ಬೆಳಗಾವಿ :
ಹೂಡಿಕೆದಾರರು ಉದ್ಯಮ ಸ್ಥಾಪನೆಗೆ ಸಲ್ಲಿಸಿದ ಅರ್ಜಿಗಳ ಕುರಿತು ಎಲ್ಲ ಇಲಾಖೆಗಳು ನಿಗದಿತ ಕಾಲಮಿತಿಯಲ್ಲಿ ತಮ್ಮ ಅಭಿಪ್ರಾಯ ನೀಡಬೇಕು. ಎಲ್ಲ ಷರತ್ತುಗಳನ್ನು ಪೂರೈಸುವ ಸಂದರ್ಭದಲ್ಲಿ ಏಕಗವಾಕ್ಷಿ ವ್ಯವಸ್ಥೆಯಲ್ಲಿ 30 ದಿನಗಳೊಳಗೆ ಅನುಮೋದನೆ ನೀಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದರು.

ತಮ್ಮ ಅಧ್ಯಕ್ಷತೆಯಲ್ಲಿ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆದ ರಾಜ್ಯ ಉನ್ನತ ಮಟ್ಟದ ಒಪ್ಪಿಗೆ ನೀಡುವ ಸಮಿತಿಯ ಸಭೆಯಲ್ಲಿ ಈ ಸೂಚನೆ ನೀಡಿದರು.

ಸಮಿತಿಯ ಮುಂದೆ ಮಂಡಿಸಲಾದ ಪ್ರಸ್ತಾವನೆಗಳ ಪರಿಶೀಲನೆಯ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿಗಳು, ಇಲ್ಲಿ ಒಪ್ಪಿಗೆ ಕೊಟ್ಟ ಬಳಿಕ ಕಡತಗಳು ಪುನಃ ವಿವಿಧ ಇಲಾಖೆಗಳಿಗೆ ಅಲೆಯುವಂತಾಗಬಾರದು ಎಂದು ಸೂಚನೆ ನೀಡಿದರು.

ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಪ್ರಸ್ತಾವನೆಗಳ ಪರಿಶೀಲನೆಯಲ್ಲಿ ವಿಳಂಬವಾಗುತ್ತಿರುವುದನ್ನು ಗಮನಿಸಿದ ಮುಖ್ಯಮಂತ್ರಿಗಳು, ನಿಗದಿತ ಕಾಲಮಿತಿಯಲ್ಲಿ ಕ್ರಮ ಕೈಗೊಳ್ಳುವಂತೆ ಮಾಲಿನ್ಯ ನಿಯಂತ್ರಣ ಮಂಡಳಿಗೆ ಸೂಚಿಸಿದರು.

ಪ್ರಸ್ತಾವನೆಗಳ ಕಡತ ಇಲಾಖೆಗಳ ಅಭಿಪ್ರಾಯಕ್ಕಾಗಿ ಬಂದಾಗ, ಇಲಾಖಾ ಸಚಿವರ ಗಮನಕ್ಕೆ ಈ ವಿಷಯವನ್ನು ಕಡ್ಡಾಯವಾಗಿ ತರಬೇಕು ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ಸಭೆಯಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌, ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್‌, ಸಚಿವರಾದ ಚೆಲುವರಾಯಸ್ವಾಮಿ, ಪ್ರಿಯಾಂಕ್‌ ಖರ್ಗೆ, ನಾಗೇಂದ್ರ, ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ರಜನೀಶ್‌ ಗೋಯೆಲ್‌, ಮುಖ್ಯಮಂತ್ರಿಯವರ ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ. ಅತೀಕ್‌, ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತ ಡಾ ಶಾಲಿನಿ ರಜನೀಶ್‌, ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಜಾವೇದ್‌ ಅಖ್ತರ್‌, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಡಾ.ಎಸ್.ಸೆಲ್ವಕುಮಾರ್‌ ಮತ್ತು ಇತರ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.