ಧರ್ಮಸ್ಥಳ : ವೃಷಭ ಮಾಸದ ಹತ್ತನೇ ದಿನ ಪತ್ತನಾಜೆ (ಹತ್ತನಾವಧಿ) ಪ್ರಯುಕ್ತ ಶನಿವಾರ ಶ್ರೀ ಕ್ಷೇತ್ರ ಧರ್ಮಸ್ಥಳದ ಶ್ರೀ ಮಂಜುನಾಥ ಸ್ವಾಮಿ ಸನ್ನಿಧಿಯಲ್ಲಿ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರ ನೇತೃತ್ವದಲ್ಲಿ ರಂಗಪೂಜೆ, ಬಲಿ ಉತ್ಸವ, ವಸಂತ ಮಂಟಪದಲ್ಲಿ ಕಟ್ಟೆಪೂಜೆ, ಅಷ್ಟಾವಧಾನ ಸೇವೆ ಹಾಗೂ ಧ್ವಜ ಮರ ಇಳಿಸುವ ಕಾರ್ಯಕ್ರಮದೊಂದಿಗೆ ವಿಶೇಷ ಉತ್ಸವ, ಸೇವೆಗಳು ಸಮಾಪನಗೊಂಡವು.
ಮುಂದಿನ ದೀಪಾವಳಿ ವೇಳೆಗೆ ಮತ್ತೆ ಎಂದಿನಂತೆ ಉತ್ಸವ, ವಿಶೇಷ ಸೇವೆಗಳು ಪ್ರಾರಂಭಗೊಳ್ಳುತ್ತವೆ.
ಕ್ಷೇತ್ರದ ಶ್ರೀ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿಯ ವಾರ್ಷಿಕ ತಿರುಗಾಟ ಸಮಾಪ್ತಿಗೊಳಿಸಿ ಬೆಳಗ್ಗೆ ಮೇಳದ ಶ್ರೀ ಮಹಾಗಣಪತಿ ದೇವರನ್ನು ಹಿಂದಿನ ದಿನ ಮುಂಡಾಜೆ ಶಿಬಿರದಿಂದ ಧರ್ಮಸ್ಥಳದ ಮಂಜು ಕೃಪಾಕ್ಕೆ ಬರಮಾಡಿಕೊಂಡು ಅಲ್ಲಿ ಮಧ್ಯಾಹ್ನ ಗಣಪತಿ ಹೋಮ, ಮಹಾ ಪೂಜೆ ನಡೆಯಿತು.
ಮೇಳದ ಯಜಮಾನ ಡಿ. ಹಷೇಂದ್ರ ಕುಮಾರ್ ನೇತೃತ್ವದಲ್ಲಿ ಸಂಜೆ ವೈಭವದ ಮೆರವಣಿಗೆಯಲ್ಲಿ ಶ್ರೀಮಹಾಗಣಪತಿ ದೇವರನ್ನು ಬರಮಾಡಿ ಕೊಳ್ಳಲಾಯಿತು. ದೇಗುಲದ ಎದುರು ಮತ್ತು ಬೀಡಿನ ಮುಂಭಾಗದಲ್ಲಿ ನರ್ತನ ಸೇವೆ ನಡೆಸಿ ಶ್ರೀ ದೇವರನ್ನು ಛತ್ರ ಗಣಪತಿ ಗುಡಿಯಲ್ಲಿರಿಸಿ ಪೂಜಿಸಲಾಯಿತು.
ಹೇಮಾವತಿ ವೀ. ಹೆಗ್ಗಡೆ, ಸುಪ್ರಿಯಾ ಹರ್ಷೇಂದ್ರ ಕುಮಾರ್, ಹೆಗ್ಗಡೆ ಕುಟುಂಬಸ್ಥರು, ಹೆಗ್ಗಡೆಯವರ ಆಪ್ತ ಕಾರ್ಯದರ್ಶಿ ವೀರು ಶೆಟ್ಟಿ, ಸೀತಾರಾಮ ತೋಳ್ಪಡಿತ್ತಾಯ, ಮಣೆಗಾರ್ ವಸಂತ ಮಂಜಿತ್ತಾಯ, ಪಾರುಪತ್ಯದಾರ ಲಕ್ಷ್ಮೀನಾರಾಯಣ ರಾವ್, ಬಿ.ಭುಜಬಲಿ, ಉಜಿರೆ ಅಶೋಕ ಭಟ್, ಕ್ಷೇತ್ರದ ಸಿಬಂದಿ, ಭಕ್ತರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.