ನವದೆಹಲಿ: ಕಾಂಗ್ರೆಸ್ ಪಕ್ಷ 46 ಲೋಕಸಭಾ ಅಭ್ಯರ್ಥಿಗಳ ನಾಲ್ಕನೇ ಪಟ್ಟಿಯನ್ನು ಶನಿವಾರ ಪ್ರಕಟಿಸಿದ್ದು, ಪಕ್ಷದ ನಾಯಕರಾದ ದಿಗ್ವಿಜಯ ಸಿಂಗ್ ಅಜಯ ರೈ ಮತ್ತು ಕಾರ್ತಿ ಪಿ. ಚಿದಂಬರಂ ಅವರು ಸಹ ಈ ಪಟ್ಟಿಯಲ್ಲಿದ್ದಾರೆ.
ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ದಿಗ್ವಿಜಯ ಸಿಂಗ್ ಅವರನ್ನು ರಾಜ್ಗಢ ಕ್ಷೇತ್ರದಿಂದ ಕಣಕ್ಕಿಳಿಸಲಾಗಿದ್ದು, ವಾರಾಣಸಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಅಜಯ ರೈ ಸ್ಪರ್ಧಿಸಲಿದ್ದಾರೆ. ಬಹುಜನ ಸಮಾಜ ಪಕ್ಷ (ಬಿಎಸ್ಪಿ)ದ ಮಾಜಿ ನಾಯಕ ಡ್ಯಾನಿಶ್ ಅಲಿ ಅವರನ್ನು ಉತ್ತರ ಪ್ರದೇಶದ ಅಮ್ರೋಹಾ ಕ್ಷೇತ್ರದಿಂದ ಅಭ್ಯರ್ಥಿಯಾಗಿ ಕಣಕ್ಕಿಳಿಸಲಾಗಿದೆ.
ಉತ್ತರ ಪ್ರದೇಶದ ಶಾಸಕ ಇಮ್ರಾನ್ ಮಸೂದ್ ಅವರನ್ನು ಸಹರಾನ್ಪುರ ಕ್ಷೇತ್ರಕ್ಕೆ ಮತ್ತು ಅಲೋಕ್ ಮಿಶ್ರಾ ಅವರನ್ನು ಕಾನ್ಪುರದಿಂದ ಅಭ್ಯರ್ಥಿಯಾಗಿ ಹೆಸರಿಸಲಾಗಿದೆ. ಅಖಿಲೇಶ್ ಪ್ರತಾಪ್ ಸಿಂಗ್ ಡಿಯೋರಿಯಾದಿಂದ ಕಣಕ್ಕಿಳಿಯಲಿದ್ದಾರೆ.
ಉತ್ತರಾಖಂಡದ ಮಾಜಿ ಮುಖ್ಯಮಂತ್ರಿ ಹರೀಶ ರಾವತ್ ಅವರ ಪುತ್ರ ವೀರೇಂದ್ರ ರಾವತ್ ಅವರಿಗೆ ಹರಿದ್ವಾರ ಲೋಕಸಭಾ ಕ್ಷೇತ್ರದಿಂದ ಟಿಕೆಟ್ ನೀಡಲಾಗಿದ್ದು, ಕಾಂಗ್ರೆಸ್ ನಾಯಕ ಪಿಎಲ್ ಪುನಿಯಾ ಅವರ ಪುತ್ರ ತನುಜ್ ಪುನಿಯಾ ಅವರಿಗೆ ಉತ್ತರ ಪ್ರದೇಶದ ಬಾರಾ ಬಂಕಿಯಿಂದ ಲೋಕಸಭೆ ಟಿಕೆಟ್ ನೀಡಲಾಗಿದೆ. ಮಾಜಿ ಕೇಂದ್ರ ಸಚಿವ ಪಿ ಚಿದಂಬರಂ ಅವರ ಪುತ್ರ ಕಾರ್ತಿ ಚಿದಂಬರಂ ಅವರನ್ನು ತಮಿಳುನಾಡಿನ ಶಿವಗಂಗಾ ಕ್ಷೇತ್ರದ ಅಭ್ಯರ್ಥಿಯಾಗಿ ಹೆಸರಿಸಲಾಗಿದೆ. ರಾಜೀನಾಮೆ ನೀಡಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದ ಐಎಎಸ್ ಅಧಿಕಾರಿ ಶಶಿಕಾಂತ್ ಸೆಂಥಿಲ್ ಅವರಿಗೆ ತಿರುವಳ್ಳೂರಿನಿಂದ ಸ್ಪರ್ಧಿಸಲು ಟಿಕೆಟ್ ನೀಡಲಾಗಿದೆ. ಅವರು ಈ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿಯಾಗಿಯೂ ಕಾರ್ಯನಿರ್ವಹಿಸಿದ್ದರು. ತಮಿಳುನಾಡಿನ ಹಾಲಿ ಸಂಸದ ಮಾಣಿಕ್ಕಂ ಠಾಗೋರ್ ಅವರು ವಿರುಧ ನಗರದಿಂದ ಮತ್ತೊಮ್ಮೆ ಸ್ಪರ್ಧಿಸಲಿದ್ದಾರೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಎರಡು ಬಾರಿ ಸಂಸದರಾಗಿರುವ ಚೌಧರಿ ಲಾಲ್ ಸಿಂಗ್ ಅವರನ್ನು ಉಧಂಪುರ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಕಣಕ್ಕಿಳಿಸಿದೆ. ಅವರು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ವಿರುದ್ಧ ಕಣಕ್ಕಿಳಿದಿದ್ದಾರೆ. ಜಮ್ಮು ಕ್ಷೇತ್ರದಿಂದ ಜೆ & ಕೆ ಕಾಂಗ್ರೆಸ್ನ ಕಾರ್ಯಾಧ್ಯಕ್ಷ ಮತ್ತು ಮಾಜಿ ರಾಜ್ಯ ಸಚಿವ ರಾಮನ್ ಭಲ್ಲಾ ಅವರಿಗೆ ಪಕ್ಷವು ಟಿಕೆಟ್ ನೀಡಿದೆ.
ಪಕ್ಷವು ರಾಜಸ್ಥಾನದ ನಾಗೌರ್ ಲೋಕಸಭಾ ಕ್ಷೇತ್ರವನ್ನು ಹನುಮಾನ್ ಬೇನಿವಾಲ್ ಅವರ ರಾಷ್ಟ್ರೀಯ ಲೋಕತಾಂತ್ರಿಕ ಪಕ್ಷಕ್ಕೆ ಬಿಟ್ಟುಕೊಟ್ಟಿದೆ. ಬಿಜೆಪಿಯ ಜ್ಯೋತಿ ಮಿರ್ಧಾ ವಿರುದ್ಧ ಆರ್ಎಲ್ಪಿ ಟಿಕೆಟ್ನಲ್ಲಿ ನಾಗೌರ್ನಿಂದ ಹನುಮಾನ್ ಬೇನಿವಾಲ್ ಸ್ಪರ್ಧಿಸಲಿದ್ದಾರೆ.
ಪಿಯಾ ರಾಯ್ ಚೌಧರಿ (ಕೂಚ್ ಬೆಹಾರ್, ಡಬ್ಲ್ಯುಬಿ), ಕವಾಸಿ ಲಖ್ಮಾ (ಛತ್ತೀಸ್ಗಢ), ಸಂಜಯ ಶರ್ಮಾ (ಹೊಶಾಂಗ್ಬಾದ್,ಮಧ್ಯಪ್ರದೇಶ), ಅಂಗೋಮ್ಚಾ ಬಿಮೋಲ್ ಅಕೋಯಿಜಮ್ (ಮಣಿಪುರ ಒಳಭಾಗ), ಮತ್ತು ಲಾಲ್ಬಿಯಾಕ್ಜಮಾ (ಮಿಜೋರಾಂ) ಪಟ್ಟಿಯಲ್ಲಿ ಸೇರಿದ್ದಾರೆ. ಆದಾಗ್ಯೂ, ಉತ್ತರ ಪ್ರದೇಶದ ರಾಯ್ ಬರೇಲಿಯಿಂದ ಪಕ್ಷವು ಇನ್ನೂ ತನ್ನ ಅಭ್ಯರ್ಥಿಯನ್ನು ಹೆಸರಿಸಿಲ್ಲ, ಇದು 2004 ರಿಂದ ಕಾಂಗ್ರೆಸ್ ಹಿರಿಯ ಸೋನಿಯಾ ಗಾಂಧಿಯವರ ಸ್ಥಾನವಾಗಿದೆ.
ಒಟ್ಟಾರೆಯಾಗಿ, ಪಕ್ಷವು ತನ್ನ ನಾಲ್ಕನೇ ಪಟ್ಟಿಯಲ್ಲಿ ಮಹಾರಾಷ್ಟ್ರದಿಂದ ನಾಲ್ವರು, ಮಧ್ಯಪ್ರದೇಶದಿಂದ 12, ಉತ್ತರ ಪ್ರದೇಶದಿಂದ 9, ತಮಿಳುನಾಡಿನಿಂದ 7, ಜಮ್ಮು ಮತ್ತು ಕಾಶ್ಮೀರದಿಂದ ತಲಾ ಇಬ್ಬರು, ಉತ್ತರಾಖಂಡ, ರಾಜಸ್ಥಾನ, ಮಣಿಪುರ ಮತ್ತು ಅಸ್ಸಾಂ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಛತ್ತೀಸ್ಗಢ, ಮಿಜೋರಾಂ ಮತ್ತು ಪಶ್ಚಿಮ ಬಂಗಾಳದಿಂದ ತಲಾ ಒಬ್ಬ ಅಭ್ಯರ್ಥಿಗಳನ್ನು ಘೋಷಿಸಿದೆ.