ಬೆಳಗಾವಿ : ಚಾಕೋಲೆಟ್ ಅಮಿಷವೊಡ್ಡಿ ಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿದ ಪ್ರಕರಣದಲ್ಲಿ ಇದೀಗ ಬೆಳಗಾವಿ ನ್ಯಾಯಾಲಯ ಅಪರಾಧಿಗೆ ಗಲ್ಲು ಶಿಕ್ಷೆ ವಿಧಿಸಿ ಮಹತ್ವದ ತೀರ್ಪು ಪ್ರಕಟಿಸಿದೆ. ಬೆಳಗಾವಿಯ ನ್ಯಾಯಾಲಯ ಶುಕ್ರವಾರದಂದು ಈ ತೀರ್ಪು ಹೊರಡಿಸಿದೆ. ಮೂರು ವರ್ಷದ ಅಪ್ರಾಪ್ತೆಯನ್ನು ಅತ್ಯಾಚಾರ ಎಸಗಿ ಕೊಲೆ ಮಾಡಿದ ಆರೋಪಿಗೆ ಗಲ್ಲು ಶಿಕ್ಷೆ ಮತ್ತು 45,000 ದಂಡ ವಿಧಿಸಿದ ನ್ಯಾಯಾಲಯ ಇದೀಗ ಮತ್ತೊಂದು ಮಹತ್ವದ ತೀರ್ಪು ಪ್ರಕಟಿಸಿದೆ.

ರಾಯಬಾಗ ತಾಲೂಕಿನ ಗ್ರಾಮವೊಂದರಲ್ಲಿ 39 ವರ್ಷದ ವ್ಯಕ್ತಿ ಶಿಕ್ಷೆಗೆ ಗುರಿಯಾದವ. ಈತ ಬಾಲಕಿಯನ್ನು ಅತ್ಯಾಚಾರವೆಸಗಿ ನಂತರ ಕೊಲೆಗೈದಿದ್ದಾನೆ. ಈ ಹಿನ್ನಲೆಯಲ್ಲಿ ಬೆಳಗಾವಿಯ ನ್ಯಾಯಾಲಯ ಈಗ ರಾಜ್ಯದಲ್ಲೇ ಮತ್ತೊಂದು ಮಹತ್ವದ ವಿಶೇಷ ತೀರ್ಪು ಪ್ರಕಟಿಸಿದಂತಾಗಿದೆ.

ಬರೋಬ್ಬರಿ ಏಳು ವರ್ಷ:
2017 ರ ಸೆಪ್ಟೆಂಬರ್ 21ರಂದು ಹಾರೂಗೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಅಮಾನವೀಯ ಘಟನೆ ನಡೆಸಿದ್ದ. ತನಿಖಾಧಿಕಾರಿ ಸುರೇಶ ಶಿಂಗಿ ಅವರು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಆಟವಾಡುತ್ತಿದ್ದ ಬಾಲಕಿ ಗೆ ಚಾಕೋಲೆಟ್ ನೀಡಿದ ಅಪರಾಧಿ ನಂತರ ಆಕೆಯನ್ನು ಕಬ್ಬಿನ ಗದ್ದೆಗೆ ಹೊತ್ತೊಯ್ದು ಅತ್ಯಾಚಾರ ಎಸೆಗಿದ್ದ. ಬಾಲಕಿಯ ಬಾಯಿ, ಕಣ್ಣು, ಮೂಗಿನಲ್ಲಿ ಮಣ್ಣು ತುಂಬಿ ಬರ್ಬರವಾಗಿ ಕೊಲೆಗೈದಿದ್ದ. ಅರ್ಧ ದೇಹವನ್ನು ಮಣ್ಣಿನಲ್ಲಿ ಹೂತು ಹಾಕಿ ನಾಪತ್ತೆಯಾಗಿದ್ದ. ಘಟನೆ ನಡೆದು ಬರೋಬ್ಬರಿ ಏಳು ವರ್ಷಗಳ ನಂತರ ಇದೀಗ ನ್ಯಾಯಾಧೀಶರಾದ ಸಿ.ಎಂ. ಪುಷ್ಪಲತಾ ಅವರು ತೀರ್ಪು ಪ್ರಕಟಿಸಿದ್ದಾರೆ. ಸುಮಾರು 25 ಸಾಕ್ಷ್ಯಗಳು, 52 ದಾಖಲೆಗಳು ಮತ್ತು 8 ಮುದ್ದೆ ಮಾಲುಗಳನ್ನು ನ್ಯಾಯಾಧೀಶರು ಪರಿಗಣಿಸಿದ್ದಾರೆ. ಬಾಲಕಿಯ ಪೋಚಕರಿಗೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಿಂದ ಒಟ್ಟು 3,00,000 ₹ ಪಡೆಯಲು ಆದೇಶ ಹೊರಡಿಸಿದ್ದಾರೆ. ಸರಕಾರದ ಪರ ವಿಶೇಷ ಸರ್ಕಾರಿ ಅಭಿಯೋಜಕ ಎಲ್. ವಿ.ಪಾಟೀಲ ವಾದ ಮಂಡಿಸಿದ್ದರು.

ಬೆಳಗಾವಿಯ ವಿಶೇಷ ಶೀಘ್ರಗತಿ ಪೋಕ್ಸೋ ನ್ಯಾಯಾಲಯ ಕಳೆದ 20 ದಿನಗಳ ಅವಧಿಯಲ್ಲಿ ಸುಮಾರು 10 ಪ್ರಕರಣಗಳಲ್ಲಿ ಅಪ್ರಾಪ್ತೆಯರ ಮೇಲೆ ಅತ್ಯಾಚಾರ ಎಸಗಿದ ಘಟನೆಗಳ ಸಂಬಂಧ ಆರೋಪಿಗಳಿಗೆ ತ್ವರಿತಗತಿಯಲ್ಲಿ ಶಿಕ್ಷೆ ನೀಡುವ ಮೂಲಕ ಇಡೀ ರಾಜ್ಯದ ಗಮನ ಸೆಳೆದಿದೆ.