ನವದೆಹಲಿ : ರಾಷ್ಟ್ರೀಯ ಸ್ವಯಂ ಸೇವಕ ಸಂಘ (RSS)ದ ಚಟುವಟಿಕೆಗಳಲ್ಲಿ ಸರ್ಕಾರಿ ನೌಕರರು ಭಾಗವಹಿಸಲು ದಶಕಗಳ ಹಿಂದೆ ಜಾರಿಗೊಳಿಸಲಾಗಿದ್ದ ನಿಷೇಧವನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ವಾಪಸ್ ಪಡೆದಿದೆ.
ಈ ಕುರಿತು ಕಳೆದ ವಾರವೇ ಆದೇಶ ಹೊರಡಿಸಿದ್ದು, ಆರ್ ಎಸ್‍ಎಸ್ ಚಟುವಟಿಕೆಗಳಲ್ಲಿ ಸರ್ಕಾರಿ ಅಧಿಕಾರಿಗಳು ಭಾಗಿಯಾಗಲು ಇದ್ದ ನಿಷೇಧ ಹಿಂಪಡೆಯಲಾಗಿದೆ ಎಂದು ಸರ್ಕಾರದ ಉನ್ನತ ಮೂಲಗಳು ತಿಳಿಸಿವೆ. ಜುಲೈ 9 ರಂದು ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಈ ನಿಷೇಧವನ್ನು ಹಿಂಪಡೆದಿದೆ. 1966 ರಲ್ಲಿ ಸರ್ಕಾರಿ ನೌಕರರು ಆರ್ ಎಸ್ಎಸ್ ನಲ್ಲಿ ತೊಡಗಿಸಿಕೊಳ್ಳುವುದಕ್ಕೆ ನಿಷೇಧ ವಿಧಿಸಲಾಗಿತ್ತು.
ಬಿಜೆಪಿಯ ಐಟಿ ವಿಭಾಗದ ಮುಖ್ಯಸ್ಥ ಅಮಿತ್ ಮಾಳವಿಯಾ ಅವರು ಆದೇಶದ ಸ್ಕ್ರೀನಶಾಟ್ ಅನ್ನು ಹಂಚಿಕೊಂಡಿದ್ದು, 58 ವರ್ಷಗಳ ಹಿಂದೆ ನೀಡಲಾದ ಅಸಂವಿಧಾನಿಕ ನಿರ್ದೇಶನವನ್ನು ಮೋದಿ ಸರ್ಕಾರವು ಹಿಂಪಡೆದಿದೆ ಎಂದು ಹೇಳಿಕೊಂಡಿದ್ದಾರೆ.ಆದರೆ ಸರ್ಕಾರದ ಈ ಕ್ರಮವನ್ನು ಕಾಂಗ್ರೆಸ್ ನಾಯಕರು ತೀವ್ರವಾಗಿ ಟೀಕಿಸಿದ್ದು, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂವಹನ) ಜೈರಾಮ ರಮೇಶ್ ಅವರು ಜುಲೈ 9ರಂದು ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆಗಳು ಮತ್ತು ಪಿಂಚಣಿ ಸಚಿವಾಲಯವು ಆರ್ ಎಸ್‍ಎಸ್ ಚಟುವಟಿಕೆಗಳಲ್ಲಿ ಸರ್ಕಾರಿ ನೌಕರರ ಭಾಗವಹಿಸುವಿಕೆಗೆ ಸಂಬಂಧಿಸಿದಂತೆ ಹೊರಡಿಸಿದ ಕಚೇರಿ ಮೆಮೊರಾಂಡಮ್ ಅನ್ನು ಹಂಚಿಕೊಂಡಿದ್ದು, ಸರ್ಕಾರದ ಕ್ರಮವನ್ನು ಅವರು ಖಂಡಿಸಿದ್ದಾರೆ.
ಜುಲೈ 9 ರಂದು ಸಿಬ್ಬಂದಿ ಮತ್ತು ತರಬೇತಿ ಇಲಾಖೆ (DoPT) ಹೊರಡಿಸಿದ ಆದೇಶವನ್ನು X ನಲ್ಲಿ ಜೈರಾಮ್ ರಮೇಶ ಹಂಚಿಕೊಂಡಿದ್ದಾರೆ. 1966 ರಿಂದ ಜಾರಿಯಲ್ಲಿದ್ದ ಆರ್‌ಎಸ್‌ಎಸ್ (RSS )ಚಟುವಟಿಕೆಗಳಲ್ಲಿ ಸರ್ಕಾರಿ ಸಿಬ್ಬಂದಿ ಭಾಗವಹಿಸುವ ನಿಷೇಧವನ್ನು ತೆಗೆದುಹಾಕಲಾಗಿದೆ ಎಂದು ಅವರು ತಿಳಿಸಿದ್ದಾರೆ.
ನಾಥೂರಾಂ ಗೋಡ್ಸೆ ಅವರು ಮಹಾತ್ಮ ಗಾಂಧಿಯನ್ನು ಹತ್ಯೆ ಮಾಡಿದ ನಂತರ ಆರ್‌ಎಸ್‌ಎಸ್ (RSS ) ಅನ್ನು 1948 ರಲ್ಲಿ ಕಾನೂನುಬಾಹಿರ ಸಂಘಟನೆ ಎಂದು ಘೋಷಿಸಲಾಯಿತು. 1948ರ ಫೆಬ್ರುವರಿಯಲ್ಲಿ ಗಾಂಧೀಜಿಯವರ ಹತ್ಯೆಯ ನಂತರ ಸರ್ದಾರ್ ಪಟೇಲ್ ಅವರು ಆರ್‌ಎಸ್‌ಎಸ್ ಅನ್ನು ನಿಷೇಧಿಸಿದ್ದರು. ನಂತರ ಉತ್ತಮ ನಡವಳಿಕೆಯ ಭರವಸೆಯ ಮೇರೆಗೆ ನಿಷೇಧವನ್ನು ಹಿಂಪಡೆಯಲಾಯಿತು. ಇದಾದ ನಂತರವೂ ಆರ್‌ಎಸ್‌ಎಸ್ ನಾಗಪುರದಲ್ಲಿ ತಿರಂಗಾವನ್ನು ಹಾರಿಸಲಿಲ್ಲ ಎಂದು ಜೈರಾಮ ರಮೇಶ ಹೇಳಿದ್ದಾರೆ.
1966 ರಲ್ಲಿ ಮತ್ತೆ ನಿಷೇಧಿಸಲಾಗಿತ್ತು ಎಂದು ಅವರು ಉಲ್ಲೇಖಿಸಿದ್ದಾರೆ. ನಿಷೇಧ ಹಿಂಪಡೆದಿದ್ದನ್ನು ಖಂಡಿಸಿದ್ದಾರೆ. “ಜೂನ್ 4, 2024 ರ ನಂತರ, ಜೈವಿಕವಾಗಿ ಜನಿಸದ ವ್ಯಕ್ತಿ ಎಂದು ಸ್ವಯಂ ಘೋಷಿಸಿಕೊಂಡಿರುವ ಪ್ರಧಾನಿ ಮತ್ತು ಆರ್ ಎಸ್ಎಸ್ ನಡುವಿನ ಸಂಬಂಧಗಳು ಹದಗೆಟ್ಟಿದೆ. ಈ ಸಮಯದಲ್ಲೇ 58 ವರ್ಷಗಳ ನಿಷೇಧ ಹಿಂಪಡೆದಿರುವ ನಿರ್ಧಾರವನ್ನು ಅವರು ಪ್ರಶ್ನಿಸಿದ್ದಾರೆ. ಮಾಜಿ ಪ್ರಧಾನಿ ಅಟಲ್ ಬಿಹಾರಿ ಅವರ ಅವಧಿಯಲ್ಲೂ ಸರ್ಕಾರಿ ನೌಕರರು ಆರ್ ಎಸ್ಎಸ್ ನ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದಕ್ಕೆ ನಿರ್ಬಂಧ ಜಾರಿಯಲ್ಲಿತ್ತು ಎಂದು ಜೈರಾಮ ರಮೇಶ ಉಲ್ಲೇಖಿಸಿದ್ದಾರೆ.ನಿರ್ಧಾರ ಸ್ವಾಗತಿಸಿದ ಆರ್‌ಎಸ್‌ಎಸ್ :
ಕೇಂದ್ರ ಸರ್ಕಾರದ ನಿರ್ಧಾರವನ್ನು ಆರ್‌ಎಸ್‌ಎಸ್ ಸ್ವಾಗತಿಸಿದೆ. ಇದು ದೇಶದ ಪ್ರಜಾತಾಂತ್ರಿಕ ವ್ಯವಸ್ಥೆಯನ್ನು ಬಲಪಡಿಸುತ್ತದೆ ಎಂದು ಅದು ಹೇಳಿದೆ.
ಈ ಬಗ್ಗೆ ಪ್ರಕಟಣೆ ಹೊರಡಿಸಿರುವ ಆರ್‌ಎಸ್‌ಎಸ್ ವಕ್ತಾರ ಸುನಿಲ ಅಂಬೇಕರ ಅವರು, ರಾಷ್ಟ್ರೀಯ ಸ್ವಯಂ ಸೇವಕ ಸಂಘವು ಕಳೆದ 99 ವರ್ಷಗಳಿಂದ ರಾಷ್ಟ್ರದ ಪುನರ್ ನಿರ್ಮಾಣ ಮತ್ತು ಸಮಾಜ ಸೇವೆಯಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದೆ’ ಎಂದು ಹೇಳಿದ್ದಾರೆ.
“ರಾಷ್ಟ್ರೀಯ ಭದ್ರತೆ, ಏಕತೆ-ಸಮಗ್ರತೆ ಮತ್ತು ನೈಸರ್ಗಿಕ ವಿಕೋಪಗಳ ಸಮಯದಲ್ಲಿ ಆರ್‌ಎಸ್‌ಎಸ್ ಕೊಡುಗೆಯಿಂದಾಗಿ, ದೇಶದ ವಿವಿಧ ರೀತಿಯ ನಾಯಕತ್ವಗಳು ಕಾಲಕಾಲಕ್ಕೆ ಆರ್‌ಎಸ್‌ಎಸ್ ಪಾತ್ರವನ್ನು ಶ್ಲಾಘಿಸುತ್ತಿವೆ” ಎಂದು ಸುನಿಲ ಅಂಬೇಕರ್ ಹೇಳಿದ್ದಾರೆ. ತನ್ನ ರಾಜಕೀಯ ಹಿತಾಸಕ್ತಿಗಳಿಂದಾಗಿ ಅಂದಿನ ಸರ್ಕಾರವು ಸರ್ಕಾರಿ ನೌಕರರನ್ನು ಆರ್‌ಎಸ್‌ಎಸ್‌ನಂತಹ ಸಂಘಟನೆಯ ಚಟುವಟಿಕೆಗಳಲ್ಲಿ ಭಾಗವಹಿಸದಂತೆ ಆಧಾರರಹಿತವಾಗಿ ನಿಷೇಧಿಸಿತ್ತು’ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.