ಬೆಳಗಾವಿ : ಗಡಿ ವಿವಾದ ಸಂಬಂಧ ಸುಪ್ರೀಂ ಕೋರ್ಟ್ ನಲ್ಲಿರುವ ವಿವಾದಕ್ಕೆ ಸಂಬಂಧಿಸಿ ಕರ್ನಾಟಕ ಅನುಭವಿಗಳಾದ ವಕೀಲರ ತಂಡವನ್ನು ಹೊಂದಿರುವುದಾಗಿ ಕರ್ನಾಟಕ ಗಡಿ ಮತ್ತು ನದಿಗಳ ಸಂರಕ್ಷಣಾ ಆಯೋಗದ ಅಧ್ಯಕ್ಷ ಶಿವರಾಜ ಪಾಟೀಲ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆಗೆ ಬಂದರೆ ಹಿರಿಯ ವಕೀಲರನ್ನು ನಿಯೋಜನೆ ಮಾಡಲಾಗುತ್ತದೆ ಎಂದು ಹೇಳಿದರು.

ಕರ್ನಾಟಕ ಮತ್ತು ಮಹಾರಾಷ್ಟ್ರದ ಗಡಿ ವಿವಾದಕ್ಕೆ ಸಂಬಂಧಿಸಿದ ಕರ್ನಾಟಕ ಸುಪ್ರೀಂಕೋರ್ಟಿನ ಅಧಿಕಾರ ವ್ಯಾಪ್ತಿಯನ್ನು ಈಗಾಗಲೇ ಪ್ರಶ್ನಿಸಿದೆ. ಗಡಿ ವಿವಾದ ವ್ಯಾಜ್ಯ ಕೋರ್ಟಿನಲ್ಲಿ ನಾಲ್ಕು ಸಲ ವಿಚಾರಣೆಗೆ ಬಂದಿದೆ. ಆದರೆ ಕರ್ನಾಟಕದ ನ್ಯಾಯಮೂರ್ತಿಗಳು ಪೀಠದಲ್ಲಿ ಇಲ್ಲದ ಕಾರಣ ವಿಚಾರಣೆ ನಡೆಯಲಿಲ್ಲ. ಮುಂದಿನ ದಿನಗಳಲ್ಲಿ ಕರ್ನಾಟಕದ ನ್ಯಾಯಮೂರ್ತಿ ಇರದಂತೆ ನೋಡಿಕೊಳ್ಳಲಾಗುತ್ತದೆ. ಮಹಾರಾಷ್ಟ್ರ ಸರಕಾರ 2004 ರಲ್ಲಿ ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿ ವಿವಾದವನ್ನು ಸುಪ್ರೀಂಕೋರ್ಟಿಗೆ ತೆಗೆದುಕೊಂಡು ಹೋಗಿದೆ. ಅದು ತನ್ನ ವ್ಯಾಪ್ತಿಗೆ ಬರುತ್ತದೋ ಅಥವಾ ಇಲ್ಲವೋ ಎನ್ನುವುದನ್ನು ಕೋರ್ಟ್ ಸ್ಪಷ್ಟಪಡಿಸಬೇಕು. ಅಲ್ಲಿಯವರೆಗೂ ಗಡಿ ವಿವಾದ ಕುರಿತು ಯಾವುದೇ ತೀರ್ಮಾನ ತೆಗೆದುಕೊಳ್ಳಲು ಸಾಧ್ಯವಾಗದು ಎಂದು ಅವರು ಹೇಳಿದರು.