ನವದೆಹಲಿ :
ಅಯೋಧ್ಯೆ ರಾಮ ಮಂದಿರದ ಉದ್ಘಾಟನಾ ಸಮಾರಂಭದ ಆಹ್ವಾನವನ್ನು ತಿರಸ್ಕರಿಸಿದ ಕಾಂಗ್ರೆಸ್ನ ನಿರ್ಧಾರವನ್ನು ಗುಜರಾತ್ ಕಾಂಗ್ರೆಸ್ ಹಿರಿಯ ನಾಯಕ ಅರ್ಜುನ ಮೊದ್ವಾಡಿಯಾ ಬುಧವಾರ ಸಾರ್ವಜನಿಕವಾಗಿ ಟೀಕಿಸಿದ್ದಾರೆ.
ಎಕ್ಸ್ನಲ್ಲಿ ಮಾಡಿದ ಪೋಸ್ಟ್ನಲ್ಲಿ, ಅರ್ಜುನ್ ಮೊದ್ವಾಡಿಯಾ ಅವರು ಹಿರಿಯ ನಾಯಕ ಜೈರಾಮ ರಮೇಶ ಅವರ ಹೇಳಿಕೆಯ ಪ್ರತಿಯನ್ನು ಪೋಸ್ಟ್ ಮಾಡಿದ್ದಾರೆ. ಅದರ ಜೊತೆಯಲ್ಲಿ ರಾಮ ಮಂದಿರದ ಉದ್ಘಾಟನಾ ಸಮಾರಂಭದ ಆಹ್ವಾನ ತಿರಸ್ಕರಿಸುವ ಕಾಂಗ್ರೆಸ್ಸಿನ ನಿರ್ಧಾರವನ್ನೂ ಟೀಕಿಸಿದ್ದಾರೆ.
“ಭಗವಾನ್ ಶ್ರೀರಾಮ ಆರಾಧ್ಯ ದೇವರು. ಇದು ದೇಶವಾಸಿಗಳ ನಂಬಿಕೆಯ ವಿಷಯವಾಗಿದೆ. ಕಾಂಗ್ರೆಸ್ ಇಂತಹ ರಾಜಕೀಯ ನಿರ್ಧಾರಗಳನ್ನು ತೆಗೆದುಕೊಳ್ಳುವುದರಿಂದ ದೂರವಿರಬೇಕು” ಎಂದು ಅವರ ಪೋಸ್ಟ್ ಹೇಳಿದೆ.
ಎಡರಂಗವು ಅಹ್ವಾನವನ್ನು ತಿರಸ್ಕರಿಸಿದ ಕೆಲವು ದಿನಗಳ ನಂತರ, ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ ಮತ್ತು ಲೋಕಸಭೆಯ ನಾಯಕ ಅಧೀರ್ ಚೌಧರಿ ಅವರು ಆಹ್ವಾನವನ್ನು ತಿರಸ್ಕರಿಸಿದ್ದಾರೆ. ರಾಮ ಮಂದಿರ ಉದ್ಘಾಟನಾ ಕಾರ್ಯಕ್ರಮ ಬಿಜೆಪಿಯ “ರಾಜಕೀಯ ಯೋಜನೆ” ಎಂದು ಆರೋಪಿಸಿದರು.
“ಧರ್ಮವು ವೈಯಕ್ತಿಕ ವಿಷಯವಾಗಿದೆ. ಆದರೆ ಆರೆಸ್ಸೆಸ್/ಬಿಜೆಪಿಯು ಅಯೋಧ್ಯೆಯಲ್ಲಿ ದೇವಾಲಯದ ರಾಜಕೀಯ ಯೋಜನೆಯನ್ನು ಬಹಳ ಹಿಂದಿನಿಂದಲೂ ಮಾಡುತ್ತಿದೆ. ಬಿಜೆಪಿ ಮತ್ತು ಆರೆಸ್ಸೆಸ್ ನಾಯಕರಿಂದ ಅಪೂರ್ಣ ದೇವಾಲಯದ ಉದ್ಘಾಟನೆಯನ್ನು ಚುನಾವಣಾ ಲಾಭಕ್ಕಾಗಿ ನಿಸ್ಸಂಶಯವಾಗಿ ಮೊದಲೇ ಮಾಡಲಾಗುತ್ತಿದೆ” ಎಂದು ಜೈರಾಮ್ ರಮೇಶ್ ಹೇಳಿಕೆ ತಿಳಿಸಿದೆ.
ಇದು ಬಿಜೆಪಿ ನಾಯಕರಿಂದ ಖಂಡನೆಗಳಿಗೆ ಕಾರಣವಾಯಿತು. ಕಾಂಗ್ರೆಸ್ ಹಿಂದೂ ವಿರೋಧಿ ಎಂದು ಆರೋಪಿಸಿದೆ.
ಅಯೋಧ್ಯೆಯಲ್ಲಿ ಮಂದಿರ ನಿರ್ಮಾಣಕ್ಕಾಗಿ ಕಳೆದ ಕೆಲವು ದಶಕಗಳಿಂದ ಕಾಂಗ್ರೆಸ್ ಯಾವುದೇ ಕ್ರಮಗಳನ್ನು ತೆಗೆದುಕೊಳ್ಳಲಿಲ್ಲ. ಅವರು ರಾಮನ ಅಸ್ತಿತ್ವವನ್ನು ನಿರಾಕರಿಸಿದರು ಮತ್ತು ಸುಪ್ರೀಂ ಕೋರ್ಟ್ನಲ್ಲಿ ವಿಚಾರಣೆಯನ್ನು ವಿಳಂಬಗೊಳಿಸಿದರು. ಆದ್ದರಿಂದ, ರಾಮ ಮಂದಿರ ಪ್ರಾಣ ಪ್ರತಿಷ್ಠಾಕ್ಕೆ ಹಾಜರಾಗಲು ಹೋಗುತ್ತಿಲ್ಲ ಎಂದು ಕಾಂಗ್ರೆಸ್ ಪಕ್ಷ ಅಧಿಕೃತವಾಗಿ ಹೇಳಿದೆ. ಎಂದು ಬಿಜೆಪಿ ವಕ್ತಾರ ನಳಿನ್ ಕೊಹ್ಲಿ ಹೇಳಿದ್ದಾರೆ.
“ರಾಮನನ್ನು ಕಾಲ್ಪನಿಕ ಎಂದು ಕರೆದವರಿಗೆ ಇದು ಹೊಸದೇನಲ್ಲ. 2024 ರಲ್ಲಿ ಭಗವಾನ್ ರಾಮನನ್ನು ಬಹಿಷ್ಕರಿಸಿದ ಕಾಂಗ್ರೆಸ್ ಅನ್ನು ಜನರು ಬಹಿಷ್ಕರಿಸಲಿದ್ದಾರೆ” ಎಂದು ಕೇಂದ್ರ ಸಚಿವ ಅನುರಾಗ ಠಾಕೂರ್ ಹೇಳಿದ್ದಾರೆ.