ಬೆಳಗಾವಿ : ಬೆಳಗಾವಿಯ ನ್ಯಾಯಾಲಯಕ್ಕೆ ವಿಚಾರಣೆಗೆ ಕರೆತಂದಿದ್ದಾಗ ಪೊಲೀಸರ ಕಣ್ತಪ್ಪಿಸಿ ಪರಾರಿಯಾಗಿದ್ದ ಆರೋಪಿಯನ್ನು ಕೇವಲ ನಾಲ್ಕೇ ಗಂಟೆಗಳಲ್ಲಿ ಮತ್ತೆ ಬಂಧಿಸುವಲ್ಲಿ ಹಿರೇಬಾಗೇವಾಡಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಕಳ್ಳತನ ಪ್ರಕರಣದಲ್ಲಿ ಬೆಳಗಾವಿಯ ಹಲವು ಪೊಲೀಸ್ ಠಾಣೆಗಳಿಗೆ ಬೇಕಾಗಿದ್ದ ಅಬ್ದುಲ್ ಗನಿ ಶಬ್ಬೀರ್ ಶೇಕ್ ಇಂದು ವಿಚಾರಣೆಗಾಗಿ ಕರೆತಂದಿದ್ದಾಗ ಬೆಳಗಾವಿಯ ಜೆ ಎಂ ಎಫ್ ಸಿ ನ್ಯಾಯಾಲಯದ ಆವರಣದಿಂದ ಜನಜಂಗುಳಿಯಲ್ಲಿ ಪೊಲೀಸರ ಸಮ್ಮುಖದಲ್ಲಿಯೇ ಓಡಿ ಪರಾರಿಯಾಗಿದ್ದ. ಇದನ್ನು ಗಂಭೀರವಾಗಿ ಪರಿಗಣಿಸಿದ್ದ ಆಯುಕ್ತ ಸಿದ್ದರಾಮಪ್ಪ ಹಾಗೂ ಡಿಸಿಪಿ ಸ್ನೇಹಾ ಪಿ.ವಿ. ತಕ್ಷಣ ಕಾರ್ಯ ಪ್ರವೃತ್ತರಾಗಿ ಪೊಲೀಸರಿಗೆ ನಿರ್ದೇಶನ ನೀಡಿದ್ದರು.

ಬೆಳಗಾವಿಯಿಂದ ನಾಪತ್ತೆಯಾಗಿದ್ದ ಈತ ಹಿರೇಬಾಗೇವಾಡಿ ಸೇರಿಕೊಂಡಿದ್ದ. ಅಲ್ಲಿನ ಮುಸ್ಲಿಂ ಗಲ್ಲಿಯಲ್ಲಿ ಅವಿತಿದ್ದ. ಇವನನ್ನು ಪತ್ತೆ ಹಚ್ಚುವಲ್ಲಿ ಹಿರೇ ಬಾಗೇವಾಡಿ ಪೊಲೀಸರು ಯಶಸ್ವಿಯಾಗಿದ್ದು ಪಿಎಸ್ಐ ಅವಿನಾಶ್ ಅವರ ನೇತೃತ್ವದಲ್ಲಿ ಕೆಲವೇ ಗಂಟೆಗಳಲ್ಲಿ ಸಿಕ್ಕಿಬಿದ್ದಿದ್ದಾನೆ. ಹಿರೇ ಬಾಗೇವಾಡಿ ಪಿಎಸ್ಐ ಅವಿನಾಶ ಯರಗೊಪ್ಪ, ಸಿಬ್ಬಂದಿ ನಾಗಪ್ಪ ಸುತಗಟ್ಟಿ ಮತ್ತು ಬಾಬಣ್ಣ ಅವರಿಗೆ ನಗರ ಪೊಲೀಸ್ ಆಯುಕ್ತ ಸಿದ್ದರಾಮಪ್ಪ ಇದೀಗ ಬಹುಮಾನ ಘೋಷಣೆ ಮಾಡಿದ್ದಾರೆ.