
ಬೆಂಗಳೂರು : ಜಾತಿಗಣತಿ ವರದಿಯನ್ನು ಜಾರಿಗೆ ತರಲು ರಾಜ್ಯ ಸರಕಾರ ವಿಶೇಷ ಸಚಿವ ಸಂಪುಟ ಸಭೆ ನಡೆಸಿದ್ದು, ಆದ್ರೆ ಸಭೆಯಲ್ಲಿ ಯಾವುದೇ ತೀರ್ಮಾನ ಕೈಗೊಳ್ಳದೇ ಮುಂದಿನ ಸಭೆಯಲ್ಲಿ ಚರ್ಚೆಗೆ ಇರಿಸಿ ಅಂತ್ಯಗೊಂಡಿದೆ.
ಇಂದು ಸಿಎಂ ಸಿದ್ಧರಾಮಯ್ಯ ನೇತೃತ್ವದಲ್ಲಿ ವಿಶೇಷ ಸಚಿವ ಸಂಪುಟ ಸಭೆ ವಿಧಾನಸೌಧದಲ್ಲಿ ನಡೆಯಿತು. ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಸಮೀಕ್ಷೆ ವರದಿ ಹಿಂದುಳಿದ ವರ್ಗಗಳ ಸಾಮಾಜಿಕ, ಶೈಕ್ಷಣಿಕ, ಜೀವನೋಪಾಯ | ಔದ್ಯೋಗಿಕ ಸ್ಥಿತಿಗತಿ ಅರಿಯಲು ಹಾಗೂ ಯೋಜನೆಗಳನ್ನು ಸಮರ್ಪಕವಾಗಿ ರೂಪಿಸಿ ಅದರಂತೆ ಅನುಷ್ಠಾನಗೊಳಿಸಲು ಅಂಕಿ-ಅಂಶಗಳ ವಿವರಗಳು ಅವಶ್ಯಕವಾಗಿದೆ ಎಂದು ರಾಜ್ಯ ಸರ್ಕಾರ ಜಾತಿಗಣತಿ ವರದಿಯನ್ನು ಸಮರ್ಥನೆ ಮಾಡಿಕೊಂಡಿದೆ.
ಈಗಿರುವ ಒಬಿಸಿ ಮೀಸಲಾತಿ ಪ್ರಮಾಣ ಹೆಚ್ಚಳ ಮಾಡಬೇಕು. ಒಬಿಸಿ ಮೀಸಲಾತಿ ಪ್ರಮಾಣ ಶೇ.32ರಿಂದ 51ಕ್ಕೆ ಹೆಚ್ಚಿಸಬೇಕು ಅಂತ ಹಿಂದುಳಿದ ವರ್ಗಗಗಳ ಕಲ್ಯಾಣ ಇಲಾಖೆಯಿಂದ ವಿಶೇಷ ಸಚಿವ ಸಂಪುಟಕ್ಕೆ ಪ್ರಸ್ತಾವನೆ ಮಂಡನೆ ಮಾಡಲಾಯಿತು.
ತಮಿಳುನಾಡಿನಲ್ಲಿ ಒಬಿಸಿ ಮೀಸಲಾತಿ ಶೇಕಡಾ 69ರಷ್ಟಿದೆ. ಜಾರ್ಖಂಡ್ ನಲ್ಲಿ ಹಿಂದುಳಿದ ವರ್ಗಕ್ಕೆ ಶೇ.77ರಷ್ಟು ಮೀಸಲಾತಿ ಇದೆ. ಆ ರಾಜ್ಯಗಳಂತೆ ನಮ್ಮ ರಾಜ್ಯದಲ್ಲೂ ಒಬಿಸಿ ವರ್ಗಕ್ಕೆ ಮೀಸಲಾತಿ ಹೆಚ್ಚಿಸಿ ಅಂತ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಪ್ರಸ್ತಾವನೆಯನ್ನು ಸಂಪುಟದ ಮುಂದೆ ಇಡಲಾಯಿತು.
ಕೆಲ ಸಚಿವರು ಜಾತಿಗಣತಿ ವರದಿಗೆ ವಿರೋಧ ವ್ಯಕ್ತಪಡಿಸಿ ಏರು ಧ್ವನಿಯಲ್ಲೇ ಮಾತನಾಡಿದ್ದು, ಹೀಗಾಗಿ ಸಚಿವರಿಂದ ವೈಯಕ್ತಿಕ ಅಭಿಪ್ರಾಯ ಸಂಗ್ರಹಿಸೋದಕ್ಕೂ ಸಿಎಂ ಸಿದ್ಧರಾಮಯ್ಯ ಮುಂದಾದರು. ಜಾತಿಗಣತಿ ವರದಿಯ ಬಗ್ಗೆ ಸಚಿವರು ತಮ್ಮ ಅಭಿಪ್ರಾಯ ತಿಳಿಸುವಂತೆ ಸಿಎಂ ಸೂಚಿಸಿದ್ದಾರೆ. ಮೌಖಿಕವಾಗಿ ನೀಡಬಹುದು ಅಥವಾ ಲಿಖಿತವಾಗಿ ನೀಡಬಹುದಾಗಿದೆ.