ಉಡುಪಿ: ಕರ್ನಾಟಕ ಸರಕಾರ ನೀಡುವ ಸುವರ್ಣ ಮಹೋತ್ಸವ ಪ್ರಶಸ್ತಿ ಈ ಬಾರಿ ಹಿರಿಯ ಯಕ್ಷಗಾನ ಕಲಾವಿದರಿಗೆ ಲಭಿಸಿದೆ.

ಎಪ್ಪತ್ತರ ಹರೆಯದ ಮಂಜುನಾಥ ಪ್ರಭು ಯಕ್ಷಗಾನದಲ್ಲಿ ಮದ್ದಳೆ ವಾದಕರಾಗಿ ಪ್ರಸಿದ್ದರು. ಉಡುಪಿ ಸಮೀಪದ ಕುಂಜಾಲಿನಲ್ಲಿ ಜನಿಸಿದ ಅವರು ಬೇಳಂಜೆ ತಿಮ್ಮಪ್ಪ ನಾಯ್ಕ, ಹಿರಿಯಡ್ಕ ಗೋಪಾಲ ರಾವ್, ಕೋಟ ಮಹಾಬಲ ಕಾರಂತ, ಹಾರಾಡಿ ಕುಷ್ಟ ಗಾಣಿಗರಿಂದ ಮದ್ದಳೆ ವಾದನ ಮತ್ತು ಯಕ್ಷಗಾನ ನೃತ್ಯ ಅಭ್ಯಾಸ ಮಾಡಿದರು. ಆರಂಭದಲ್ಲಿ ಬಾಲ ಗೋಪಾಲ ಮತ್ತು ಚಿಕ್ಕ ಪುಟ್ಟ ವೇಷ ಮಾಡಿದ ಪ್ರಭು, ಮುಂದೆ ಅತ್ಯುತ್ತಮ ಮದ್ದಳೆ ವಾದಕರಾಗಿ ಹೆಸರು ಮಾಡಿದರು. ಮಂದಾರ್ತಿ, ಪೆರ್ಡೂರು, ಅಮೃತೇಶ್ವರಿ, ಸುರತ್ಕಲ್ ಮೇಳಗಳಲ್ಲಿ ಕಲಾಸೇವೆ ಮಾಡಿದ್ದಾರೆ. ಉಡುಪಿ ಯಕ್ಷಗಾನ ಕೇಂದ್ರದಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ನಿರಂತರ ಐದು ದಶಕಗಳಿಂದ ಯಕ್ಷಗಾನದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಪ್ರಸಕ್ತ ಉಡುಪಿ ಯಕ್ಷ ಶಿಕ್ಷಣ ಟ್ರಸ್ಟ್‌ನ ತರಬೇತುದಾರರಾಗಿ ಪ್ರೌಢಶಾಲಾ ಮಕ್ಕಳಿಗೆ ಯಕ್ಷಶಿಕ್ಷಣ ನೀಡುತ್ತಿದ್ದಾರೆ. ಪತ್ನಿ ಶಶಿಕಲಾ ಪ್ರಭು ಯಕ್ಷಗಾನ ಕಲಾವಿದೆಯಾಗಿದ್ದು, ಇವರ ಕುಟುಂಬವೇ ಯಕ್ಷಗಾನಕ್ಕೆ ಸಮರ್ಪಿಸಿಕೊಂಡಿದೆ.