ಕಟೀಲು ಯಕ್ಷಗಾನ ಮಂಡಳಿ ಯಕ್ಷಗಾನವನ್ನು ಹರಕೆ ಹೇಳಿಕೊಂಡು ಅದನ್ನು ತಮ್ಮ ಮನೆಯಲ್ಲಿ ಪ್ರದರ್ಶಿಸುವುದೆಂದರೆ ಭಕ್ತರಿಗೆ ಎಲ್ಲಿಲ್ಲದ ಅಭಿಮಾನ, ಸಂತಸ ಹಾಗೂ ಭಕ್ತಿಭಾವ. ಅಂದು ಸ್ವತಃ ಸಾಕ್ಷಾತ್ ಕಟೀಲು ಶ್ರೀ ದುರ್ಗಾಪರಮೇಶ್ವರಿಯೇ ತಮ್ಮ ಮನೆಗೆ ಬರುತ್ತಾಳೆ ಎನ್ನುವುದು ಯಕ್ಷಗಾನ ಹರಕೆ ನಡೆಸುವವರ ಬಲವಾದ ನಂಬಿಕೆ. ಇದೀಗ ರಾತ್ರಿ ಪೂರ್ತಿ ಯಕ್ಷಗಾನ ನಡೆಸುವ ದೇವಸ್ಥಾನದ ಆಡಳಿತ ಮಂಡಳಿ ನಿರ್ಧಾರ ಕಟೀಲು ಭಕ್ತರ ಪಾಲಿಗೆ ಅಪಾರ ಸಂತಸಕ್ಕೆ ಕಾರಣವಾಗಿದೆ.

ಕಟೀಲು :
ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ವತಿಯಿಂದ ಮಕರ ಸಂಕ್ರಮಣದ ನಂತರ ಅಂದರೆ ಜನವರಿ 14 ರಿಂದ ರಾತ್ರಿ ಇಡೀ ಯಕ್ಷಗಾನ ಪ್ರದರ್ಶನವಾಗಲಿದೆ.

ಕಟೀಲಿನ ಆರೂ ಮೇಳಗಳ ಯಕ್ಷಗಾನ ಪ್ರದರ್ಶನ ಇನ್ನು ಮುಂದೆ ರಾತ್ರಿ ಇಡೀ ನಡೆಯಲಿದೆ. ಕಳೆದ ವರ್ಷದಿಂದ ಕಾಲಮಿತಿಗೆ ಒಳಪಟ್ಟಿದ್ದ ಕಟೀಲು ಯಕ್ಷಗಾನ ಮೇಳದ ಯಕ್ಷಗಾನ ಕಳೆದ ಒಂದೂವರೆ ತಿಂಗಳಿನಿಂದ ಕಾಲಮಿತಿಗೆ ಒಳಪಟ್ಟು ಪ್ರದರ್ಶನವಾಗುತ್ತಿತ್ತು. ಆದರೆ, ಇದೀಗ ಉಚ್ಚ ನ್ಯಾಯಾಲಯದ ಆದೇಶ ಮತ್ತು ಭಕ್ತರ ಅಪೇಕ್ಷೆ ಮೇರೆಗೆ ಯಕ್ಷಗಾನವನ್ನು ರಾತ್ರಿ ಇಡೀ ಪ್ರದರ್ಶನ ಮಾಡಲು ನಿರ್ಧರಿಸಲಾಗಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ಮುಖ್ಯಸ್ಥ ಹಾಗೂ ಆನುವಂಶಿಕ ಮೊಕ್ತೇಸರ ಕೊಡೆತ್ತೂರುಗುತ್ತು ಸನತ್ ಕುಮಾರ್ ಶೆಟ್ಟಿ ಹಾಗೂ ಆನುವಂಶಿಕ ಮೊಕ್ತೇಸರ ವಾಸುದೇವ ಅಸ್ರಣ್ಣ ತಿಳಿಸಿದ್ದಾರೆ.

ಬೆಂಗಳೂರಿನ ಕೃಷ್ಣಕುಮಾರ್ ಅವರು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಾಲಯವು ಪೂರ್ಣ ರಾತ್ರಿ ಯಕ್ಷಗಾನ ಪ್ರದರ್ಶನಕ್ಕೆ ಯಾವುದೇ ತೊಂದರೆ ಇಲ್ಲ. ಆದರೆ, ನಿಯಮ ಉಲ್ಲಂಘನೆ ಆಗದಂತೆ ನೋಡಿಕೊಳ್ಳಬೇಕು ಎಂದಿತ್ತು. ಶಬ್ದ ಮಾಲಿನ್ಯ ಉಂಟಾಗಲಾರದು, ಧ್ವನಿ ವರ್ಧಕ ಬಳಕೆಯಿಂದ ಹಳ್ಳಿಗಳಲ್ಲಿ ಯಾವುದೇ ಸಮಸ್ಯೆ ಉಂಟಾಗಲಾರದು. ನಗರದಲ್ಲಿ ಶಬ್ದಮಿತಿ ನೋಡಿಕೊಳ್ಳಲಾಗುವುದು. ಕಟೀಲು ಯಕ್ಷಗಾನ ಮಂಡಳಿ ಹರಕೆ ಯಕ್ಷಗಾನ ನಡೆಸುವುದರಿಂದ ಯಾವುದೇ ತೊಂದರೆ ಆಗುವುದಿಲ್ಲ. ಯಕ್ಷಗಾನ ಹರಕೆ ರೂಪದಲ್ಲಿ ನಡೆಯುವಂತದ್ದು. ಇಲ್ಲಿ ಮನರಂಜನೆಯ ವಿಚಾರ ಗೌಣ. ಯಕ್ಷಗಾನ ಪ್ರದರ್ಶನಕ್ಕೆ ಎಷ್ಟು ಪ್ರೇಕ್ಷಕರು ಇರುತ್ತಾರೆ ಎಂಬುದು ಇಲ್ಲಿ ಮುಖ್ಯವಲ್ಲ. ಪರಂಪರಾನುಗತವಾಗಿ ನಡೆದುಕೊಂಡು ಬಂದಂತೆ ಹರಕೆ ಹೊತ್ತ ಭಕ್ತರು ರಾತ್ರಿ ಪೂರ್ತಿ ಯಕ್ಷಗಾನ ನಡೆಸಿ ದೇವಿಯ ಕೃಪೆಗೆ ಪಾತ್ರರಾಗುವುದು ಮುಖ್ಯ. ಭಕ್ತರಿಂದ ಬೇಡಿಕೆ ಬಂದಿದ್ದರಿಂದ ಮತ್ತು ರಾತ್ರಿಯಿಂದ ಬೆಳಗಿನವರೆಗೆ ಯಕ್ಷಗಾನ ಪ್ರದರ್ಶಿಸಲು ಇದ್ದ ಅಡೆತಡೆ ನಿವಾರಣೆ ಆಗಿರುವುದರಿಂದ ಮೊದಲಿನಂತೆ ಕಟೀಲು ಆರೂ ಮೇಳಗಳ ಯಕ್ಷಗಾನವನ್ನು ರಾತ್ರಿ ಪೂರ್ತಿ ನಡೆಸಲು ತೀರ್ಮಾನಿಸಿರುವುದಾಗಿ ಸನತ್ ಕುಮಾರ್ ಶೆಟ್ಟಿ ಅವರು ಪ್ರತಿಕ್ರಿಯೆ ನೀಡಿದ್ದಾರೆ.

ಭವ್ಯ ಹಿನ್ನೆಲೆ :
ಕಟೀಲು ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಪ್ರಿಯೆ. ಭಕ್ತರು ಇದನ್ನು ಅತ್ಯಂತ ಪ್ರೀತಿ-ಗೌರವದಿಂದ ದೇವಿಗೆ ಹರಕೆ ರೂಪದಲ್ಲಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಭಕ್ತಿಯಿಂದ ಹರಕೆ ಸಲ್ಲಿಸುತ್ತಾರೆ. ಭಕ್ತರು ತಮ್ಮ ಜೀವನದಲ್ಲಿ ಆಗಾಗ ಎದುರಾಗುವ ಕಷ್ಟದ ಸಂದರ್ಭದಲ್ಲೂ ದೇವಿಗೆ ಅದನ್ನು ಪರಿಹರಿಸುವಂತೆ ಕೋರಿ ಪ್ರಾರ್ಥಿಸಿ ಹರಕೆ ನೀಡುತ್ತಾರೆ. ನೂರಾರು ವರ್ಷಗಳ ಭವ್ಯ ಇತಿಹಾಸ ಹೊಂದಿರುವ ಕಟೀಲು ಯಕ್ಷಗಾನ ಮಂಡಳಿ ಮೊದಲಿನಿಂದಲೂ ರಾತ್ರಿಯಿಡೀ ಯಕ್ಷಗಾನ ಪ್ರದರ್ಶನ ನಡೆಸಿಕೊಂಡು ಬರುತ್ತಿತ್ತು. ಅದರಲ್ಲೂ ಶ್ರೀದೇವಿ ಮಹಾತ್ಮೆ, ಕಟೀಲು ಕ್ಷೇತ್ರ ಮಹಾತ್ಮೆ, ಶ್ರೀ ದೇವಿ ಲಲಿತೋಪಖ್ಯಾನ ಮುಂತಾದ ಯಕ್ಷಗಾನಗಳನ್ನು ಇಡೀ ರಾತ್ರಿ ನೋಡಿ ಆಸ್ವಾದಿಸುವುದು ಮರೆಯಲಾರದ ಅನುಭವ. ಆದರೆ, ಕೆಲ ಪ್ರಸಿದ್ಧ ಮೇಳಗಳು ಯಕ್ಷಗಾನವನ್ನು ಕಾಲಮಿತಿಗೆ ಒಳಪಡಿಸಿದವು. ಆದರೆ, ಕಟೀಲು ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಕಾಲಮಿತಿಗೆ ಒಳಪಡಿಸದೆ ರಾತ್ರಿ ಪೂರ್ತಿ ಪ್ರದರ್ಶನ ನೀಡುತ್ತಿತ್ತು. ಆದರೆ, ಜಿಲ್ಲಾಡಳಿತ ಕೋವಿಡ್ ಸಂದರ್ಭದಲ್ಲಿ ಶಬ್ದ ಮಾಲಿನ್ಯ ನಿಯಂತ್ರಣ ನಿಯಮಗಳ ಪ್ರಕಾರ ರಾತ್ರಿ 12:30 ನಂತರ ಹೆಚ್ಚು ಶಬ್ದಗಳನ್ನು ನಿಷೇಧಿಸಿ ಆದೇಶ ಹೊರಡಿಸಿದ್ದರಿಂದ ಯಕ್ಷಗಾನ ಪ್ರದರ್ಶನದ ಮೇಲೆ ಪರಿಣಾಮ ಬೀರಿತು.

ಜಿಲ್ಲಾಡಳಿತ ಯಕ್ಷಗಾನ ಪ್ರದರ್ಶನದ ಅವಧಿಯನ್ನು ಸಂಜೆ 5 ರಿಂದ ಮಧ್ಯರಾತ್ರಿ 12.30 ಕ್ಕೆ ಸೀಮಿತಗೊಳಿಸುವಂತೆ 2022ರ ನವೆಂಬರ್ 15 ರಂದು ಆದೇಶ ಹೊರಡಿಸಿತು. ಯಕ್ಷಗಾನ ಪ್ರದರ್ಶನದ ಧ್ವನಿಯ ಶಬ್ದ ಮಾಲಿನ್ಯ ನಿಯಂತ್ರಣ ನಿಯಮಗಳ ನಿಗದಿತ ಮಿತಿಗಿಂತ ಹೆಚ್ಚಿಗೆ ಇರುತ್ತದೆ ಎಂಬ ಕಾರಣಕ್ಕೆ ಆಗಿನ ಜಿಲ್ಲಾಧಿಕಾರಿಗಳು ರಾತ್ರಿ 12:30 ರ ಬಳಿಕ ಯಕ್ಷಗಾನ ಪ್ರದರ್ಶನ ನಿರ್ಬಂಧಿಸಿದ್ದರು. ಈ ಬಗ್ಗೆ ಕಟೀಲು ದೇವಸ್ಥಾನದ ಭಕ್ತರೊಬ್ಬರು ಹೈಕೋರ್ಟ್ ಮೊರೆ ಹೋಗಿದ್ದರು. ಇತ್ತೀಚಿಗೆ ಹೈಕೋರ್ಟ್ ರಾತ್ರಿ ಇಡೀ ಯಕ್ಷಗಾನ ಪ್ರದರ್ಶನಕ್ಕೆ ಪೂರಕವಾಗಿ ತೀರ್ಪು ನೀಡಿತು.

ಯಕ್ಷಗಾನವನ್ನು ಪ್ರದರ್ಶನವನ್ನು ಕೋವಿಡ್ ಮೊದಲು ಇದ್ದಂತೆ ರಾತ್ರಿಪೂರ್ತಿ ಹಮ್ಮಿಕೊಳ್ಳಲು ಜಿಲ್ಲಾಧಿಕಾರಿ ಅನುಮತಿ ನೀಡಬಹುದು, ನಿಯಮ ಉಲ್ಲಂಘನೆ ಆಗದಂತೆ ಜಿಲ್ಲಾಧಿಕಾರಿ ಸೂಕ್ತ ಕ್ರಮ ಕೈಗೊಳ್ಳಬಹುದು ಎಂದು ಹೈಕೋರ್ಟ್ ನ್ಯಾಯಮೂರ್ತಿ ಬಿ.ನಾಗಪ್ರಸನ್ನ ತೀರ್ಪು ನೀಡಿದ್ದರು.

ಮಹತ್ವದ ನಿರ್ಧಾರ :
ನ್ಯಾಯಾಲಯ ರಾತ್ರಿ ಪೂರ್ತಿ ಯಕ್ಷಗಾನ ನಡೆಸಬಹುದು ಎಂದು ಆದೇಶ ನೀಡಿದ ನಂತರ ಕಟೀಲು ದೇವಸ್ಥಾನದ ಆಡಳಿತ ಮಂಡಳಿ ಮೇಲೆ ಭಕ್ತರ ಒತ್ತಡ ಹೆಚ್ಚೆತೊಡಗಿತು.
ಕೊನೆಗೂ ದೇವಸ್ಥಾನದ ಆಡಳಿತ ಮಂಡಳಿ ಈಗ ಮಹತ್ವದ ನಿರ್ಧಾರ ತೆಗೆದುಕೊಳ್ಳುವಲ್ಲಿ ಹೆಜ್ಜೆ ಇಟ್ಟಿತು.

ರಾತ್ರಿಪೂರ್ತಿ ಯಕ್ಷಗಾನ ಪ್ರದರ್ಶನಕ್ಕೆ ಹಸಿರು ನಿಶಾನೆ ಸಿಕ್ಕಿದ್ದರಿಂದ ಭಕ್ತರಲ್ಲಿ ಸಂತಸ ಮೂಡಿದೆ. ಕಟೀಲು ದೇವಸ್ಥಾನದ ಆಡಳಿತ ಮಂಡಳಿಗೆ ರಾತ್ರಿಪೂರ್ತಿ ಯಕ್ಷಗಾನ ಪ್ರದರ್ಶನ ಮಾಡುವಂತೆ ಭಕ್ತರು ಒತ್ತಾಯಿಸಿದ್ದು ಇದೀಗ ಆಡಳಿತ ಮಂಡಳಿ ಅತ್ಯಂತ ನಿರ್ಣಾಯಕ ನಿರ್ಧಾರ ತೆಗೆದುಕೊಂಡಿದೆ. ಅದರಂತೆ ಇನ್ನು ಮುಂದೆ ಮೊದಲಿನಂತೆ ರಾತ್ರಿ ಇಡೀ ಯಕ್ಷಗಾನ ಪ್ರದರ್ಶನವಾಗಲಿದೆ.