ಬೆಳಗಾವಿ : ಜ್ಞಾನ ಸಂಪಾದನೆ ಮಾಡುವುದು ಮನುಷ್ಯನಿಗೆ ಮಾತ್ರ ಸಿಕ್ಕಿರುವ ಒಂದು ವಿಶಿಷ್ಟ ಶಕ್ತಿ. ಇದನ್ನು ಓದಿನ ಮೂಲಕವೇ ಪಡೆದುಕೊಳ್ಳಬೇಕು. ಓದು ವ್ಯಕ್ತಿಯ ವ್ಯಕ್ತಿತ್ವವನ್ನು ಬೆಳೆಸುತ್ತದೆ ಎಂದು
ಬೆಳಗಾವಿ ಜಿಲ್ಲಾ ಕೇಂದ್ರ ಗ್ರಂಥಾಲಯದ ಉಪನಿರ್ದೇಶಕ ರಾಮಯ್ಯ ಅಭಿಪ್ರಾಯಪಟ್ಟರು.
ನಗರದ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯದ ಗ್ರಂಥಾಲಯ ವಿಭಾಗದಿಂದ ಡಿ.18ರಂದು ಮಹಾವಿದ್ಯಾಲಯದ ಸಭಾಂಗಣದಲ್ಲಿ ಆಯೋಜಿಸಿದ್ದ ಪುಸ್ತಕ ಪ್ರದರ್ಶನ ಮತ್ತು ಮಾರಾಟ ಮೇಳ ಉದ್ಘಾಟಿಸಿ ಮಾತನಾಡಿದರು.
ಪ್ರತಿ ಪುಸ್ತಕವು ಜ್ಞಾನದ ದೀವಿಗೆಯಾಗಿದೆ. ಪುಸ್ತಕವನ್ನು ಪ್ರೀತಿಯಿಂದ ಕಾಣಬೇಕು. ಅದು ಓದುವ ಹವ್ಯಾಸವನ್ನು ವೃದ್ಧಿಸುತ್ತದೆ. ಇಂದಿನ ಸ್ಪರ್ಧಾತ್ಮಕ ಯುಗಕ್ಕೆ ಗ್ರಂಥಾಲಯದ ಪಾತ್ರ ಬಹು ದೊಡ್ಡದು. ವಿದ್ಯಾರ್ಥಿಗಳು ಅಂಕಗಳನ್ನು ಪಡೆಯುವುದರ ಜೊತೆಗೆ ಜ್ಞಾನವನ್ನು ಸಂಪಾದನೆ ಮಾಡಬೇಕು. ಜ್ಞಾನ ಮನುಷ್ಯನನ್ನು ದೊಡ್ಡ ಶಕ್ತಿಯನ್ನಾಗಿ ಬೆಳೆಸುತ್ತದೆ. ಜ್ಞಾನ ಹೊಂದಿದ್ದರೆ ಜಗತ್ತಿನಲ್ಲೆಡೆ ಗೌರವ, ಸಮ್ಮಾನವನ್ನು ಪಡೆಯಬಹುದು ಎಂದರು.
ಅಧ್ಯಕ್ಷತೆ ವಹಿಸಿದ್ದ ಮಹಾವಿದ್ಯಾಲಯದ ಪ್ರಾಚಾರ್ಯ ಎಂ.ಜಿ. ಹೆಗಡೆ ಮಾತನಾಡಿ, ಓದುವ ಹವ್ಯಾಸ ಮನುಷ್ಯನ ಇತರೆಲ್ಲ ಹವ್ಯಾಸಕ್ಕಿಂತ ಶ್ರೇಷ್ಠವಾದದ್ದು. ಎಲ್ಲಿ ಓದು ಇರುತ್ತದೆಯೋ ಅಲ್ಲಿ ಜ್ಞಾನ ಸಹಜವಾಗಿ ವೃದ್ಧಿಸುತ್ತದೆ. ಜಗತ್ತು ನಿಂತಿರುವುದು ಜ್ಞಾನದಿಂದಲೇ ಇಂದು ಜಗತ್ತನ್ನು ಆಳುತ್ತಿರುವುದು ಜ್ಞಾನ ಮಾತ್ರ. ಜ್ಞಾನಕ್ಕೆ ಇಡೀ ಜಗತ್ತೇ ತಲೆಬಾಗುತ್ತದೆ. ಪುಸ್ತಕ ಓದು ಏಕಾಗ್ರತೆಯನ್ನು ಹೆಚ್ಚಿಸುತ್ತದೆ. ಸಾಮಾಜಿಕ ಜಾಲತಾಣಗಳಿಂದಾಗಿ ಪುಸ್ತಕ ಓದು ಕ್ಷೀಣಿಸುತ್ತಿದೆ. ಆದರೆ ವಿದ್ಯುನ್ಮಾನ ಪ್ರತಿಗಿಂತಲೂ ಪುಸ್ತಕ ಓದುವುದು ಆರೋಗ್ಯಕ್ಕೂ ಉತ್ತಮ. ವಿದ್ಯಾರ್ಥಿಗಳು ಪುಸ್ತಕ ಮೇಳ ಮತ್ತು ಪ್ರದರ್ಶನವನ್ನು ಸದುಪಯೋಗ ಪಡೆದುಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ತಿಳಿಸಿದರು.
ಮಹಾವಿದ್ಯಾಲಯದ ಗ್ರಂಥಪಾಲಕಿ ಡಾ. ಭವಾನಿ ಶಂಕರ್ ಬಿ. ಸ್ವಾಗತಿಸಿದರು. ಗ್ರಂಥಾಲಯದ ಸಿಬಂದಿಗಳಾದ ರಶ್ಮಿ ಪಾಟೀಲ್ ಮತ್ತು ಭಾಗ್ಯಶ್ರೀ ಕುಲಕರ್ಣಿ ಪರಿಚಯಿಸಿದರು. ಶಿವಾನಂದ ಬಿ. ವಂದಿಸಿದರು. ವಿದ್ಯಾರ್ಥಿನಿ ಪಾರ್ವತಿ ಪಾಟೀಲ್ ಪ್ರಾರ್ಥಿಸಿದರು, ಶಾಂಭವಿ ಥೋರ್ಲಿ ನಿರೂಪಿಸಿದರು. ಮಹಾವಿದ್ಯಾಲಯದ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.