ಚೆನ್ನೈ: ಮಹತ್ವದ ಬೆಳವಣಿಗೆಯಲ್ಲಿ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರ ಪುತ್ರ ಉದಯನಿಧಿ ಸ್ಟಾಲಿನ್(46) ಅವರನ್ನು ತಮಿಳುನಾಡಿನ ಉಪ ಮುಖ್ಯಮಂತ್ರಿಯಾಗಿ ನೇಮಕ ಮಾಡಲಾಗಿದೆ. ಭಾನುವಾರ ಮಧ್ಯಾಹ್ನ 3:30ಕ್ಕೆ ರಾಜಭವನದಲ್ಲಿ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದೆ.

ಉದಯನಿಧಿ ಅವರಿಗೆ ಉಪಮುಖ್ಯಮಂತ್ರಿ (DCM) ಹುದ್ದೆ ಜೊತೆಗೆ ಯೋಜನೆ ಮತ್ತು ಅಭಿವೃದ್ಧಿ ಖಾತೆಯನ್ನು ನೀಡಲಾಗಿದೆ. ಅವರ ಬಳಿ ಯುವ ಕಲ್ಯಾಣ ಮತ್ತು ಕ್ರೀಡಾ ಅಭಿವೃದ್ಧಿ ಖಾತೆಯೂ ಇರುತ್ತದೆ.
ಉದಯನಿಧಿ ಅವರಲ್ಲದೆ, ವಿ ಸೆಂಥಿಲ್‌ ಬಾಲಾಜಿ, ಡಾ ಗೋವಿ ಚೆಜಿಯಾನ್, ಆರ್ ರಾಜೇಂದ್ರನ್ ಮತ್ತು ಎಸ್‌.ಎಂ. ನಾಸರ್ ಅವರನ್ನು ಸಚಿವ ಸಂಪುಟಕ್ಕೆ ಸೇರ್ಪಡೆ ಮಾಡಲು ಎಂ.ಕೆ. ಸ್ಟಾಲಿನ್ ಶಿಫಾರಸು ಮಾಡಿದ್ದಾರೆ.

ಇದಲ್ಲದೆ, ಟಿ ಮನೋ ತಂಗರಾಜ್, ಗಿಂಗಿ ಕೆ.ಎಸ್. ಮಸ್ತಾನ್ ಮತ್ತು ಕೆ ರಾಮಚಂದ್ರನ್ ಅವರನ್ನು ಸಂಪುಟದಿಂದ ಕೈಬಿಡುವಂತೆ ಎಂ.ಕೆ.ಸ್ಟಾಲಿನ್ ರಾಜ್ಯಪಾಲರಿಗೆ ಶಿಫಾರಸು ಮಾಡಿದ್ದಾರೆ. ಮುಖ್ಯಮಂತ್ರಿ ಸ್ಟಾಲಿನ್ ಮಾಡಿರುವ ಶಿಫಾರಸಿಗೆ ರಾಜ್ಯಪಾಲರು ಅನುಮೋದನೆ ನೀಡಿದ್ದು, ಚೆನ್ನೈನ ರಾಜಭವನದಲ್ಲಿ ಭಾನುವಾರ ಮಧ್ಯಾಹ್ನ 3:30ಕ್ಕೆ ನೂತನವಾಗಿ ಸೇರ್ಪಡೆಗೊಂಡ ಎಲ್ಲ ಸಚಿವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಉದಯನಿಧಿ ಸ್ಟಾಲಿನ್ ಚಲನಚಿತ್ರ ನಟ, ನಿರ್ಮಾಪಕ ಹಾಗೂ ನಿರ್ದೇಶಕರಾಗಿದ್ದಾರೆ. ತಮಿಳುನಾಡು ಮಾಜಿ ಮುಖ್ಯಮಂತ್ರಿ ಮತ್ತು ಡಿಎಂಕೆ ಮಾಜಿ ಮುಖ್ಯಸ್ಥ ದಿವಂಗತ ಎಂ ಕರುಣಾನಿಧಿ ಅವರ ಮೊಮ್ಮಗ.

ಉದಯ ನಿಧಿ ಅವರನ್ನು ಉಪಮುಖ್ಯಮಂತ್ರಿಯನ್ನಾಗಿ ನೇಮಕ ಮಾಡಲಾಗುತ್ತದೆ ಎಂದು ಕಳೆದ ಹಲವಾರು ದಿನಗಳಿಂದ ವದಂತಿ ಹಬ್ಬಿತ್ತು. ಕೊನೆಗೂ ಇದು ನಿಜವಾಗಿದೆ.

ಸನಾತನ ಧರ್ಮದ ಬಗ್ಗೆ ಟೀಕಿಸಿ ವಿವಾದಾತ್ಮಕ ಹೇಳಿಕೆ ನೀಡಿದ್ದ ಉದಯನಿಧಿ :
ಸನಾತನ ನಿರ್ಮೂಲನೆ ಎಂಬ ವಿಷಯದ ಕುರಿತು ತಮಿಳುನಾಡು ಪ್ರಗತಿಪರ ಲೇಖಕಿಯರ ಕಲಾವಿದರ ಸಂಘ ಆಯೋಜಿಸಿದ್ದ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ್ದ ಅವರು, ಸನಾತನವನ್ನು ಸರಳವಾಗಿ ವಿರೋಧಿಸಲು ಸಾಧ್ಯವಿಲ್ಲ, ಆದರೆ ನಿರ್ಮೂಲನೆ ಮಾಡಬೇಕಾಗಿತ್ತು ಮತ್ತು ಇದು ಸಾಮಾಜಿಕ ನ್ಯಾಯ ಮತ್ತು ಸಮಾನತೆಗೆ ವಿರುದ್ಧವಾಗಿದೆ ಎಂದು ಹೇಳಿದ್ದರು. ಇದಕ್ಕೆ ದೇಶದೆಲ್ಲೆಡೆ ತೀವ್ರ ವಿರೋಧ ವ್ಯಕ್ತವಾಗಿತ್ತು.