ಬೆಳಗಾವಿ : ವಿಜಯಪುರದಿಂದ ಬೆಳಗಾವಿಗೆ ಹೊರಟಿದ್ದ ಬಸ್ ನಿಯಂತ್ರಣ ತಪ್ಪಿ ಕಬ್ಬಿನ ಗದ್ದೆಗೆ ನುಗ್ಗಿದ ಘಟನೆ ಬೆಳಕಿಗೆ ಬಂದಿದೆ.

ಗುರುವಾರ ಮಧ್ಯಾಹ್ನ ವಿಜಯಪುರದಿಂದ ಅಥಣಿ ಮಾರ್ಗವಾಗಿ ಬೆಳಗಾವಿಗೆ ಹೊರಟಿದ್ದ ಬಸ್ಸಿನಲ್ಲಿ ಸುಮಾರು 55 ಪ್ರಯಾಣಿಕರು ಪ್ರಯಾಣ ಬೆಳೆಸಿದ್ದರು. ಬಸ್ ಕಾಗವಾಡ ತಾಲೂಕಿನ ನವಲಿಹಾಳ ಬಳಿ ಬಂದಾಗ ಬಸ್ಸಿನ ಫಾಟಾ ತುಂಡಾಗಿದೆ. ಚಾಲಕ ಕೂಡಲೇ ಬಸ್ ನಿಯಂತ್ರಿಸಲು ಪ್ರಯತ್ನಿಸಿದ್ದಾರೆ. ಹೆಚ್ಚಿನ ಅನಾಹುತ ತಪ್ಪಿಸುವ ನಿಟ್ಟಿನಲ್ಲಿ ದಿಢೀರನೆ ಕಬ್ಬಿನ ಗದ್ದೆಗೆ ನುಗ್ಗಿಸಿ ದೊಡ್ಡ ಅಪಘಾತ ತಪ್ಪಿಸಿದ್ದಾರೆ. ತುಸು ಗಾಯಗೊಂಡವರನ್ನು ಅಥಣಿ ಮತ್ತು ಸನಿಹದ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಕಾಗವಾಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಪಿಎಸ್ಐ ಜಿ.ಜಿ. ಬಿರಾದಾರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.