
ಸಂಪಾಜೆ : ಜನಪ್ರಿಯ ಉಪನ್ಯಾಸಕರಾಗಿ ವಿದ್ಯಾರ್ಥಿಗಳ ಪ್ರೀತಿಗೆ ಪಾತ್ರರಾಗಿದ್ದ ಟಿ.ಕೆ.ಜಿ.ಮಾಸ್ಟರ್ ( ತಲಂಜೇರಿ ಗೋಪಾಲಕೃಷ್ಣ ಭಟ್)ಸೋಮವಾರ ನಿಧನರಾದರು.
ನನಗೆ ಹೈಸ್ಕೂಲಿನಲ್ಲಿ ಗಣಿತದ ಅಧ್ಯಾಪಕರಾಗಿ,ಪಿಯುಸಿ ಯಲ್ಲಿ ರಾಜ್ಯಶಾಸ್ತ್ರ ಉಪನ್ಯಾಸಕರಾಗಿ ಇದ್ದ ಸದಭಿರುಚಿಯ ನನ್ನ ಮೆಚ್ಚಿನ ಟಿ.ಕೆ.ಜಿ.ಮಾಸ್ಟರ್ ( ತಲಂಜೇರಿ ಗೋಪಾಲಕೃಷ್ಣ ಭಟ್) ಇನ್ನಿಲ ಎನ್ನುವ ನೋವು ಅರಗಿಸಲು ಕಷ್ಟ. ಸಂಪಾಜೆ ಪದವಿ ಪೂರ್ವ ಕಾಲೇಜಿನ ಎಲ್ಲಾ ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಉಪನ್ಯಾಸಕರಾಗಿ, ಉತ್ತಮ ಕಾರ್ಯಕ್ರಮ ನಿರೂಪಕರಾಗಿ,ಓರ್ವ ಜಿಜ್ಙಾಸುವಾಗಿ ಕಾಣಿಸಿಕೊಂಡ ಅಧ್ಯಾಪಕರ ಅಗಲುವಿಕೆಯ ನೋವು.ಇನ್ನೊಂದು ಜನ್ಮ ಇದ್ದರೆ ನಿಮ್ಮ ಶಿಷ್ಯನಾಗಿ ಬರುವಾಶೆ ಗುರುಗಳೇ ,ಹೋಗಿ ಬನ್ನಿ . ಓಂ ಶಾಂತಿ ಎಂದು ಅವರ ನೇರ ಶಿಷ್ಯರು ಹಾಗೂ ಹೆಸರಾಂತ ಯಕ್ಷಗಾನ ಕಲಾವಿದರು ಅಗಿರುವ ಜಯಾನಂದ ಸಂಪಾಜೆ ಕಂಬನಿ ಮಿಡಿದಿದ್ದಾರೆ.
ಟಿಕೆಜಿ ಸರ್ ನಿವೃತ್ತಿ ಹೊಂದಿದಾಗ ಅವರ ಬಗ್ಗೆ ಶಿಷ್ಯರೊಬ್ಬರು ಬರೆದ ಸುಂದರ ಬರಹ :
ಸಂಪಾಜೆ ಕಾಲೇಜಿನಲ್ಲಿ ರಾಜ್ಯಶಾಸ್ತ್ರ ಬೋಧಿಸುತ್ತಿದ್ದ ಟಿಕೆಜಿ ಸರ್ ಈಗ ಶಿಕ್ಷಕ ವೃತ್ತಿಯಿಂದ ನಿವೃತ್ತರಾಗಿದ್ದಾರೆ. ನಿವೃತ್ತರಾದ ಹಿನ್ನೆಲೆಯಲ್ಲಿ ಅವರ ಬಗ್ಗೆ ಬರೆದ ಕಿರು ಅಭಿನಂದನಾ ಬರಹ.ಪಾಠಕ್ಕೆ ತೊಡಗಿದರೆ ಉತ್ತಮ ಶಿಕ್ಷಕ, ಕಥೆ ಹೇಳಿದರೆ ಕಥೆಗಾರ, ಕವನ ವಾಚಿಸಿದರೆ ಉತ್ತಮ ಕವಿ, ಲೇಖನ ಪ್ರಕಟಗೊಂಡರೆ ಲೇಖಕ, ಆಕಾಶವಾಣಿಯಲ್ಲಿ ಚಿಂತನ ಪ್ರಸಾರವಾದರೆ ಚಿಂತಕ, ರಾಜ್ಯ ಶಾಸ್ತ್ರ ಪಾಠ ಮಾಡಿದ್ರೂ ವಿಜ್ಞಾನ ಬೋಧಕ, ವಿದ್ಯಾರ್ಥಿಗಳಿಗೆ ಅತ್ಯುತ್ತಮ ಮಾರ್ಗದರ್ಶಕ.
ಇದು ಟಿಕೆಜಿ ಸರ್ ಬಗ್ಗೆ ನೀಡುವ ಸಂಕ್ಷಿಪ್ತ ವಿವರಣೆ. ತಲೆಂಜೇರಿ ಕಿಜೇಕ್ಕಾರು ಗೋಪಾಲಕೃಷ್ಣ ಭಟ್ ಎಂಬ ನಾಮಧೇಯವಿದ್ದರೂ ಇವರು ಟಿಕೆಜಿ ಭಟ್ ಎಂದೇ ಹೆಸರುವಾಸಿ. 1979 ಅಕ್ಟೋಬರ್ 10ರಂದು ಸಂಪಾಜೆಯ ಶಿಕ್ಷಣ ಪರಿಸರಕ್ಕೆ ಬಂದ ಇವರು 37 ವರ್ಷಗಳ ಕಾಲ ಶಿಕ್ಷಕರಾಗಿ ಇದೀಗ ನಿವೃತ್ತರಾಗಿದ್ದಾರೆ.
ಬಿಎಸ್ ಸಿ ಓದಿದ ಕಾರಣ ಆರಂಭದಲ್ಲಿ ಪ್ರೌಢ ಶಾಲೆಯಲ್ಲಿ ಟಿಕೆಜಿ ವಿಜ್ಞಾನ ಶಿಕ್ಷಕರಾಗಿದ್ದರು. ಈ ವೇಳೆ ರಾಜ್ಯಶಾಸ್ತ್ರದಲ್ಲೂ ಆಸಕ್ತಿ ಇದ್ದ ಕಾರಣ ಮುಕ್ತ ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದು ಕಾಲೇಜಿನಲ್ಲಿ ರಾಜ್ಯಶಾಸ್ತ್ರ ಶಿಕ್ಷಕರಾಗಿ ನೇಮಕಗೊಂಡರು.
ರಾಜಕೀಯ ವಿಚಾರಗಳನ್ನು ದೊಡ್ಡವರಿಗೆ ಪಾಠ ಮಾಡುವುದು ಸುಲಭ ನೋಡಿ. ಆದರೆ ಆಗತಾನೆ ಹೈಸ್ಕೂಲು ಓದಿ ಬಂದ ವಿದ್ಯಾರ್ಥಿಗಳಿಗೆ ಕನ್ನಡದಲ್ಲಿ
ತತ್ವಜ್ಞಾನಿಗಳ ಸಿದ್ಧಾಂತ, ದೇಶ, ಸರ್ಕಾರ, ಸಂವಿಧಾನ… ಇತ್ಯಾದಿಗಳ ಬಗ್ಗೆ ಅರ್ಥವಾಗುವಂತೆ ಹೇಳಿ ಇಂಗ್ಲಿಷ್ ನಲ್ಲಿ ನೋಟ್ಸ್ ಕೊಡುವುದು ಬಹಳ ಕಷ್ಟ. ಆದರೆ ನಮ್ಮ ಸರ್ ಇವುಗಳನ್ನು ಸರಳಗೊಳಿಸಿ, ನಮ್ಮ ಲೆವೆಲ್ ಗೆ ಪಾಠವನ್ನು ಇಳಿಸಿ ಬೋಧಿಸುತ್ತಿದ್ದರು.ಸಾಧಾರಣವಾಗಿ ಶಿಕ್ಷಕರು ಸಿಲೆಬಸ್ ಹೇಗಿರುತ್ತದೋ ಹಾಗೇ ಪಾಠ ಮಾಡುತ್ತಾರೆ. ಆದರೆ ಟಿಕೆಜಿ ಸರ್ ಹಾಗಲ್ಲ. ಸರ್ಕಾರ ನೀಡಿದ ಸಿಲೆಬಸ್ ನ್ನೇ ಇವರು ನಮಗಾಗಿ ಸಂಪೂರ್ಣವಾಗಿ ಬದಲಾಯಿಸುತ್ತಿದ್ದರು. ಮಧ್ಯಭಾಗದಿಂದ ಪಾಠವನ್ನು ಆರಂಭಿಸಿ ಆ ಪಠ್ಯವನ್ನು ನಿಗದಿತ ಸಮಯದ ಒಳಗಡೆ ಮುಗಿಸುತ್ತಿದ್ದರು.
ಹೇಗೆಂದರೆ ನಾವು ಪಿಯು ಓದುತ್ತಿದ್ದಾಗ(2005-06) ಹೊಸ ಸಿಲೆಬಸ್ ಬಂದಿತ್ತು. ದ್ವಿತೀಯ ಪಿಯುಸಿ ಆರಂಭದಲ್ಲಿ ಪ್ಲೇಟೋ, ಅರಿಸ್ಟಾಟಲ್, ಕೌಟಿಲ್ಯ, ಜೆಎಸ್ ಮಿಲ್, ಕಾರ್ಲ್ ಮಾರ್ಕ್ಸ್, ಗಾಂಧೀಜಿ, ಅಂಬೇಡ್ಕರ್ ಬಗ್ಗೆ ಅನುಕ್ರಮವಾಗಿ ಸಿಲೆಬಸ್ ಇತ್ತು. ಈ ಸಿಲೆಬಸ್ ಪ್ರಕಾರ ಹೋಗದೇ ಮೊದಲು ಭಾರತದ ವ್ಯಕ್ತಿಗಳ ಬಗ್ಗೆ ಹೇಳಿ, ನಂತರ ವಿದೇಶಿ ತತ್ವಜ್ಞಾನಿಗಳ ಬಗ್ಗೆ ಪಾಠ ಮಾಡುತ್ತಿದ್ದರು. ಸಿಲೆಬಸ್ ಮಾಡಿರುವ ವ್ಯಕ್ತಿಗಳು ನಮ್ಮ ಮಕ್ಕಳು ತುಂಬ ಬುದ್ಧಿವಂತರಾಗಿದ್ದಾರೆ ಎನ್ನುವ ಕಾರಣಕ್ಕೆ ಈ ರೀತಿ ಮಾಡಿದ್ದಾರೆ. ಆದರೆ ಈ ರೀತಿ ಆರಂಭಿಸಿದರೆ ನಿಮಗೆ ಕಷ್ಟವಾಗುತ್ತದೆ. ಈ ಕಾರಣಕ್ಕೆ ಭಾರತ ವ್ಯಕ್ತಿಗಳ ಬಗ್ಗೆ ಹೇಳಿದ ನಿಮಗೆ ಈ ಸಿದ್ಧಾಂತಗಳ ಸ್ವಲ್ಪ ಸುಲಭವಾಗಿ ತಿಳಿಯುತ್ತದೆ. ನಂತರ ವಿದೇಶಿ ವ್ಯಕ್ತಿಗಳ ಬಗ್ಗೆ ಹೇಳುತ್ತೇನೆ ಎಂದು ಹೇಳಿ ಪಾಠ ಮಾಡುತ್ತಿದ್ದರು.
ಇವರು ಬರೀ ಪಾಠ ಮಾತ್ರ ಮಾಡುತ್ತಿರಲಿಲ್ಲ.
ಮೇಲೆ ತಿಳಿಸಿದ ವ್ಯಕ್ತಿಗಳ ಬಗ್ಗೆ ಪಾಠ ಮಾಡುವ ವೇಳೆ ಪಾಠಕ್ಕೆ ಹೊರತಾಗಿರುವ ಅವರ ಜೀವನ ಕಥೆಗಳನ್ನು ಹೇಳಿ ಈ ರೀತಿ ಬದಲಾಗಲು ಪ್ರೇರಣೆ ಏನು ಎನ್ನುವುದನ್ನು ವಿವರಿಸುತ್ತಿದ್ದರು. ರಾಜ್ಯಶಾಸ್ತ್ರ ಅಂದರೆ ಪಾಠದ ಮಧ್ಯೆ ಪ್ರಸ್ತುತ ರಾಜಕೀಯ ವಿಚಾರಗಳು ಬರುವುದು ಸಾಮಾನ್ಯ. ಈ ವೇಳೆ ರಾಜಕೀಯ ವಿಚಾರಗಳನ್ನು ವಿವಾದಾತ್ಮಕ ವಾಗಿ ಹೇಳದೇ ವಿನೋದಾತ್ಮಕವಾಗಿ ವಿದ್ಯಾರ್ಥಿಗಳಿಗೆ ವಿವರಿಸುತ್ತಿದ್ದರು. ಅಷ್ಟೇ ಅಲ್ಲದೇ ಯಾವುದೇ ವಿಷಯನ್ನು ಬೋಧನೆ ಮಾಡುವ ವೇಳೆ ಆ ಪಠ್ಯಕ್ಕೆ ಸಂಬಂಧಿಸಿದ ಸಿಲೆಬಸ್ ನಲ್ಲಿ ಇಲ್ಲದ ವಿಚಾರಗಳನ್ನು ವಿವರಿಸುತ್ತಿದ್ದರು.ಫಸ್ಟ್ ಪಿಯುಸಿಯಲ್ಲಿ ನಮ್ಮ ಕ್ಲಾಸ್ ಟೀಚರ್ ಟಿಕೆಜಿ ಸರ್ ಆಗಿದ್ರು. ಎಲ್ಲ ವಿದ್ಯಾರ್ಥಿಗಳ ಪ್ರವೇಶಾತಿ ಪೂರ್ಣಗೊಂಡ ಬಳಿಕ ಒಂದು ದಿನ ಎಲ್ಲರನ್ನು ಕ್ಲಾಸ್ ನಿಂದ ಹೊರಗೆ ಕಳುಹಿಸಿದರು. ಹೊರಗೆ ಕಳುಹಿಸಿದ್ದು ಶಿಕ್ಷೆಗೆ ಅಲ್ಲ ಮಾರಾಯ್ರೆ. ಬದಲಾಗಿ ಎಲ್ಲ ವಿದ್ಯಾರ್ಥಿಗಳನ್ನು ಎತ್ತರ ಪ್ರಕಾರವಾಗಿ ನಿಂತುಕೊಳ್ಳುವಂತೆ ಹೇಳಿದರು. ನಿಂತುಕೊಂಡ ಬಳಿಕ ಮೂರು ಮೂರು ವಿದ್ಯಾರ್ಥಿಗಳ ಗುಂಪನ್ನು ಮಾಡಿ ಇನ್ನು ಮುಂದೆ ಇದೇ ರೀತಿ ಬೆಂಚ್ ನಲ್ಲಿ ಕುಳಿತುಕೊಳ್ಳುವಂತೆ ಸೂಚಿಸಿದರು. ನಾನು ಎತ್ತರ ಇದ್ದ ಕಾರಣ ಕೊನೆಯ ಬೆಂಚ್ ನಲ್ಲಿ ಕುಳಿತುಕೊಳ್ಳಲು ಜಾಗ ಸಿಕ್ಕಿತ್ತು. ಕೊನೆಯ ಬೆಂಚ್ ನಲ್ಲಿ ಕುಳಿತರೆ ಮುಂದುಗಡೆ ಇರುವ ಶಿಕ್ಷಕರಿಗೆ ಏನು ತಿಳಿಯುದಿಲ್ಲ ಎನ್ನುವ ಭ್ರಮೆ ವಿದ್ಯಾರ್ಥಿಗಳಿಗೆ ಇದೆ. ಆದರೆ ನಮ್ಮಲ್ಲಿ ಪಾಠದ ಅವಧಿಯಲ್ಲಿ ಪಾಠ್ಯೇತರ ಚಟುವಟಿಕೆಯಲ್ಲಿ ವಿದ್ಯಾರ್ಥಿಗಳು ತೊಡಗಿದ್ದರೆ ಟಿಕೆಜಿ ಸೇರಿದಂತೆ ಇತರ ಶಿಕ್ಷಕರ ಸಿಕ್ಕಿ ಬೀಳುತ್ತಿದ್ದರು. ಈ ಕಾರಣದಿಂದ ಏನೋ ನಮ್ಮ ಬ್ಯಾಚ್ ದ್ವಿತೀಯ ಪಿಯುಸಿಯಲ್ಲಿ ಅತ್ಯುತ್ತಮ ಎನ್ನಬಹುದಾಗಿದ್ದ ಶೇ.98 ಫಲಿತಾಂಶವನ್ನು ಪಡೆದು ಸಂಪಾಜೆ ಕಾಲೇಜಿನ ಇತಿಹಾಸದಲ್ಲಿ ಹೊಸ ದಾಖಲೆ ಬರೆದಿತ್ತು. ಇದಾದ ಬಳಿಕ ನಂತರದ ವರ್ಷದಲ್ಲಿ ನೂರು ಫಲಿತಾಂಶ ದಾಖಲಿಸಿದೆ.
ಆರಂಭದ ಪೀಠಿಕೆಯಲ್ಲಿ ಹೇಳಿದಂತೆ ಸಾಹಿತ್ಯ ಕ್ಷೇತ್ರದಲ್ಲಿ ನಮ್ಮ ಸರ್ ಅವರದ್ದು ಏಕಪಾತ್ರ ಅಭಿನಯ. ಕಥೆ, ಕವನ, ಚುಟುಕ ಎಲ್ಲದರಲ್ಲೂ ಎತ್ತಿದ ಕೈ. ಸೋಮವಾರಪೇಟೆಯಲ್ಲಿ ನಡೆದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಕವಿ ಗೋಷ್ಠಿ ಯಲ್ಲಿ ಇವರು ಭಾಗವಹಿಸಿದ್ದಾರೆ. ಸ್ಥಳೀಯ ಮತ್ತು ರಾಜ್ಯದ ದಿನಪತ್ರಿಕೆ, ವಾರ ಪತ್ರಿಕೆಯಲ್ಲಿ ಕವನ, ಬರಹಗಳು ಪ್ರಕಟಗೊಂಡಿದೆ. ಅಷ್ಟೇ ಅಲ್ಲದೇ ‘ಕಾಡು ಉಳಿದರೆ ನಾಡು’, ‘ಕನ್ನಡದಲ್ಲಿ ಇಂಗ್ಲಿಷ್ ಗೀತೆಗಳು’ ಪುಸ್ತಕಗಳನ್ನು ಸಂಪಾದಿಸಿದ್ದಾರೆ. ಇದರ ಜೊತೆಗೆ ಮಡಿಕೇರಿ ಆಕಾಶವಾಣಿಯಲ್ಲಿ ಸುಮಾರು 60ಕ್ಕೂ ಹೆಚ್ಚು ಇವರ ಚಿಂತನಗಳು ಪ್ರಸಾರ ಆಗಿದೆ.
ಹಲವಾರು ಕಡೆ ವಿದ್ಯಾರ್ಥಿಗಳಿಗೆ ಕಥೆ, ಕವನ ಸ್ಪರ್ಧೆಗಳು ನಡೆಯುತ್ತಲೇ ಇರುತ್ತದೆ. ಈ ವೇಳೆ ವಿದ್ಯಾರ್ಥಿಗಳಿಗೆ ತಿಳಿಸುವುದರ ಜೊತೆಗೆ ಕಥೆ ಕವನವನ್ನು ಹೇಗೆ ಬರೆಯಬೇಕು ಎನ್ನವುದರ ಬಗ್ಗೆ ಮಾರ್ಗದರ್ಶನ ನೀಡಿ ಪ್ರೋತ್ಸಾಹ ನೀಡುತ್ತಿದ್ದರು. ಹೇಗೆಂದರೆ ಕರ್ನಾಟಕ ರಾಜ್ಯವಾಗಿ 50 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ 2006ರಲ್ಲಿ ರಾಜ್ಯ ಸುವರ್ಣ ಸಂಭ್ರಮವನ್ನು ಆಚರಿಸಿತ್ತು. ಈ ವೇಳೆ ಆಕಾಶವಾಣಿ ‘ಸುವರ್ಣ ಸಂಭ್ರಮದಲ್ಲಿ ಕನ್ನಡ ಚಿತ್ರರಂಗ’ ವಿಷಯದ ಬಗ್ಗೆ ಯುವ ಜನತೆಗೆ ರಸಪ್ರಶ್ನೆ ಆಯೋಜಿಸಿತ್ತು. ಪ್ರತಿಭಾಕಾರಂಜಿಯ ಕ್ಲಸ್ಟರ್ ಮಟ್ಟ ಮತ್ತು ಸ್ಥಳೀಯ ಗಣೇಶೋತ್ಸವದ ರಸಪ್ರಶ್ನೆಯಲ್ಲಿ ನಾನು ವಿಜೇತನಾಗಿದ್ದ ಹಿನ್ನೆಲೆಯಲ್ಲಿ ಸರ್ ನನ್ನಲ್ಲಿ ಮಡಿಕೇರಿ ಆಕಾಶವಾಣಿಯ ರಸಪ್ರಶ್ನೆಯ ಬಗ್ಗೆ ತಿಳಿಸಿ ಸ್ಪರ್ಧಿಸುವಂತೆ ಹೇಳಿದರು. ಅದಕ್ಕೆ, ಸರ್ ನಾನು ಫಿಲ್ಮ್ ನೋಡುವುದಿಲ್ಲ ನನಗೆ ಏನು ಗೊತ್ತಿಲ್ಲ ಸುಮ್ಮನೆ ಹೋಗಬೇಕಷ್ಟೇ ಎಂದಾಗ, ಏನು ಆಗುವುದಿಲ್ಲ ಅನುಭವ ಆಗುತ್ತದೆ. ಎಲ್ಲ ಪತ್ರಿಕೆಗಳು ಚಿತ್ರಗಳ ಬಗ್ಗೆ ವಿಶೇಷ ಮಾಹಿತಿ ಇರುವ ಪುರವಣಿ ತಂದಿವೆ. ಲೈಬ್ರೆರಿಯಲ್ಲಿ ಇದೆ ಓದಬಹುದು ಎಂದು ಹೇಳಿ ಉತ್ತೇಜಿಸಿದರು. ಈ ರೀತಿ ನೀಡಿದ ಪ್ರೋತ್ಸಾಹದಿಂದ ನಮ್ಮ ತಂಡಕ್ಕೆ ದ್ವಿತೀಯ ಸ್ಥಾನ ಲಭಿಸಿತ್ತು.
ಕಾಲೇಜಿನಲ್ಲಿ ಸೈನ್ಸ್ ಕ್ಲಬ್ ತೆರೆದು ವಿಜ್ಞಾನದ ಬಗ್ಗೆ ಮಾಹಿತಿ ನೀಡುವುದರ ಜೊತೆಗೆ ಕಾಲೇಜಿನಲ್ಲಿ ಗೋಡೆಯಲ್ಲಿ ವಿಜ್ಞಾನಕ್ಕೆ ಸಂಬಂಧಿಸಿದಂತೆ ಪತ್ರಿಕೆಗಳಲ್ಲಿ ಬಂದ ಸುದ್ದಿಯನ್ನು ಕತ್ತರಿಸಿ ಹಾಕುತ್ತಿದ್ದರು. ಇದರ ಜೊತೆಗೆ ಹೇಗೆ ಪ್ರಜಾಪ್ರಭುತ್ವದಲ್ಲಿ ಚುನಾವಣೆ ನಡೆಯುತ್ತದೋ ಅದೇ ರೀತಿಯ ವಿದ್ಯಾರ್ಥಿಯ ಚುನಾವಣೆಯ ಎಲ್ಲ ಪ್ರಕ್ರಿಯೆಯ ಉಸ್ತುವಾರಿಯನ್ನು ಇವರೇ ಯಶಸ್ವಿಯಾಗಿ ನಿರ್ವಹಿಸುತ್ತಿದ್ದರು.
ಟಿಕೆಜಿ ಸರ್ ಕುಟುಂಬದ ಎಂಟು ಮಂದಿ ಶಿಕ್ಷಕರಾಗಿದ್ದರಂತೆ. ಈ ಪ್ರೇರಣೆಯಿಂದ ಶಿಕ್ಷಕ ವೃತ್ತಿಗೆ ಬಂದರೂ ಇವರು ಪ್ರಶಸ್ತಿಗಳಿಂದ ದೂರ ದೂರ. ಪಾಠ ಮಾಡುವ ಸಂದರ್ಭದಲ್ಲಿ ಒಮ್ಮೆ, ಉದ್ಯೋಗಕ್ಕೆ ಅರ್ಜಿ ಹಾಕಿದಂತೆ ಪ್ರಶಸ್ತಿಗೆ ಅರ್ಜಿ ಹಾಕಿ ಸನ್ಮಾನ ಸ್ವೀಕರಿಸುವುದು ಸರಿಯಲ್ಲ. ಬೇರೆಯವರು ಗುರುತಿಸಿ ಕೊಟ್ಟರೆ ಮಾತ್ರ ಅದಕ್ಕೆ ಬೆಲೆ ಎಂದಿದ್ದರು.
ಈ ಕಾರಣಕ್ಕೋ ಏನೋ ಇದುವರೆಗೆ ಇವರಿಗೆ ಯಾವುದೇ ಪ್ರಶಸ್ತಿ ಬಂದಿಲ್ಲ. ಪ್ರಶಸ್ತಿ ಬಾರದೇ ಇದ್ದರೂ ಇವರ ಗೌರವ ಕಡಿಮೆ ಆಗಿಲ್ಲ. ಸೇವೆಯಿಂದ ನಿವೃತ್ತರಾದ ಕೂಡಲೇ ಗಂಟು ಮೂಟೆ ಪ್ಯಾಕ್ ಮಾಡುವವರೇ ಹೆಚ್ಚು ಮಂದಿ. ಆದರೆ ನಿವೃತ್ತರಾದರೂ ಈ ಶೈಕ್ಷಣಿಕ ವರ್ಷದ ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆ ಆಗಬಾರದು ಎನ್ನುವ ಕಾರಣಕ್ಕೆ ಈಗಲೂ ಕಾಲೇಜಿಗೆ ಬಂದು ಸರ್ ಪಾಠ ಮಾಡುತ್ತಿದ್ದಾರೆ.
ಪ್ರಸ್ತುತ ಮಾಣಿ ಸಮೀಪದ ಪೆರಾಜೆಯಲ್ಲಿ ಮನೆ ಮಾಡಿರುವ ಟಿಕೆಜಿ ಸರ್ ಅವರ ನಿವೃತ್ತ ಜೀವನ ಸುಖಮಯವಾಗಿರಲಿ.