ಬೆಳಗಾವಿ : ರೈಲ್ವೆ ಟಿಕೆಟ್ ತೋರಿಸಲು ಹೇಳಿದ್ದಕ್ಕೆ ಟಿಸಿ ಸೇರಿ ಐವರ ಮೇಲೆ ಅಪರಿಚಿತ ಮುಸುಕುಧಾರಿ ವ್ಯಕ್ತಿಯೋರ್ವ ಮಾರಣಾಂತಿಕ ಹಲ್ಲೆ ಮಾಡಿರುವ ಘಟನೆ ಖಾನಾಪುರ ತಾಲೂಕಿನ ಲೋಂಡಾದಲ್ಲಿ ಇಂದು ನಡೆದಿದೆ. ಘಟನೆಯಲ್ಲಿ ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾರೆ.

ನಾಲ್ವರು ಪ್ರಯಾಣಿಕರು ಸೇರಿ ಟಿಸಿ ಮೇಲೆ ಚಾಕುವಿನಿಂದ ಮಾರಣಾಂತಿಕ ಹಲ್ಲೆ ನಡೆದಿದೆ. ಅಪರಿಚಿತ ಮುಸುಕುಧಾರಿಯಿಂದ ಈ ಕೃತ್ಯ ನಡೆದಿದ್ದು, ಬಳಿಕ ಆರೋಪಿ ಅಲ್ಲಿಂದ ಪರಾರಿಯಾಗಿದ್ದಾನೆ. ಟಿಸಿ ಸೇರಿ ನಾಲ್ವರು ಗಾಯಾಳುಗಳನ್ನು ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಚಿಕಿತ್ಸೆ ಫಲಕಾರಿಯಾಗದೇ ಓರ್ವ ಗಾಯಾಳು ಸಾವನ್ನಪ್ಪಿದ್ದಾನೆ. ಮೃತರನ್ನು ಝಾನ್ಸಿ ಮೂಲದ ಟ್ರೇನ್ ಅಟೆಂಡರ್‌ ದೇವಋಷಿ ವರ್ಮಾ(23) ಮೃತರು ಎಂದು ಗುರುತಿಸಲಾಗಿದೆ.

ಪಾಂಡಿಚೇರಿ-ಮುಂಬೈ ಚಾಲುಕ್ಯ ಎಕ್ಸ್‌ಪ್ರೆಸ್ ರೈಲಿನಲ್ಲಿ ಈ ಘಟನೆ ನಡೆದಿದೆ. ಧಾರವಾಡದಿಂದ ಬೆಳಗಾವಿಯತ್ತ ಬರುತ್ತಿದ್ದ ಚಾಲುಕ್ಯ ರೈಲು ಇದಾಗಿದ್ದು, ಚಿಂತಾಜನಕ ಸ್ಥಿತಿಯಲ್ಲಿರುವ ನಾಲ್ವರಿಗೆ ತೀವ್ರ ನಿಗಾಘಟಕದಲ್ಲಿ ಚಿಕಿತ್ಸೆ ಮುಂದುವರಿಸಲಾಗಿದೆ.

ಗಾಯಾಳು ಟಿಕೆಟ್ ಚೆಕ್ಕರ್ ಅಶ್ರಫ್ ಅಲಿ ಕಿತ್ತೂರ ಮಾಧ್ಯಮಗಳ ಜೊತೆಗೆ ಮಾತನಾಡಿ, ರೈಲಿನಲ್ಲಿ ಟಿಕೆಟ್‌ ಚೆಕ್ ಮಾಡುತ್ತಿರುವಾಗ, ಒಬ್ಬರದ್ದು ಟಿಕೆಟ್ ಇರಲಿಲ್ಲ. ಅವರಿಂದ ದಂಡ ಕಟ್ಟಿಸಿಕೊಂಡು ವಾಪಸ್ ಬರುವಾಗ, ಬಾಗಿಲಲ್ಲಿ ನಿಂತಿದ್ದ ವ್ಯಕ್ತಿಗೆ ನಾನು ಟಿಕೆಟ್ ಕೇಳಿದೆ. ಆಗ ಆತ ನನ್ನ ಟಿಕೆಟ್ ಅಲ್ಲಿ ತೆಗೆದುಕೊಂಡಿದ್ದಾರೆ ಎಂದು ಉತ್ತರಿಸಿ ಓಡಲು ಪ್ರಯತ್ನಿಸಿದ್ದ. ಆ ವೇಳೆ ಆತನ ಜೊತೆಗಿದ್ದ ಪ್ರಯಾಣಿಕರು ಮತ್ತು ಅಟೆಂಡರ್‌ ಟಿಕೆಟ್ ತೋರಿಸು ಎನ್ನುತ್ತಿದ್ದಂತೆ ಕಿಸೆಯಲ್ಲಿದ್ದ ಚಾಕುವಿನಿಂದ ಇರಿಯಲು ಮುಂದಾದ. ನನಗೆ ಹೊಟ್ಟೆಗೆ ಚುಚ್ಚಲು ಬಂದಾಗ, ಕೈ ಮುಂದೆ ಮಾಡಿದೆ. ಕೈಗೆ ಚುಚ್ಚಿದ. ಅದೇ ರೀತಿ ಇನ್ನೂ ಮೂವರಿಗೂ ಚುಚ್ಚಿ ಅಲ್ಲಿಂದ ಪರಾರಿಯಾಗಿದ್ದಾನೆ ಎಂದು ಘಟನೆ ಬಗ್ಗೆ ವಿವರಿಸಿದರು.