ಕಾರವಾರ : ಜಿಲ್ಲಾ, ಕೇಂದ್ರ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಟಾಗೋರ ಪ್ರಶಸ್ತಿ-2024-25 ನ್ನು ಪತ್ರಕರ್ತ ವಾಸುದೇವ ಗೌಡ ಅವರಿಗೆ ಪ್ರದಾನ ಮಾಡಲಾಯಿತು.
ಸಿದ್ದಾಪುರ ತಾಲೂಕಿನ ದೊಡ್ಮನೆ ಉಡಳ್ಳಿಯ ಕೃಷಿ ಕುಟುಂಬದರಾಮ ಗೌಡ ಮತ್ತು ಭಾಗೀರಥಿ ಗೌಡ ಅವರ ಪುತ್ರರಾಗಿ ಜನಿಸಿದ ವಾಸುದೇವ, ಪತ್ರಿಕೋದ್ಯಮ ವೃತ್ತಿಯನ್ನು ಆಯ್ದು ಕಷ್ಟದಲ್ಲಿ ಓದಿ, ಬೆಳೆದು ಅನನ್ಯ ಸಾಧನೆ ಮಾಡಿದ್ದಾರೆ. ಸ್ವಗ್ರಾಮದಲ್ಲೇ ಪ್ರಾಥಮಿಕ ಶಿಕ್ಷಣ ಪಡೆದು, ಹಾವೇರಿ ವಿವಿಯಲ್ಲಿ ಪತ್ರಿಕೋದ್ಯಮದಲ್ಲಿ ಎಂ.ಎ.ಪದವಿ ಪಡೆದು ಕಾಲೇಜ್ ಕಲಿಕೆಯ ಸಮಯದಲ್ಲೇ ಕೌರವ ಪತ್ರಿಕೆಯಲ್ಲಿ ಪೇಜ್ ಡಿಸೈನರ್ ಆಗಿ ವೃತ್ತಿ ಆರಂಭಿಸಿದರು.
ನೂತನ ಟಿವಿ, ಪ್ರಜಾ ವಾಣಿ, ವಿಶ್ವ ವಾಣಿ, ಈ ಟಿವಿ ಭಾರತ ಹೀಗೆ ಪತ್ರಿಕೆ, ದೃಶ್ಯ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮ ಮೂರೂ ವಿಭಾಗಗಲ್ಲಿ ಕ್ರಿಯಾಶೀಲರಾಗಿ ಸೇವೆ ಸಲ್ಲಿಸಿ ವೃತ್ತಿ ನೈಪುಣ್ಯತೆ ಪಡೆದಿರುವ ಅವರು,
ಪ್ರಸ್ತುತ ಸಂಯುಕ್ತ ಕರ್ನಾಟಕದಲ್ಲಿ ಕಳೆದ ಮೂರು ವರ್ಷಗಳಿಂದ ಜಿಲ್ಲಾ ವರದಿಗಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರ ವರದಿಗಳು ಜನ ಮೆಚ್ಚುಗೆಗೆ ಪಾತ್ರವಾಗಿವೆ. ಸರ್ಕಾರದ ಕಣ್ಣು ತೆರೆಸಿದೆ.
ಮೇದಿನಿ ಸೇರಿದಂತೆ ಅನೇಕ ಕುಗ್ರಾಮಗಳ ಬಗೆಗಿನ ವರದಿಯಿಂದ ಆ ಭಾಗಕ್ಕೆ ಮೂಲ ಸೌಕರ್ಯ ದೊರಕಿದೆ.
ಗುಡ್ಡಕುಸಿತ, ಪ್ರವಾಹ, ಅನೇಕ ಅವಘಡಗಳ ಸಂದರ್ಭದಲ್ಲಿ ಬರೆದ ಮಾನವೀಯ ವರದಿಗಳು, ಸ್ಥಳೀಯ ಸಮಸ್ಯೆಗಳು ಬಗೆಹರಿಯಲು ಕಾರಣವಾಗಿವೆ.ಕಾರವಾರದ ಪತ್ರಿಕಾ ಭವನ ನಿರ್ವಹಣಾ ಸಮಿತಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಜಿಲ್ಲಾ ಕೇಂದ್ರ ಕಾರ್ಯನಿರತ ಪತ್ರಕರ್ತರ ಸಂಘ ಪತ್ರಿಕಾ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ನಡೆಯಿತು.
ಎಂಸಿಎ ಅಧ್ಯಕ್ಷ, ಶಾಸಕ ಸತೀಶ ಸೈಲ್, ವಿಧಾನ ಪರಿಷತ್ ಸದಸ್ಯ ಗಣಪತಿ ಉಳ್ವೇಕರ್, ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ಪ್ರಶಸ್ತಿ ಪ್ರದಾನ ಮಾಡಿದರು.ಪತ್ರಿಕಾ ಭವನ ನಿರ್ವಹಣಾ ಸಮಿತಿ ಉಪಾಧ್ಯಕ್ಷ ನಾಗರಾಜ ಹರಪನಹಳ್ಳಿ, ಜಿಲ್ಲಾ ಕೇಂದ್ರ ಕಾರ್ಯ ನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ದರ್ಶನ ನಾಯ್ಕ ವೇದಿಕೆಯಲ್ಲಿದ್ದರು. ವಿನುತಾ ಅಂಬೇಕರ್ ಪ್ರಾರ್ಥಿಸಿದರು. ಪತ್ರಿಕಾ ಭವನ ನಿರ್ವಹಣಾ ಸಮಿತಿಯ ಅಧ್ಯಕ್ಷ ಟಿ.ಬಿ.ಹರಿಕಾಂತ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಸಮಿತಿ ಕಾರ್ಯದರ್ಶಿ ಸುನೀಲ ನಾಯ್ಕ ಹಣಕೋಣ ನಿರೂಪಿಸಿದರು. ಜುಲೈ ನಲ್ಲಿ ನಡೆಯಬೇಕಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮವು ಅಂಕೋಲಾ ಶಿರೂರು ದುರಂತ ಹಿನ್ನೆಲೆಯಲ್ಲಿ ತಡವಾಗಿ ನಡೆಸಲಾಯಿತು.
ಚಿಕ್ಕ ವಯಸ್ಸಿನಲ್ಲಿ ದೊಡ್ಡ ಸಾಧನೆ ಮಾಡಿದ ಹಿನ್ನೆಲೆಯಲ್ಲಿ ಕಾರವಾರದ ಜಿಲ್ಲಾ ಕೇಂದ್ರ ಕಾರ್ಯನಿರತ ಪತ್ರಕರ್ತರ ಸಂಘ ನೀಡುವ ಪ್ರತಿಷ್ಠಿತ 2024- 25 ನೇ ಸಾಲಿನ ಟಾಗೋರ್ ಪ್ರಶಸ್ತಿ ನೀಡಿ ಗೌರವಿಸಿತು.