ಬೆಳಗಾವಿ : ನಗರದ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯದ ಅರ್ಥಶಾಸ್ತ್ರ ವಿಭಾಗದ ವತಿಯಿಂದ ಮಾ. 7ರಂದು ರಾಜ್ಯ ಸರಕಾರದ 2025-26ರ ಸಾಲಿನ ಆಯವ್ಯಯ ಮಂಡನೆಯ ನೇರ ಪ್ರಸಾರ ಮತ್ತು ವಿಶ್ಲೇಷಣೆಯನ್ನು ಹಮ್ಮಿಕೊಂಡಿದ್ದರು. ಆಯವ್ಯಯದ ಕುರಿತು ಕಾಲೇಜಿನ ಪ್ರಾಚಾರ್ಯ ಪ್ರೊ. ಎಂ .ಜಿ. ಹೆಗಡೆ ಮಾತನಾಡಿ,
ಆಯವ್ಯಯವು ಆರ್ಥಿಕ ಸ್ಥಿತಿಗತಿಯ ಪ್ರತಿಬಿಂಬವಾಗಿದೆ. ರಾಜ್ಯದ ಅಭ್ಯುದಯದ ದಿಕ್ಕುದೆಸೆಗಳನ್ನು ತೋರ್ಪಡಿಸುವ ದಿಕ್ಷೂಚಿಯಾಗಿರುತ್ತದೆ. ಆಯವ್ಯಯವು ಸಮತೋಲನ ಮತ್ತು ಉಳಿತಾಯವಾಗಿದ್ದಲ್ಲಿ ರಾಜ್ಯವನ್ನು ಆರ್ಥಿಕವಾಗಿ ಸುಸ್ಥಿರವಾಗಿಡಿಸುತ್ತದೆ. ಇತ್ತೀಚಿನ ಸರಕಾರಗಳ ಆಯವ್ಯಯ ಕೊರತೆಯಿಂದ ಕೂಡಿರುತ್ತದೆ. ಅಂದರೆ, ನಿರೀಕ್ಷಿತ ಆದಾಯಕ್ಕಿಂತಲೂ, ನಿರೀಕ್ಷಿತ ವೆಚ್ಚವು ಜಾಸ್ತಿಯಾಗಿರುತ್ತದೆ. ಸಮಕಾಲೀನ ಸಂದರ್ಭದಲ್ಲಿ ಆರ್ಥಿಕ ಮೂಲಗಳಿಂದ ಸಂಪನ್ಮೂಲ ಕ್ರೋಡೀಕರಣ ಮಾಡುವುದು ಮತ್ತು ಅದನ್ನು ಸಂಗ್ರಹಿಸುವ ಗುರಿಯನ್ನು ತಲುಪುವುದು ಸವಾಲಿನ ಕಾರ್ಯವಾಗಿದೆ ಎಂದು ಹೇಳಿದರು.

ಶಿಕ್ಷಣ ಸಂಸ್ಥೆಗಳು ಪಠ್ಯದ ಜೊತೆಗೆ ಸಮಾಜ, ದೇಶ, ಬದುಕಿನ ಬಗೆಗೆ ಇರುವ ಇಂತಹ ಕಾರ್ಯಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ತೊಡಗಿಸಿಕೊಳ್ಳುವ ಉಪಕ್ರಮಗಳನ್ನು ಹಮ್ಮಿಕೊಳ್ಳಬೇಕು. ಸಮಕಾಲೀನ ಸಂದರ್ಭದಲ್ಲಿ ಇದು ಅವಶ್ಯಕವಾದುದು. ವಿದ್ಯಾರ್ಥಿಗಳು ರಾಜ್ಯ ಮತ್ತು ದೇಶದ ಆಯವ್ಯಯನ್ನು ಸಂಪೂರ್ಣ ಅರಿತುಕೊಂಡು ಅದನ್ನು ವಿಶ್ಲೇಷಿಸಬೇಕು. ಅದನ್ನು ತಮ್ಮ ಬದುಕಿನಲ್ಲಿಯೂ ಅಳವಡಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಅರ್ಜುನ ಜಂಬಗಿ ಅವರು ಭಾರತದಲ್ಲಿ ಮುಂಗಡ ಪತ್ರದ ಚರಿತ್ರೆಯನ್ನು ವಿದ್ಯಾರ್ಥಿಗಳಿಗೆ ವಿವರಿಸಿ, ಪ್ರತಿ ವ್ಯಕ್ತಿ, ಸಂಸ್ಥೆ, ಸಂಘ, ದೇಶಕ್ಕೂ ಆರ್ಥಿಕ ಶಿಸ್ತು ತುಂಬಾ ಅವಶ್ಯಕವಾಗಿದೆ. ಭಾರತವು ಜಾಗತಿಕವಾಗಿ ಐದನೆಯ ಆರ್ಥಿಕ ಶಕ್ತಿಯನ್ನು ಹೊಂದಿದ ದೇಶ. ರಾಜ್ಯದ ಆಯವ್ಯಯದಲ್ಲಿ ಎಲ್ಲಾ ಅಂಶಗಳು ಸಾಕಾರವಾಗಬೇಕು. ಆಗ ರಾಜ್ಯವು ಪ್ರಗತಿಯಲ್ಲಿ ವೇಗವನ್ನು ಕಾಣುತ್ತದೆ. ವಿದ್ಯಾರ್ಥಿಗಳಿಗೆ ದೇಶ ಮತ್ತು ರಾಜ್ಯದ ಆಯವ್ಯಯಗಳ ಬಗೆಗೆ ಕುತೂಹಲ ಇರಬೇಕು. ಇದರಿಂದ ಗಳಿಕೆ ಮತ್ತು ಉಳಿಕೆಯ ಬಗ್ಗೆ ಜ್ಞಾನ ಸಹಜವಾಗಿ ಬರುತ್ತದೆ ಎಂದರು.

ಕಾಲೇಜಿನ ಐಕ್ಯೂಎಸಿ ಸಂಯೋಜಕ ಶಿವಕುಮಾರ ಮೇಸ್ತ್ರಿ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಉಪನ್ಯಾಸಕ ರುದ್ರಪ್ಪ ಅರಳಿಮಟ್ಟಿ ನಿರೂಪಿಸಿದರು. ಉಪನ್ಯಾಸಕಿ ಜಯಶ್ರೀ ಉಪರಿ ಸ್ವಾಗತಿಸಿದರು. ಉಪನ್ಯಾಸಕಿ ಭಾಗ್ಯಶ್ರೀ ಹಿರೇಮನಿ ವಂದಿಸಿದರು. ಬೋಧಕವರ್ಗ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.