ಹೆಬ್ರಿ : ಶಿಕ್ಷಕರ ದಿನಾಚರಣೆಯ ಪ್ರಯುಕ್ತ ನಿವೃತ್ತ ಶಿಕ್ಷಕರೆಡೆಗೆ ಸಾಹಿತ್ಯದ ನಡಿಗೆ ಕಾರ್ಯಕ್ರಮದಲ್ಲಿ ಹಿರಿಯ ನಿವೃತ್ತ ಶಿಕ್ಷಕರನ್ನು ಗುರುತಿಸಿ ಗೌರವಿಸುವ ಕಾರ್ಯಕ್ರಮವನ್ನು ಪ್ರತಿ ವರುಷವೂ ಹಮ್ಮಿಕೊಳ್ಳುತ್ತಿದ್ದು,ಅದಕ್ಕಾಗಿ ಶಿಕ್ಷಕ ದಿನಾಚರಣೆಯ ಮುನ್ನಾ ದಿನ ದಿನಾಂಕ 4.9.2024 ರ ಬುಧವಾರ ಸಂಜೆ 5.00 ಕ್ಕೆ ಹಿರಿಯ ನಿವೃತ್ತ ಅಧ್ಯಾಪಕಿ ಪ್ರಭಾವತಿ ಎ ಹೆಗ್ಡೆ ಅವರನ್ನುಅನಂತ ಕೃಷ್ಣ ರೆಸಿಡೆನ್ಸಿ, ಬಂಟರ ಭವನ ಬಳಿ, ಹೆಬ್ರಿ ಇಲ್ಲಿ ಸನ್ಮಾನಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ.ಸಾ.ಪ ಹೆಬ್ರಿ ತಾಲೂಕು ಘಟಕ ಅಧ್ಯಕ್ಷ ಶ್ರೀನಿವಾಸ ಭಂಡಾರಿ ವಹಿಸಿದ್ದರು. ಕಸಾಪ ಹಿರಿಯ ಸದಸ್ಯರಾದ ಮ. ಮ. ಹೆಬ್ಬಾರ್, ಉದ್ಯಮಿ ದಿನಕರ ಪ್ರಭು, ಉಪನ್ಯಾಸಕಿ ಸುಲತಾ ಹೆಗ್ಡೆ, ಹಿರಿಯರಾದ ಬಾಲ ಚಂದ್ರ ಮುದ್ರಾಡಿ, ಎಚ್ ಜನಾರ್ದನ, ಬಾಲಚಂದ್ರ ಹೆಬ್ಬಾರ್, ಸುನಿಲ್ ಭಂಡಾರಿ,ವೀಣಾ ಆರ್ ಭಟ್, ಪ್ರೀತೇಶ ಕುಮಾರ್, ಪ್ರೇಮಾ ಬಿರಾದಾರ್ ಉಪಸ್ಥಿತರಿದ್ದರು.
ಕ.ಸಾ.ಪ ಗೌರವ ಕಾರ್ಯದರ್ಶಿ ಡಾ ಪ್ರವೀಣ ಕುಮಾರ್ ಸ್ಟಾಗತಿಸಿ, ಮಹೇಶ ಹೈಕಾಡಿ ಧನ್ಯವಾದವಿತ್ತರು. ಗೌರವ ಕಾರ್ಯದರ್ಶಿ ಮಂಜುನಾಥ ಕೆ ಶಿವಪುರ ನಿರೂಪಿಸಿದರು.
ಪ್ರುಪ್ಪಾವತಿ ಹೆಬ್ರಿ ಪ್ರಾರ್ಥಿಸಿದರು. ಪೂರ್ಣೇಶ ಕುಲಾಲ್ ಹೆಬ್ರಿ ಸನ್ಮಾನ ಪತ್ರ ವಾಚಿಸಿದರು.
ಮ. ಮ ಹೆಬ್ಬಾರ್ ಅವರು ಮಾತನಾಡಿ ಶ್ರೀಮತಿ ಪ್ರಭಾವತಿ ಹೆಗ್ಡೆಯವರು ಅಧ್ಯಾಪಕಿಯಾಗಿ ಸಾವಿರಾರು ವಿದ್ಯಾರ್ಥಿಗಳಿಗೆ ದಾರಿ ತೋರಿದವರು. ಅವರ ಕಾರ್ಯ ಬದ್ಧತೆ ಮತ್ತು ಪರಿಣಾಮಕಾರಿ ಬೋಧನೆ ವಿದ್ಯಾರ್ಥಿಗಳು ಮತ್ತು ಎಲ್ಲಾ ಶಿಕ್ಷಕರಿಗೆ ಮಾದರಿಯಾಗಿತ್ತು. ಅಂತಹ ಶ್ರೇಷ್ಠ ಅಧ್ಯಾಪಕಿಯನ್ನು ಗೌರವಿಸುವ ಸಾಹಿತ್ಯ ಪರಿಷತ್ತಿನ ಕಾರ್ಯಕ್ರಮ ಅಭಿನಂದನೀಯ ಎಂದರು.
ದಿನಕರ ಪ್ರಭು ಮಾತನಾಡಿ, ವಿದ್ಯಾರ್ಥಿಗಳನ್ನು ಆತ್ಮೀಯವಾಗಿ ಮಾತನಾಡಿಸುತ್ತಿದ್ದ ಗುರುಮಾತೆ ಪ್ರಭಾವತಿಯವರು. ವಿದ್ಯಾರ್ಥಿಗಳನ್ನು ತಿದ್ದಿ ಸರಿ ಮಾರ್ಗದಲ್ಲಿ ನಡೆಯುವಂತೆ ಮಾಡಿದವರು ಎಂದರು.
ಶ್ರೀನಿವಾಸ ಭಂಡಾರಿ ಮಾತನಾಡಿ, ನಿವೃತ್ತ ಶಿಕ್ಷಕರೆಡೆಗೆ ನಮ್ಮ ನಡಿಗೆ ಕಾರ್ಯಕ್ರಮಗಳ ಮೂಲಕ ಹಿರಿಯ ಶಿಕ್ಷಕರನ್ನು ಸನ್ಮಾನಿಸುವುದು ಸಮಾಜದಲ್ಲಿ ಧನಾತ್ಮಕ ಪರಿಣಾಮ ಉಂಟು ಮಾಡುತ್ತದೆ. ಮುಂದಿನ ಪೀಳಿಗೆಗೆ ನಮ್ಮ ಸಂಸ್ಕೃತಿಯನ್ನು ಉಳಿಸುವ ಮತ್ತು ಕಲಿಸುವ ಕಾರ್ಯವಾಗುತ್ತದೆ ಎಂದರು.