ಹೊನ್ನಾವರ: ಶಿಕ್ಷಣ ಕ್ಷೇತ್ರದಲ್ಲಿ ತಮ್ಮದೇ ಆದ ವೈಯಕ್ತಿಕ ವರ್ಚಸ್ಸು ಹೊಂದಿರುವ ಸಂಶೋಧಕರು, ಶಿಕ್ಷಕರಾದ ಲೋಕರಾಜ್ ಜೈನ್ ಅವರಿಗೆ ಶಿಕ್ಷಕರ ದಿನಾಚರಣೆ ದಿನದಂದು ಹೊನ್ನಾವರ ತಾಲೂಕಿನ ಅರೇಅಂಗಡಿ ಪ್ರೇರಣಾ ಫೌಂಡೇಶನ್ ವತಿಯಿಂದ ಶಿಕ್ಷಕ ಭೂಷಣ ಪ್ರಶಸ್ತಿಯೊಂದಿಗೆ ಗೌರವ ವಂದನೆ ನೀಡುವ ಮೂಲಕ ಅರ್ಥಪೂರ್ಣವಾಗಿ ಶಿಕ್ಷಕರ ದಿನಾಚರಣೆ ಆಚರಿಸಲಾಯಿತು.
ಗೇರುಸೊಪ್ಪೆ ಚತರ್ಮುಖ ಬಸದಿಗೆ ಆಗಮಿಸಿದ್ದ ಲೋಕರಾಜ್ ಜೈನ್ ಅವರ ಬಳಿಯೆ ತೆರಳಿದ ಪ್ರೇರಣಾ
ಫೌಂಡೇಶನ್ ಸಂಘಟಕರು ಕೆಲಕಾಲ ರಾಣಿ ಚೆನ್ನಾಭೈರಾದೇವಿಯ ಸಾಧನೆ, ಇತಿಹಾಸ ಹಾಗೂ ಚತುರ್ಮುಖ ಬಸದಿ ಹಾಗೂ ಇಲ್ಲಿನ ಅತ್ಯಮೂಲ್ಯ
ವಿಗ್ರಹಗಳು ಹಾನಿಗೊಳಗಾದ ವಿವರ ಪಡೆದರು.ರಾಣಿ ಚೆನ್ನಾಭೈರಾದೇವಿಯ ಇತಿಹಾಸ ಹಾಗೂ ಸಾಧನೆ ಕುರಿತು ಲೋಕರಾಜ್ ಜೈನ್ ಹೆಚ್ಚಿನ ಸಂಶೋಧನೆ ನಡೆಸಿರುವುದರಿಂದ ಸಂಘಟಕರಿಗೆ ಸಂಪೂರ್ಣವಾಗಿ ಮಾಹಿತಿ ನೀಡಿದರು. ಪ್ರತಿ ಸದಸ್ಯರು ಕೇಳಿದ ಪ್ರಶ್ನೆಗೆ ಸವಿಸ್ತಾರವಾಗಿ ಮಾಹಿತಿ ಹಂಚಿಕೊಳ್ಳುವುದರ ಜತೆಗೆ
ಬಸದಿಯ ಸುತ್ತಮುತ್ತಲಿನ ಚಿತ್ರಣ ಹಾಗೂ ಇಲ್ಲಿನ ವಾಸ್ತವಿಕ ಸ್ಥಿತಿಗತಿಗಳ ಬಗ್ಗೆ ಅರಿವು ಮೂಡಿಸಿದರು. ನಂತರ
ಪ್ರೇರಣಾ ಫೌಂಡೇಶನ್ ಸಂಘಟಕರು ಜ್ವಾಲಮಾಲಿನಿ ದೇವಾಲಯದ ಆವರಣದಲ್ಲಿ ಲೋಕರಾಜ್ ಜೈನ್ ಅವರನ್ನು ಸನ್ಮಾನಿಸಿದರು. ಸನ್ಮಾನ ಸ್ವೀಕರಿಸಿದ ಲೋಕರಾಜ್ ಜೈನ್ ಮಾತನಾಡಿ, ಜೀವನದಲ್ಲಿ ಇದು ನನ್ನ ಪ್ರಥಮ ಸನ್ಮಾನವಾಗಿದೆ.ಈ ಮೂಲಕ ಕ್ಷೇತ್ರವನ್ನು ಪರಿಚಯಿಸಿದ್ದಿರಿ.
ಇದು ಸಂತಸ ತಂದಿದೆ ಎಂದು ಸಂಘಟಕರಿಗೆ ಧನ್ಯವಾದ
ಸಲ್ಲಿಸಿದರು.54 ವರ್ಷಗಳ ಕಾಲ ಆಳಿರುವ ರಾಣಿ ಚೆನ್ನಾಭೈರಾದೇವಿಯ ಗುರುತಿಸುವ ಕಾರ್ಯವಾಗದಿರುವುದು ಈ ನಾಡಿನ ದೊಡ್ಡ ದುರಂತ ಎಂದು ಬೇಸರ ವ್ಯಕ್ತಪಡಿಸಿದರು. ರಾಣಿಯ ಆಸ್ಥಾನ ಕಾನೂರು ಕೋಟೆಯು ಅಭಿವೃದ್ಧಿಪಡಿಸಬೇಕು.ಆ ಮೂಲಕ ಪ್ರವಾಸೋದ್ಯಮ ಅಭಿವೃದ್ಧಿ ಪಡಿಸಬೇಕು. ಇದರಿಂದ ಪ್ರವಾಸೋದ್ಯಮಕ್ಕೆ ಆದಾಯ ಬರುತ್ತದೆ ಎಂದು ಜೈನ್ ಅವರು ಸಲಹೆ ನೀಡಿದರು.
ಗತ ಪರಂಪರೆಯ ಸುದ್ದಿ ಇಂದು ಕುರುಹು ಸಮೇತ ನೋಡಿರುವುದು ಬಲು ಸಂತಸ ತಂದಿದೆ.ಲೋಕದ ಬಗ್ಗೆ ಅಲ್ಪ ಮಾಹಿತಿ ಇರುವ ನಾವು ಸ್ಥಳೀಯವಾಗಿ ಸಾಧನೆ ಮಾಡಿರುವವರ ಬಗ್ಗೆ ತಿಳಿಯುವುದು, ತಿಳಿದಿದ್ದನ್ನು ಆಧುನಿಕವಾಗಿ ತಿಳಿಸುವುದು ಕರ್ತವ್ಯ. ಜೈನ ದೇಗುಲ, ಚೆನ್ನಾಭೈರಾದೇವಿಯ ಸಾಮ್ರಾಜ್ಯ, ಸಂಪತ್ತು, ಆಡಳಿತ ಹೀಗೆ ಇತಿಹಾಸ ಜ್ಞಾನದ ಭಂಡಾರವೇ ಆಗಿರುವ ಲೋಕರಾಜ್ ರವರ ಭೇಟಿ ಅತೀವ ಸಂತಸ ತಂದಿದೆ. ಸರ್ಕಾರ, ಆಡಳಿತ ವರ್ಗ, ಸಹಸ್ರ ದಾನಿಗಳು ಹೀಗೆ ಎಲ್ಲರೂ ಒಗ್ಗೂಡಿದರೆ ಇದೊಂದು ಐತಿಹ್ಯ ಕುರುಹುಗಳು ಮುಂದಿನ ಜನಾಂಗಕ್ಕೆ ಕೊಡುಗೆಯಾಗಿ ನೀಡಬಹುದು. ನಮ್ಮ ನೆಲದ ಮಹಿಮೆ, ನಮ್ಮ ರಾಣಿಯ ಗರಿಮೆ ಲೋಕರಾಜ್ ಜೈನ್ ರವರ ಮೂಲಕ ತಿಳಿದಿದೆ ಎಂದು ಪ್ರೇರಣಾ ಫೌಂಡೇಶನ್ ಸ್ಥಾಪಕರು, ಅಧ್ಯಕ್ಷೆ ರಜನಿ ನಾಯ್ಕ ಅನಿಸಿಕೆ ವ್ಯಕ್ತಪಡಿಸಿದರು.