ಹುಬ್ಬಳ್ಳಿ : ರಾಜ್ಯದಲ್ಲಿ ಸಂಚಲನ ಸೃಷ್ಟಿಸಿರುವ ಹುಬ್ಬಳ್ಳಿಯ ಅಂಜಲಿ ಅಂಬಿಗೇರ (20) ಎಂಬ ಯುವತಿ ಹತ್ಯೆ ಆರೋಪಿಯನ್ನು ಗುರುವಾರ ತಡರಾತ್ರಿ ಪೊಲೀಸರು ದಾವಣಗೆರೆ ಬಳಿ ಬಂಧಿಸಿದ್ದಾರೆ ಎಂದು ವರದಿಯಾಗಿದೆ.
ಕೊಲೆ ಆರೋಪಿ ಆಟೋ ಚಾಲಕ ಗಿರೀಶ (ವಿಶ್ವ) ಸಾವಂತ (21) ಎಂಬಾತನನ್ನು ದಾವಣಗೆರೆ ಬಳಿ ರೈಲ್ವೇ ಪೊಲೀಸರ ಸಹಾಯದಿಂದ ಬಂಧಿಸಲಾಗಿದೆ. ರೈಲಿನಿಂದ ಜಿಗಿದು ಗಾಯಗೊಂಡಿದ್ದ ಆರೋಪಿಯನ್ನು ರೈಲ್ವೇ ಪೊಲೀಸರು ವಶಕ್ಕೆ ಪಡೆದು ಬಳಿಕ ಹುಬ್ಬಳ್ಳಿ-ಧಾರವಾಡ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ಸದ್ಯ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಬುಧವಾರ ಬೆಳಿಗ್ಗೆ ವೀರಾಪುರ ಓಣಿಯಲ್ಲಿರುವ ಅಂಜಲಿ ಮನೆಗೆ ನುಗ್ಗಿ ನಾಲೈದು ಬಾರಿ ಚಾಕು ಇರಿದು ಕೊಲೆ ಮಾಡಿ ಪರಾರಿಯಾಗಿದ್ದ ಈತ ಹುಬ್ಬಳ್ಳಿ ಗೋಕುಲ್ ರಸ್ತೆಯಲ್ಲಿರುವ ಹೊಸ ಬಸ್ ನಿಲ್ದಾಣದ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದ. ಇದರ ಜಾಡು ಹಿಡಿದು ದಾವಣಗೆರೆ, ಶಿವಮೊಗ್ಗ, ಮೈಸೂರು ಸೇರಿದಂತೆ ವಿವಿಧೆಡೆ ಪೊಲೀಸರ ತಂಡ ಶೋಧ ಕಾರ್ಯ ನಡೆಸಿತ್ತು.
ಆರೋಪಿ ಬಂಧಿಸಿದ್ದೇ ಬಲು ರೋಚಕ…
ಗಿರೀಶ್ ಬಂಧನವಾಗಿದ್ದೇ ರೋಚಕವಾಗಿದೆ. ಗಿರೀಶ್ ಸಾವಂತ ಕೊಲೆ ಮಾಡಿ ರೈಲಿನಲ್ಲಿ ಪರಾರಿಯಾಗುವಾಗ ಮಹಿಳಾ ಪ್ರಯಾಣಿಕರೊಂದಿಗೆ ಕಿರಿಕ್ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಇದರಿಂದ ರೈಲಿನಲ್ಲಿ ಸಾರ್ವಜನಿಕರು ಆರೋಪಿ ಗಿರೀಶಗೆ ಥಳಿಸಿದ್ದಾರೆ. ಜನರಿಂದ ಥಳಿತ ತಪ್ಪಿಸಿಕೊಳ್ಳಲು ಈತ ಚಲಿಸುವ ರೈಲಿನಿಂದ ಜಿಗಿದಿದ್ದಾನೆ. ಈ ವೇಳೆ ತೀವ್ರವಾಗಿ ಗಾಯಗೊಂಡಿದ್ದಾನೆ. ಗಾಯಗೊಂಡ ಈತನನ್ನು ವಶಕ್ಕೆ ದಾವಣಗೆರೆ ಬಳಿ ರೈಲ್ವೇ ಪೊಲೀಸರು ವಶಕ್ಕೆ ಪಡೆದರು. ಅವರಿಗೆ ಈತ ಅಂಜಲಿ ಕೊಲೆ ಆರೋಪಿ ಎಂಬುದು ಗೊತ್ತಿರಲಿಲ್ಲ. ಆದರೆ ನಂತರ ದಾವಣಗೆರೆ ಪೊಲೀಸರು ಈತನ ಗುರುತು ಪತ್ತೆ ಹಚ್ಚಿ ಹುಬ್ಬಳ್ಳಿ – ಧಾರವಾಡ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಆತನನ್ನು ವಶಕ್ಕೆ ಪಡೆದ ಹುಬ್ಬಳ್ಳಿ – ಧಾರವಾಡ ಪೊಲೀಸರು ಹುಬ್ಬಳ್ಳಿಗೆ ಕರೆತಂದು, ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆರೋಪಿ ಗಿರೀಶ್ ತಲೆ ಮತ್ತು ಬೆನ್ನಿಗೆ ಗಂಭೀರ ಗಾಯವಾಗಿದೆ ಎಂದು ಹೇಳಲಾಗಿದೆ.