-
ಬೆಳಗಾವಿ : ತತ್ವಪದಗಳು ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಶ್ರೀಮಂತಗೊಳಿಸಿದೆ. ಅದು ಈ ನೆಲದ ಅಸ್ಮಿತೆಯಾಗಿದೆಯೆಂದು ಮಹಾವಿದ್ಯಾಲಯದ ಪ್ರಾಂಶುಪಾಲ ಪ್ರೊ. ಎಂ.ಜಿ. ಹೆಗಡೆ ಅಭಿಪ್ರಾಯಪಟ್ಟರು.
ನಗರದ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯದ ಸಭಾಂಗಣದಲ್ಲಿ ಬುಧವಾರ ಕನ್ನಡ ರಾಜ್ಯೋತ್ಸವದ ಸರಣಿ ಕಾರ್ಯಕ್ರಮದ ನಿಮಿತ್ತ ಹಮ್ಮಿಕೊಂಡಿದ್ದ ತತ್ವಪದ ಗಾಯನ ಕಾರ್ಯಕ್ರಮದಲ್ಲಿ ಮಾತನಾಡಿದರು.
ತತ್ವಪದ ಸಾಹಿತ್ಯವು ನಮ್ಮ ಸಾಹಿತ್ಯದ ಒಂದು ಭಾಗ. ಅದನ್ನು ಹೊರತುಪಡಿಸಿ ಸಾಹಿತ್ಯವು ಪರಿಪೂರ್ಣವಾಗಲಾರದು. ತತ್ವಪದ ಕನ್ನಡದ ಅಸ್ಮಿತೆ, ತಾತ್ವಿಕ ಚಿಂತನೆಯ ಹೂರಣ. ತತ್ವಪದದಷ್ಟು ಮನುಷ್ಯನ ಅಂತರಂಗವನ್ನು ಶೋಧಿಸಿದ ಸಾಹಿತ್ಯ ಇನ್ನೊಂದಿಲ್ಲ. ಮನುಷ್ಯ ಜೀವನದ ನಶ್ವರತೆಯನ್ನು ಹೇಳುತ್ತಾ, ಅವನ ಬದುಕು ಸಾರ್ಥಕಗೊಳಿಸಲು ಪ್ರೇರೇಪಿಸುತ್ತದೆ. ಮಾನವೀಯ ಮೌಲ್ಯಗಳನ್ನು ಸಮಾಜದಲ್ಲಿ ಬಿತ್ತಿ ಮನುಷ್ಯ ಮನುಷ್ಯನ ಸಂಬಂಧವನ್ನು ಗಟ್ಟಿಗೊಳಿಸಿದೆ ಎಂದರು.ಖ್ಯಾತ ತತ್ವಪದ ಗಾಯಕ ಶೃಂಗೇರಿಯ ನಾದ ಮಣಿನಾಲ್ಕೂರು ಅವರು ತತ್ವಪದ ಹೃದಯಕ್ಕೆ ಹತ್ತಿರವಾದುದು. ಕನ್ನಡ ರಾಜ್ಯೋತ್ಸವ ಎನ್ನುವುದಕ್ಕಿಂತ ಕರ್ನಾಟಕ ರಾಜ್ಯೋತ್ಸವ ಎಂಬುದು ಅತ್ಯಂತ ಸೂಕ್ತವಾದುದು. ಅದು ವಿಶಾಲತೆಯನ್ನು ಪಡೆಯುತ್ತದೆ. ಕನ್ನಡದ ತತ್ವಪದಗಳನ್ನು ಹಾಡಿ ವಿದ್ಯಾರ್ಥಿಗಳನ್ನು ನಾದ ಉಯ್ಯಾಲೆಯಲ್ಲಿ ತೂಗಿಸಿದರು. ಕನಕರ ಕೀರ್ತನೆಗಳನ್ನು ಹಾಡಿ ಅದರ ಒಳಸುಳಿಗಳನ್ನು ವಿವರಿಸಿದರು.
ರಾಚವಿಯ ಕನ್ನಡ ರಾಜ್ಯೋತ್ಸವದ ಸರಣಿ ಕಾರ್ಯಕ್ರಮ ಸಮಿತಿಯ ಅಧ್ಯಕ್ಷ ಪ್ರೊ. ಎಂ ಸಿ. ಎರಿಸ್ವಾಮಿ ವಂದಿಸಿದರು. ಕಾರ್ಯಕ್ರಮದ ಸಂಯೋಜಕ, ರಾಚವಿ ಕನ್ನಡ ಸಹಾಯಕ ಪ್ರಾಧ್ಯಾಪಕ ಡಾ. ಗಜಾನನ ನಾಯ್ಕ ಪರಿಚಯಿಸಿದರು. ಮಹಾವಿದ್ಯಾಲಯದ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.