
ಹೆಬ್ರಿ: ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಾಣಿಜ್ಯ ಸಂಘ, ಐಕ್ಯುಎಸಿ, ಪ್ಲೇಸ್‌ಮೆಂಟ್ ಸೆಲ್, ಶಿಕ್ಷಣ ಫೌಂಡೇಶನ್ ಆಶ್ರಯದಲ್ಲಿ ಕೃತಕ ಬುದ್ಧಿಮತ್ತೆ (ಆರ್ಟಿಫಿಷಿಯಲ್ ಇಂಟಲಿಜೆನ್ಸ್) ವಿಷಯದಲ್ಲಿ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ಸರ್ಟಿಫಿಕೇಟ್ ಕೋರ್ಸ್ ಆರಂಭಿಸಲಾಯಿತು.
ಸಂಪನ್ಮೂಲ ವ್ಯಕ್ತಿ, ಶಿಕ್ಷಣ ಫೌಂಡೇಶನ್‌ನ ಆಶಾ ಶೆಟ್ಟಿ ಮಾತನಾಡಿ, ಇಂದು ಕೃತಕ ಬುದ್ಧಿಮತ್ತೆ ಎನ್ನುವುದು ಆವಿಷ್ಕಾರಗಳ ಹಿಂದಿನ ಶಕ್ತಿಯಾಗಿದೆ. ಡಿಜಿಟಲ್ ಸಹಾಯಕಗಳನ್ನು ಬಳಸಿಕೊಂಡು ಇಂದಿನ ಬಹುಪಾಲು ಸವಾಲಿನ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಎಐ ಬಹಳ ಉಪಯೋಗವಾಗುತ್ತಿದೆ. ವಿದ್ಯಾರ್ಥಿಗಳು ತಮಗೆ ಲಭ್ಯವಿರುವ ಎಐ ಸಾಧನಗಳನ್ನು ಬಳಸಿಕೊಂಡು ನಿಖರವಾಗಿ ಕಾರ್ಯಗಳನ್ನು ನಿರ್ವಹಿಸಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ವಿದ್ಯಾಧರ ಹೆಗ್ಡೆ ಮಾತನಾಡಿ, ಶಿಕ್ಷಣ ಫೌಂಡೇಶನ್‌ನ ಸಾಮಾಜಿಕ ಕಳಕಳಿ ಶ್ಲಾಘನೀಯ. ಕಾಲೇಜಿನ ಮೇಲಿನ ಪ್ರೀತಿಯಿಂದ ವಿದ್ಯಾರ್ಥಿಗಳಿಗಾಗಿ ಉಚಿತವಾಗಿ ನಡೆಸಿಕೊಟ್ಟ ಸರ್ಟಿಫಿಕೇಟ್ ಕೋರ್ಸ್ ವಿದ್ಯಾರ್ಥಿಗಳಿಗೆ ಮುಂದಿನ ದಿನಗಳಲ್ಲಿ ಬಹುಮುಖಿಯಾಗಿ ಪ್ರಯೋಜನಕ್ಕೆ ಬರಲಿದೆ ಎಂದರು.
ಉದ್ಯೋಗ ಮಾಹಿತಿ ಘಟಕದ ಸಂಚಾಲಕ ವಿಶ್ವೇಶ್ವರ ರಾವ್, ವಾಣಿಜ್ಯ ವಿಭಾಗ ಮುಖ್ಯಸ್ಥ ಗಣೇಶ ಎಸ್. ಭಾಗವಹಿಸಿದ್ದರು. ಅಕ್ಷತಾ ನಿರೂಪಿಸಿದರು.