ಬೆಂಗಳೂರು : 44 ಮಂದಿ ನಿಗಮ ಮಂಡಳಿಗಳ ಅಧ್ಯಕ್ಷರ ಪಟ್ಟಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅನುಮೋದಿಸಿದ್ದಾರೆ. ಈ ಪಟ್ಟಿ ಆಯಾ ಇಲಾಖೆಗಳಿಗೆ ರವಾನೆಯಾಗಿದೆ. ಗುರುವಾರ ಆಯಾ ಇಲಾಖೆಗಳಿಂದ ಪ್ರತಿಯೊಬ್ಬರಿಗೂ ವೈಯುಕ್ತಿಕವಾಗಿ ನೇಮಕ ಆದೇಶ ರವಾನೆಯಾಗಲಿದೆ.

ಗಡಿ ಪ್ರದೇಶಗಳ ಅಭಿವೃದ್ಧಿ ಪ್ರಾಧಿಕಾರದ ನೂತನ ಅಧ್ಯಕ್ಷರಾಗಿ
ಸೋಮಣ್ಣ ಬೇವಿನಮರದ ಅವರನ್ನು ನೇಮಕ ಮಾಡಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.

ತಿಂಗಳ ಹಿಂದಷ್ಟೇ ಶಾಸಕರಿಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡಿ ಆದೇಶ ಹೊರಡಿಸಿದ್ದ ಕರ್ನಾಟಕ ಕಾಂಗ್ರೆಸ್‌ ಇದೀಗ ಕಾರ್ಯಕರ್ತರಿಗೂ ಶುಭ ಸುದ್ದಿ ನೀಡಿದೆ. ಪಕ್ಷದ 44 ಮಂದಿ ಕಾರ್ಯಕರ್ತರಿಗೆ ನಿಗಮ ಮಂಡಳಿ ಅಧ್ಯಕ್ಷ ಹುದ್ದೆ ನೀಡಿ ಆದೇಶ ಹೊರಡಿಸಿದೆ. ಇದರೊಂದಿಗೆ ಬಹಳಷ್ಟು ಸಮಯದಿಂದ ನನೆಗುದಿಗೆ ಬಿದ್ದಿದ್ದ ನಿಗಮ ಮಂಡಳಿ ನೇಮಕ ಪ್ರಹಸನಕ್ಕೆ ಕೊನೆಗೂ ತೆರೆಬಿದ್ದಂತಾಗಿದೆ. ಶಾಸಕರಿಗೆ ಹಾಗೂ ಕಾರ್ಯಕರ್ತರನ್ನು ನಿಗಮ ಮಂಡಳಿಗೆ ನೇಮಕ ಮಾಡುವ ವಿಚಾರವಾಗಿ ಬಹಳಷ್ಟು ಸಮಸ್ಯೆಗಳನ್ನು ಕಾಂಗ್ರೆಸ್ ಸರ್ಕಾರ ಎದುರಿಸಿತ್ತು.

ಎನ್.ಎ.ಹ್ಯಾರಿಸ್, ಕೆಎಂ ಶಿವಲಿಂಗೇಗೌಡ, ವಿನಯ್ ಕುಲಕರ್ಣಿ ಸೇರಿದಂತೆ ಒಟ್ಟು 32 ಶಾಸಕರಿಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡಿ ಜನವರಿ 26ರಂದು ರಾಜ್ಯ ಸರ್ಕಾರ ನೇಮಕ ಮಾಡಿತ್ತು. ಒಂದು ಹಂತದಲ್ಲಿ ನಿಗಮ ಮಂಡಳಿ ನೇಮಕ ವಿಚಾರವಾಗಿ ಹೈಕಮಾಂಡ್ ಜತೆಗೂ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾ‌ರ್ ಸಂಘರ್ಷಕ್ಕೆ ಇಳಿದಿದ್ದರು. ಅಂತಿಮವಾಗಿ ಎಲ್ಲ ಸಮಸ್ಯೆಗಳನ್ನು ಬಗೆಹರಿಸಿಕೊಂಡು ನೇಮಕ ಮಾಡುವಲ್ಲಿ ಸರ್ಕಾರ ಯಶಸ್ವಿಯಾಗಿತ್ತು. ಇದೀಗ ಕಾರ್ಯಕರ್ತರಿಗೂ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡಿ ಸಮಾಧಾನ ಪಡಿಸುವ ಯತ್ನ ಮಾಡಿದೆ.