ಬೆಳಗಾವಿ: ಭಾರತೀಯ ರೈಲ್ವೆಯಲ್ಲಿ ಕೊಂಕಣ ರೈಲ್ವೆಯನ್ನು ವಿಲೀನ ಮಾಡಲು ಭಾರತೀಯ ರೈಲ್ವೆ ಹೆಜ್ಜೆ ಇಟ್ಟಿರುವುದಾಗಿ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಹೇಳಿದರು.
ಬೆಳಗಾವಿಯಲ್ಲಿ ಸೋಮವಾರ ರಾತ್ರಿ ವಂದೇ ಭಾರತ್ ರೈಲನ್ನು ಸ್ವಾಗತಿಸಿ ಮಾತನಾಡಿದರು. ಮಹಾರಾಷ್ಟ್ರದಿಂದ ಕೇರಳದವರೆಗೆ ಕೊಂಕಣ ರೈಲ್ವೆ ಇದೆ. ಇದನ್ನ ಭಾರತೀಯ ರೈಲ್ವೆಯೊಂದಿಗೆ ವಿಲೀನಗೊಳಿಸುವ ಬಗ್ಗೆ ಕೇಂದ್ರ ಸರಕಾರ ಸಕಾರಾತ್ಮಕ ಹೆಜ್ಜೆ ಇಟ್ಟಿದೆ. ಕರ್ನಾಟಕದಲ್ಲಿ ಇದು ಕರಾವಳಿಯ ತೀರದಲ್ಲಿ ನೂರಾರು ಕಿಲೋಮೀಟರ್ ಕ್ರಮಿಸುತ್ತದೆ. ವಿಲೀನದ ಬಗ್ಗೆ ಕರ್ನಾಟಕ, ಕೇರಳ, ಗೋವಾಗಳೊಂದಿಗೆ ಮಾತುಕತೆ ನಡೆಸಲಾಗಿದೆ. ಮಹಾರಾಷ್ಟ್ರಕ್ಕೆ ವಿವರಿಸಿದ ನಂತರ ವಿಲೀನ ಪ್ರಕ್ರಿಯೆ ನಡೆಸಲಾಗುವುದು. ಇದರಿಂದ ಪ್ರಯಾಣಿಕರಿಗೆ ಇನ್ನೂ ಹೆಚ್ಚಿನ ಸೇವೆ ಸಿಗಲಿದೆ. ರಾಜ್ಯದ ಬಾಕಿ ಇರುವ ಹಲವು ರೈಲ್ವೆ ಯೋಜನೆಗಳನ್ನು ಹಂತ ಹಂತವಾಗಿ ಈಡೇರಿಸಲಾಗುವುದು. ಬೆಳಗಾವಿ-ಧಾರವಾಡ ನಡುವೆ ನೇರ ರೈಲ್ವೆ ಕಾಮಗಾರಿ ಮುಂದಿನ ಮೂರು ವರ್ಷಗಳೊಳಗೆ ಈಡೇರಲಿದೆ. ಮೂರು ತಿಂಗಳಲ್ಲಿ ಭೂಸ್ವಾಧೀನ ನಡೆಸಿ ರೈಲ್ವೆ ಇಲಾಖೆಗೆ ಹಸ್ತಾಂತರಿಸಲಾಗುವುದು ಎಂದು ತಿಳಿಸಿದರು. ಮಾಜಿ ಮುಖ್ಯಮಂತ್ರಿ ಹಾಗೂ ಬೆಳಗಾವಿ ಸಂಸದ ಜಗದೀಶ ಶೆಟ್ಟರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.