ಮಂಗಳೂರು: ನಮ್ಮ ದೇಶವು ಸೂಪರ್‌ ಪವರ್‌ಆಗಬೇಕು. ಆದರೆ ಅದು, ಸೇನಾ ಸಾಮರ್ಥ್ಯದಲ್ಲಿ ಅಲ್ಲ. ಅದರ ಬದಲು ಜ್ಞಾನಶಕ್ತಿಯಲ್ಲಿ ಸೂಪರ್‌ ಪವರ್ ಆಗಿ ಹೊರಹೊಮ್ಮಬೇಕು ಎಂದು ಮೈಸೂರಿನ ರಾಮಕೃಷ್ಣ ಮಠದ ಟ್ರಸ್ಟಿ ಮತ್ತು ಅಧ್ಯಕ್ಷ ಸ್ವಾಮಿ ಮುಕ್ತಿದಾನಂದಜಿ ಹೇಳಿದರು.

ಇಲ್ಲಿನ ರಾಮಕೃಷ್ಣ ಮಿಷನ್ ಆಶ್ರಯದಲ್ಲಿ ಮಂಗಳಾದೇವಿಯ ರಾಮಕೃಷ್ಣ ಮಠದಲ್ಲಿ ಗುರುವಾರ ಆಯೋಜಿಸಿದ್ದ ರಾಷ್ಟ್ರೀಯ ಯುವ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಸಾಮಾಜಿಕ‌ ಸಾಮರಸ್ಯ ಕಾಪಾಡುವುದನ್ನು, ಜಗತ್ತಿನಲ್ಲಿ ಎಲ್ಲರೂ ಒಟ್ಟಾಗಿ ಶಾಂತಿ‌ ಸೌಹಾರ್ದದಿಂದ ಹೇಗೆ ಬದುಕಬೇಕು ಎಂಬುದನ್ನೇ ನಾವು ಇನ್ನೂ ಕಲಿತಿಲ್ಲ. ಜಗಳ, ಸ್ಪರ್ಧೆ, ಯುದ್ಧ… ಹೀಗೆ ಮನುಷ್ಯ ಜೀವನವು ವಿಕ್ಷಿಪ್ತಗಳಿಂದ ಹರಡಿ ಹಂಚಿಹೋಗಿದೆ. ಯುವಜನರ ಮನಸ್ಸುಗಳು ಮನರಂಜನೆಗಳಲ್ಲಿ ತಲ್ಲೀನವಾಗಿದೆ.‌ ಬದುಕಿನ ಒಳಮರ್ಮ‌ ಹಾಗೂ ಅದರ ಅರ್ಥವನ್ನು ತಿಳಿದು ಅದಕ್ಕೆ ಹೊಸ ದಿಸೆ ಕೊಡುವ ಅವಶ್ಯಕತೆ ಇದೆ. ಇದಕ್ಕಾಗಿ ಸ್ವಾಮಿ ವಿವೇಕಾನಂದರ ಜೀವನ ಸಂದೇಶವನ್ನು ಪಾಲಿಸಬೇಕು’ ಎಂದರು.

ಸಂಸದ ಕ್ಯಾ.ಬ್ರಿಜೇಶ್‌ ಚೌಟ, ಶ್ರೇಷ್ಠ ಸಂಸ್ಕೃತಿಯ ವಾರಸುದಾರರಾದ ನಾವು ಅದರ ಸಾಮರ್ಥ್ಯ ಅರಿತುಕೊಂಡರೆ ಮುನುಕುಲಕ್ಕೆ ದಾರಿದೀಪ ಆಗಬಲ್ಲೆವು. ಈ ನಿಟ್ಟಿನಲ್ಲಿ ನಮಗೆ ವಿವೇಕಾನಂದರಿಗಿಂತ ದೊಡ್ಡ ಪ್ರೇರಣೆ ಬೇರೊಂದಿಲ್ಲ ಎಂದರು.

ಗದಗ ಮತ್ತು ವಿಜಯಪುರ ರಾಮಕೃಷ್ಣ ವಿವೇಕಾನಂದ ಆಶ್ರಮಗಳ ಅಧ್ಯಕ್ಷ ಸ್ವಾಮಿ ನಿರ್ಭಯಾನಂದ ಸರಸ್ವತಿ, ‘ಭಾರತವು ಜಗತ್ತಿನ ಯಾವುದೇ ಸಮಸ್ಯೆಗಳಿಗೆ ಬಿಡಿ ಬಿಡಿಯಾದ ಪರಿಹಾರಗಳನ್ನು ಹುಡುಕುವುದಿಲ್ಲ. ಅಧ್ಯಾತ್ಮದಲ್ಲಿ ಎಲ್ಲದಕ್ಕೂ ಪರಿಹಾರವಿದೆ’ ಎಂದರು.

ರಾಮಕೃಷ್ಣ ಮಿಷನ್‌ನ ಕಾರ್ಯದರ್ಶಿ ಸ್ವಾಮಿ ಜಿತಕಾಮಾನಂದಜಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕ್ಯಾ.ಗಣೇಶ ಕಾರ್ಣಿಕ್‌ ಸ್ವಾಗತಿಸಿದರು. ರಂಜನ್ ಬೆಳ್ಳರ್ಪಾಡಿ ಧನ್ಯವಾದ ಸಲ್ಲಿಸಿದರು.

ಸ್ವಾಮಿ ನಿರ್ಭಯಾನಂದ ಸರಸ್ವತಿ, ಬೆಂಗಳೂರಿನ ಯೂತ್ ಫಾರ್ ಪರಿವರ್ತನ್ ಸಂಸ್ಥೆಯ ಸಂಸ್ಥಾಪಕ ಮತ್ತು ಅಧ್ಯಕ್ಷ ಅಮಿತ್ ಅಮರನಾಥ್‌ ಹಾಗೂ ಮಂಗಳೂರಿನ ಅನಿರ್ವೇದ ರಿಸೋರ್ಸ್ ಸೆಂಟರ್‌ನ ಕೆ.ಟಿ.ಶ್ವೇತಾ ಗೋಷ್ಠಿಗಳನ್ನು ನಡೆಸಿಕೊಟ್ಟರು.

ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುವವರಿಗಾಗಿ ರಾಮಕೃಷ್ಣ ಮಠದ ಪ್ರಾಂಗಣದಲ್ಲಿ ಆರಂಭಿಸಿರುವ ಶಾರದಾ ದೇವಿ ಅಧ್ಯಯನ ಕೇಂದ್ರವನ್ನು ಗುರುವಾರ ಲೋಕಾರ್ಪಣೆಗೊಳಿಸಲಾಯಿತು.

ಈ ಕೇಂದ್ರದಲ್ಲಿ ಏಕಕಾಲದಲ್ಲಿ 100 ಮಂದಿ ಕುಳಿತು ಅಧ್ಯಯನ ನಡೆಸುವ ವ್ಯವಸ್ಥೆ ಇದೆ. ಬೆಳಿಗ್ಗೆ 8ರಿಂದ ರಾತ್ರಿ 8ಗಂಟೆ ವರೆಗೆ ವಿದ್ಯಾರ್ಥಿಗಳು ಈ ಸೌಕರ್ಯ ಬಳಸಬಹುದು. ಇದರ ಬಳಕೆಗೆ ದಿನಕ್ಕೆ ₹ 10 ಶುಲ್ಕ ವಿಧಿಸಲಾಗುತ್ತದೆ. ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಕಲ್ಪಿಸುವ ಚಿಂತನೆ ಇದೆ. ಇಲ್ಲಿ ಸ್ಪರ್ಧಾತ್ಮಕ ಪರೀಕ್ಷೆಯ ತಯಾರಿಗೆ ಅಗತ್ಯವಿರುವ ‍ಪುಸ್ತಕಗಳನ್ನು ತರಿಸಲಿದ್ದೇವೆ. ಆಸಕ್ತ ವಿದ್ಯಾರ್ಥಿಗಳಿಗೆ ಪರಿಣಿತರಿಂದ ತರಬೇತಿ ನೀಡುವ ಚಿಂತನೆಯೂ ಇದೆ. ಕರಾವಳಿಯ ವಿದ್ಯಾರ್ಥಿಗಳು ಐಎಎಸ್‌ ಐಪಿಎಸ್ ಕೆಪಿಎಸ್‌ ಬ್ಯಾಂಕಿಂಗ್ ಮೊದಲಾದ ಕ್ಷೇತ್ರಗಳ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸುಗಳಿಸುವುದಕ್ಕೆ ನೆರವಾಗುವುದು ನಮ್ಮ ಉದ್ದೇಶ ಎಂದು ಮಠದ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.