದೇ ಟೂರ್ನಿ ಇಲ್ಲದಿದ್ದರೆ ದೇಗುಲ ಜೀರ್ಣೋದ್ಧಾರ ಕಾರ್ಯಕ್ರಮಕ್ಕೆ ಬರುತ್ತೇವೆ ಎಂದರು.
ದೇವಿಯಲ್ಲಿ ಏನು ಪ್ರಾರ್ಥಿಸಿದ್ದೇನೆ ಎಂದು ಹೇಳುವುದಿಲ್ಲ. ದೇವರಿಗೆ ಸೇವೆ ಕೊಡಬೇಕು ಎಂಬ ಸಂಕಲ್ಪ ಇತ್ತು. ದೇವರಿಗೆ ಸಲ್ಲಿಸಿದ ಕಾಣಿಕೆಯನ್ನು ಹೇಳಿಕೊಳ್ಳಲು ಇಷ್ಟವಿಲ್ಲ. ಭಾರತವನ್ನು ಪ್ರತಿನಿಧಿಸಬೇಕು ಮತ್ತು ವಿಶ್ವಕಪ್ ಗೆಲ್ಲಬೇಕು ಎಂಬುದು ಎಲ್ಲಾ ಕ್ರಿಕೆಟ್ ಪ್ರೇಮಿಗಳ ಕನಸು ಆಗಿದೆ. ಆ ಒಂದು ಕನಸು ಸಾಕಾರಗೊಂಡಿದೆ ಎಂಬ ಖುಷಿ ಇದೆ. ಇಂತಹ ಹಲವಾರು ಕನಸುಗಳನ್ನು ಕಂಡು ಮುಂದೆ ಸಾಗಬೇಕಾಗಿದೆ ಎಂದು ಅವರು ತಿಳಿಸಿದರು.
ಟಿ20 ವಿಶ್ವಕಪ್ ಗೆಲುವಿಗೆ ಕಾರಣಿಕರ್ತರಾದ ಸೂರ್ಯ ಕುಮಾರ್ ಯಾದವ್ ಅವರನ್ನು ಕಾಪು ಶಾಸಕ ಹಾಗೂ ಕಾಪು ಹೊಸಮಾರಿಗುಡಿ ದೈವಸ್ಥಾನದ ಅಭಿವೃದ್ಧಿ ಸಮಿತಿಯ ಕಾರ್ಯಾಧ್ಯಕ್ಷ ಗುರ್ಮೆ ಸುರೇಶ್ ಶೆಟ್ಟಿ ಅಭಿನಂದಿಸಿದರು.