ಬೆಂಗಳೂರು : ಭಿಕ್ಷುಕನೊಬ್ಬನ ಯಡವಟ್ಟಿನಿಂದ ಇಡೀ ಪ್ರದೇಶದ ಜನರು ಆತಂಕಗೊಂಡ ಘಟನೆ ನಡೆದಿದೆ.
ಸ್ಥಳಕ್ಕೆ ಭೇಟಿ ನೀಡಿ ತಪಾಸಣೆ ನಡೆಸಿದ ಬಾಂಬ್ ಪತ್ತೆದಳ ಪರಿಶೀಲಿಸಿದ ನಂತರ ಎಲ್ಲರೂ ಒಂದು ಕ್ಷಣ ನಿಟ್ಟುಸಿರು ಬಿಟ್ಟರು. ಎಟಿಎಂ ಮಷೀನ್ ಬಳಿ ಭಿಕ್ಷುಕ ಇಟ್ಟು ಹೋದ ಬಾಕ್ಸ್‌ನಿಂದ ಭಾರೀ ಸಮಸ್ಯೆ ಉದ್ಭವಿಸಿತ್ತು. ಫೆಬ್ರವರಿ 12 ರಂದು ಮಿನರ್ವ ಸರ್ಕಲ್ ಬಳಿ ನಡೆದಿದ್ದ ಕೃತ್ಯ ತಡವಾಗಿ ಬೆಳಕಿಗೆ ಬಂದಿದೆ.
ಫೆಬ್ರವರಿ 12ರ ಬೆಳಿಗ್ಗೆ ಹತ್ತು ಗಂಟೆ ಸುಮಾರಿಗೆ ಮಿನರ್ವ ಸರ್ಕಲ್ ಬಳಿ ಹೈ ಡ್ರಾಮಾ ನಡೆದಿದೆ. ಭಿಕ್ಷುಕನೋರ್ವ ಕೋಟಕ್ ಮಹೇಂದ್ರ ಬ್ಯಾಂಕ್ ಎಟಿಎಂನ ಪಕ್ಕದಲ್ಲಿ ಬಾಕ್ಸ್ ಇಟ್ಟು ಪರಾರಿಯಾಗಿದ್ದ. ಆ ಬಾಕ್ಸ್ ಗಳನ್ನು ಎಟಿಎಂ ಒಳಭಾಗದಲ್ಲಿ ಹಣವನ್ನು ತುಂಬಲು ಉಪಯೋಗ ಮಾಡಲಾಗುತ್ತದೆ. ಇಂತಹ ಮೂರು ಬಾಕ್ಸ್‌ಗಳನ್ನು ಇಟ್ಟು ಭಿಕ್ಷುಕ ಓಡಿ ಹೋಗಿದ್ದ. ಎಟಿಎಂ ಬಳಿ ಬಾಕ್ಸ್ ಇರುವುದನ್ನು ಗಮನಿಸಿದ ಸೆಕ್ಯೂರಿಟಿ ಗಾರ್ಡ್‌ಗೆ ಅನುಮಾನ ಹುಟ್ಟಿಕೊಂಡಿತ್ತು. ಒಂದು ಕ್ಷಣ ಶಾಕ್‌ಗೆ ಒಳಗಾಗಿದ್ದು ತಕ್ಷಣವೇ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದರು. ಕರೆಯನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಸ್ಥಳಕ್ಕೆ ಧಾವಿಸಿದರು. ಸ್ಥಳಕ್ಕೆ ಬಂದ ಪೊಲೀಸರಿಗೆ, ಎಟಿಎಂನಲ್ಲಿದ್ದ ಹಣವನ್ನು ಕಳ್ಳತನ ಮಾಡಿ ಬಾಕ್ಸ್ ಇಟ್ಟಿರಬೇಕು.
ಇಲ್ಲವಾದಲ್ಲಿ ಬಾಕ್ಸ್‌ನಲ್ಲಿ ಏನಾದರು ಅನುಮಾನಾಸ್ಪದ ವಸ್ತುಗಳು ಇದೆಯಾ ಎಂಬ ಭಯ ಹುಟ್ಟಿಕೊಂಡಿತ್ತು. ಇದರಿಂದ ಫುಲ್ ಅಲರ್ಟ್ ಆದ ಪೊಲೀಸರು ಏರಿಯಾ ತುಂಬ ಹೈ ಅಲರ್ಟ್ ಮಾಡಿದರು. ಬಾಂಬ್ ನಿಷ್ಕ್ರಿಯ ದಳ ಬಂದ ನಂತರ ಅಲ್ಲಿ ಏನು ಇಲ್ಲ ಎಂಬುವುದು ಪತ್ತೆಯಾಗಿದೆ. ಬಾಕ್ಸ್‌ನಲ್ಲಿ ಏನೂ ಇಲ್ಲ. ಅವು ಖಾಲಿಯಾಗಿವೆ ಎಂಬ ಮಾಹಿತಿ ಗೊತ್ತಾಗುತ್ತಿದ್ದಂತೆ ಎಲ್ಲರೂ ನಿಟ್ಟುಸಿರು ಬಿಟ್ಟಿದ್ದಾರೆ.
ಇನ್ನು ಬೇರೊಂದು ಎಟಿಎಂ ಸಿಸಿಟಿವಿಯಲ್ಲಿ ಭಿಕ್ಷುಕನ ಚಲನವಲನ ಪತ್ತೆಯಾಗಿದೆ. ಸದ್ಯ ಹಣ ತುಂಬುವ ಬಾಕ್ಸ್ ಎಲ್ಲಿಂದ ಬಂತು ಎಂಬುವುದೇ ಯಕ್ಷಪ್ರಶ್ನೆಯಾಗಿದೆ. ಸದ್ಯ ಪೊಲೀಸರು ಭಿಕ್ಷುಕನಿಗಾಗಿ ಹುಡುಕಾಡುತ್ತಿದ್ದು ತನಿಖೆ ಮುಂದುವರಿದಿದೆ. ಕಲಾಸಿಪಾಳ್ಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.