ದುಬೈ: ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ರ‍್ಯಾಂಕಿಂಗ್‌ ಪಟ್ಟಿಯಲ್ಲಿ ಭಾರತ ಮತ್ತೆ ಅಗ್ರಸ್ಥಾನಕ್ಕೇರಿದೆ.

ವೆಲ್ಲಿಂಗ್ಟನ್‌ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ನ್ಯೂಜಿಲೆಂಡ್ 172 ರನ್‌ಗಳ ಸೋಲಿಗೆ ಶರಣಾಗಿದೆ. ಇದರೊಂದಿಗೆ ರ‍್ಯಾಂಕಿಂಗ್‌ ಪಟ್ಟಿಯಲ್ಲಿ ನ್ಯೂಜಿಲೆಂಡ್ ಎರಡನೇ ಸ್ಥಾನಕ್ಕೆ ಕುಸಿದಿದೆ.

ಅಗ್ರಸ್ಥಾನ ಪಡೆದಿರುವ ರೋಹಿತ್ ಶರ್ಮಾ ಬಳಗದ ಶೇಕಡವಾರು ಪಾಯಿಂಟ್ಸ್ 64.58 ಆಗಿದೆ. ನ್ಯೂಜಿಲೆಂಡ್‌ನ ಶೇಕಡವಾರು ಪಾಯಿಂಟ್ಸ್ 60ಕ್ಕೆ ಇಳಿದಿದೆ.

ನ್ಯೂಜಿಲೆಂಡ್ ವಿರುದ್ಧ ಮೊದಲ ಟೆಸ್ಟ್ ಪಂದ್ಯದಲ್ಲಿ ಗೆಲುವು ದಾಖಲಿಸಿರುವ ಆಸ್ಟ್ರೇಲಿಯಾ, 59.09 ಶೇಕಡವಾರು ಪಾಯಿಂಟ್ಸ್‌ಗಳೊಂದಿಗೆ ಮೂರನೇ ಸ್ಥಾನದಲ್ಲಿದೆ.

ಇಂಗ್ಲೆಂಡ್ ವಿರುದ್ಧ ತವರಿನಲ್ಲಿ ಸಾಗುತ್ತಿರುವ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ, ಇನ್ನೂ ಒಂದು ಬಾಕಿ ಉಳಿದಿರುವಂತೆಯೇ ಭಾರತ ತಂಡವು 3-1ರ ಅಂತರದಿಂದ ವಶಪಡಿಸಿಕೊಂಡಿದೆ. ಸರಣಿಯ ಕೊನೆಯ ಪಂದ್ಯ ಧರ್ಮಶಾಲಾದಲ್ಲಿ ನಡೆಯಲಿದೆ.

ಒಂದು ವೇಳೆ ಧರ್ಮಶಾಲಾ ಟೆಸ್ಟ್ ಪಂದ್ಯದಲ್ಲಿ ಭಾರತಕ್ಕೆ ಸೋಲು ಎದುರಾದರೆ ಮಾತ್ರ ಆಸ್ಟ್ರೇಲಿಯಾ ತಂಡವು ಅಗ್ರಸ್ಥಾನ ಪಡೆಯಲಿದೆ.