ಬೆಳಗಾವಿ: ವೀರ ರಾಣಿ ಕಿತ್ತೂರು ರಾಣಿ ಚೆನ್ನಮ್ಮಾ ಜೀ ಅವರ 200ನೇ ವರ್ಷದ ಈ ಐತಿಹಾಸಿಕ ವಿಜಯದ ಜ್ಞಾಪಕಾರ್ಥವಾಗಿ ಇದೇ ಅಕ್ಟೋಬರ್ 23ಕ್ಕೆ ರಾಣಿ ಚೆನ್ನಮ್ಮನ ಅಂಚೆ ಚೀಟಿಯನ್ನು ಕೇಂದ್ರ ಸರ್ಕಾರವು ಬಿಡುಗಡೆ ಮಾಡಲಿದೆ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಅವರು ಮೋದಿ ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿದ್ದಾರೆ.
ಬ್ರಿಟಿಷರ ವಿರುದ್ಧ ಸಾರಿದ ಸಂಗ್ರಾಮದ ವಿಜಯಕ್ಕೆ ಇದೇ ಅಕ್ಟೋಬರ್ 23ರಂದು 200 ವರ್ಷ ಸಂದಲಿದೆ. ಈ ಐತಿಹಾಸಿಕ ವಿಜಯದ ಜ್ಞಾಪಕಾರ್ಥವಾಗಿ ರಾಣಿ ಚೆನ್ನಮ್ಮನವರ ಅಂಚೆ ಚೀಟಿಯನ್ನು ಬಿಡುಗಡೆ ಮಾಡುವಂತೆ ಕಿತ್ತೂರು ಕರ್ನಾಟಕ ನಿಯೋಗದ ಪ್ರಮುಖರಾದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಶಾಸಕರಾದ ಅರವಿಂದ ಬೆಲ್ಲದ, ಅಭಯ ಪಾಟೀಲ, ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ, ಮಾಜಿ ಶಾಸಕರಾದ ಮಹಾಂತೇಶ ದೊಡ್ಡಗೌಡರ, ಡಾ. ವಿ.ಆಯ್. ಪಾಟೀಲ ಹಾಗೂ ಪ್ರಮುಖರೊಂದಿಗೆ ಕೇಂದ್ರ ಸಚಿವರಾದ ಜ್ಯೋತಿರಾದಿತ್ಯ ಸಿಂಧಿಯಾ ಅವರಲ್ಲಿ ಇದೇ 16.10.2024 ರಂದು ಆಗ್ರಹಿಸಲಾಗಿತ್ತು. ತಕ್ಷಣವೇ ರಾಣಿ ಚೆನ್ನಮ್ಮನ ಅಂಚೆ ಚೀಟಿಯನ್ನು ಇದೇ ಅಕ್ಟೋಬರ್ 23ಕ್ಕೆ ಬಿಡುಗಡೆ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಮೋದಿ ಸರ್ಕಾರದ ತ್ವರಿತ ನಿರ್ಧಾರವು ರಾಣಿ ಚೆನ್ನಮ್ಮನಿಗೆ ಸಲ್ಲಿಸುತ್ತಿರುವ ಗೌರವ ಎಂದರು.
ಈ ತ್ವರಿತ ನಿರ್ಧಾರ ಕೈಗೊಂಡ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಕೇಂದ್ರ ಸಚಿವರಾದ ಜ್ಯೋತಿರಾದಿತ್ಯ ಸಿಂಧಿಯಾ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಕೇಂದ್ರ ಸಂವಹನಾ ಸಚಿವಾಲಯಕ್ಕೆ ಹಾಗೂ ಕಿತ್ತೂರು ಕರ್ನಾಟಕ ನಿಯೋಗದ ಪ್ರಮುಖರಿಗೆ ರಾಜ್ಯದ ಜನತೆಯ ಪರವಾಗಿ ಹೃತ್ಪೂರ್ವಕ ಧನ್ಯವಾದಗಳನ್ನು ಸಂಸದ ಈರಣ್ಣ ಕಡಾಡಿ ತಿಳಿಸಿದ್ದಾರೆ.