ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನ್ಯಾಯಾಲಯ ಇದೀಗ ತಾತ್ಕಾಲಿಕ ರಿಲೀಫ್ ನೀಡಿದೆ. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ನಿವೇಶನ ಹಂಚಿಕೆಯಲ್ಲಿ ಆಗಿರುವ ಅಕ್ರಮಕ್ಕೆ ಸಂಬಂಧಿಸಿ ತನಿಖೆಗೆ ಅನುಮತಿ ನೀಡಿದ ರಾಜ್ಯಪಾಲರ ಆದೇಶವನ್ನು ವಜಾಗೊಳಿಸುವಂತೆ ಕೋರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಲ್ಲಿಸಿರುವ ಅರ್ಜಿ ಕುರಿತ ವಿಚಾರಣೆಯನ್ನು ಆ.31ಕ್ಕೆ ಮುಂದೂಡಿದೆ.
ಸಿದ್ದರಾಮಯ್ಯ ಪರ ಹಿರಿಯ ವಕೀಲ ಅಭಿಷೇಕ್ ಮನುಸಿಂಫ್ಟಿ ಅವರು ವಾದ ಮಂಡಿಸಿದ್ದರು.
ಆ.31ರಂದು ಬೆಳಿಗ್ಗೆ 10.30ಕ್ಕೆ ಮತ್ತೆ ವಿಚಾರಣೆ ಆರಂಭವಾಗಲಿದೆ.
ಆದಾಯ ಮೀರಿ ಆಸ್ತಿ ಗಳಿಕೆ ವಿಚಾರದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ವಿರುದ್ಧ ಅರ್ಜಿ ಸಲ್ಲಿಸಿದ್ದ ಸಿಬಿಐ ಇಂದು ಕೋರ್ಟ್‌ನಲ್ಲಿ ವಿಚಾರಣೆಗೆ ಹಾಜರಾಯಿತು. ಈ ವೇಳೆ ಅರ್ಜಿ ವಜಾಗೊಳಿಸಿದ ನ್ಯಾಯಾಲಯ, ರಾಜ್ಯ- ಸಿಬಿಐ ನಡುವಿನ ವಿವಾದ ಸುಪ್ರೀಂಕೋರ್ಟ್ ತೀರ್ಮಾನಿಸಬೇಕು ಎಂದು ತಿಳಿಸುವ ಮೂಲಕ ಡಿಕೆಶಿಗೆ ತಾತ್ಕಾಲಿಕ ರಿಲೀಫ್ ನೀಡಿದೆ.
ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಯವರ ಮೇಲಿನ ಆರೋಪಗಳ ಕುರಿತು ಇಂದು ನ್ಯಾಯಾಲಯದಲ್ಲಿ ಯಾವ ರೀತಿ ಆದೇಶ ಬರುತ್ತದೆ ಎಂಬ ಬಗ್ಗೆ ನಾಡಿನ ಜನತೆಯಲ್ಲಿ ಭಾರೀ ಕುತೂಹಲ ಕೆರಳಿಸಿತ್ತು.
ನನಗೆ ನ್ಯಾಯ ಸಿಕ್ಕಿದೆ; ಇದು ಸರ್ಕಾರ ಹಾಗೂ ಜನರಿಗೆ ಸಿಕ್ಕಿರುವ ಗೆಲುವು: ಡಿಸಿಎಂ ಡಿ.ಕೆ. ಶಿವಕುಮಾರ್
ಬೆಂಗಳೂರು :
“ನಾನು ನಂಬಿದ್ದಂತೆ ನ್ಯಾಯಾಲಯದಲ್ಲಿ ನನಗೆ ನ್ಯಾಯ, ರಕ್ಷಣೆ ಸಿಕ್ಕಿದೆ. ಇದು ನನಗಿಂತ ಸರ್ಕಾರ ಹಾಗೂ ರಾಜ್ಯದ ಜನರಿಗೆ ಸಿಕ್ಕ ಗೆಲುವು. ನನ್ನ ಪರವಾಗಿ ವಾದ ಮಾಡಿದವರಿಗೆ ಹಾಗೂ ಸರ್ಕಾರಕ್ಕೆ ಅಭಿನಂದನೆ ತಿಳಿಸುತ್ತೇನೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.
ಆದಾಯ ಮೀರಿ ಆಸ್ತಿ ಸಂಪಾದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಹಾಗೂ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಅರ್ಜಿಯನ್ನು ಮಾನ್ಯ ಹೈಕೋರ್ಟ್ ವಜಾಗೊಳಿಸಿ ತೀರ್ಪು ಪ್ರಕಟಿಸಿದ ಬಳಿಕ ಶಿವಕುಮಾರ್ ಅವರು ಬುಧವಾರ ಮಾಧ್ಯಮಗಳಿಗೆ ಮಾಹಿತಿ ನೀಡಿದರು.
“ಸರ್ಕಾರದ ತೀರ್ಮಾನ ಸರಿ ಇದೆ ಎಂದು ಹೈಕೋರ್ಟ್ ತಿಳಿಸಿದೆ. ಸಿಬಿಐನವರು ಈ ವಿಚಾರ ಇಲ್ಲಿಗೆ ಬಿಟ್ಟರೂ ಬಿಡಬಹುದು. ಅಥವಾ ಸುಪ್ರೀಂ ಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಬಹುದು. ನನಗೆ ಅನ್ಯಾಯವಾಗಿದ್ದರೆ ನಾನು ಸುಪ್ರೀಂ ಕೋರ್ಟ್ ಮೆಟ್ಟಿಲೇರುತ್ತಿದ್ದೆ. ಪಶ್ಚಿಮ ಬಂಗಾಳದ ನ್ಯಾಯಾಲಯದಲ್ಲಿನ ಇತ್ತೀಚಿನ ಆದೇಶದ ಬಗ್ಗೆಯೂ ಹೇಳಲಾಗಿದೆ. ನನಗೆ ನ್ಯಾಯಾಲಯದ ಮೇಲೆ ನಂಬಿಕೆ ಇದೆ. ನಾವು ಯಾರಿಗೂ ಮೋಸ ಮಾಡುವ ಅವಶ್ಯಕತೆ ಇಲ್ಲ. ಆ ಕೆಲಸ ಮಾಡಿಲ್ಲ. ಕಾನೂನು ನನಗೆ ರಕ್ಷಣೆ ಕೊಟ್ಟಿದೆ” ಎಂದು ತಿಳಿಸಿದರು.
“ನಾವು ಬಹಳ ಶ್ರಮವಹಿಸಿ ರಾಜಕಾರಣ ಮಾಡಿಕೊಂಡು ಬಂದಿದ್ದೇವೆ. ಬಿಜೆಪಿ ಸರ್ಕಾರ ನಮ್ಮ ಮೇಲೆ ಬಹಳಷ್ಟು ಕಳಂಕ ಹೊರಿಸುತ್ತಾ ಬರುತ್ತಿದೆ. ದೇಶದಲ್ಲಿ ಸಾವಿರಾರು ಪ್ರಕರಣಗಳಿವೆ. ಯಾವುದೇ ಪ್ರಕರಣವಾದರೂ ತನಿಖೆ ಮಾಡಲು ಸರ್ಕಾರಕ್ಕೆ ಅಧಿಕಾರವಿದೆ. ಈ ಹಿಂದಿನ ಬಿಜೆಪಿ ಸರ್ಕಾರ ನನ್ನ ವಿರುದ್ಧದ ಪ್ರಕರಣವನ್ನು ಲೋಕಾಯುಕ್ತ ಸಂಸ್ಥೆಗೆ ನೀಡಿ ತನಿಖೆ ಮಾಡಿಸಬಹುದಾಗಿತ್ತು. ಇಲ್ಲಿಯವರೆಗೂ ಯಾವುದೇ ಆದಾಯ ಮೀರಿ ಆಸ್ತಿ ಸಂಪಾದನೆ ಪ್ರಕರಣವನ್ನು ಸಿಬಿಐಗೆ ವಹಿಸಲಾಗಿಲ್ಲ. ಆದರೆ ನನ್ನ ವಿರುದ್ಧದ ಪ್ರಕರಣವನ್ನು ಯಡಿಯೂರಪ್ಪನವರ ಸರ್ಕಾರ ಸಿಬಿಐಗೆ ನೀಡಿತ್ತು. ಅವರು ಯಾವ ಕಾರಣಕ್ಕೆ ನೀಡಿದ್ದರು ಎಂಬುದು ನಿಮ್ಮೆಲ್ಲರಿಗೂ ಗೊತ್ತಿದೆ” ಎಂದು ತಿಳಿಸಿದರು.
“ನನ್ನ ವಿರುದ್ಧ ಪಿಎಂಎಲ್ಎ ಪ್ರಕರಣ ದಾಖಲಿಸಿ ನನ್ನನ್ನು ಜೈಲಿಗೂ ಕಳುಹಿಸಿದರು. ನಾನು ಜೈಲನ್ನೂ ನೋಡಿದೆ. ನಾನು ಅಂದೂ ಕೂಡ ನ್ಯಾಯ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದೆ. ಇದೇ ಕೇಸಿನಲ್ಲಿ ಇಡಿ ದಾಖಲಿಸಿದ್ದ ಪ್ರಕರಣವೂ ವಜಾಗೊಂಡಿತ್ತು. ನಾನು ತಪ್ಪು ಮಾಡಿಲ್ಲ ಎಂದು ಅಂದೂ ವಾದ ಮಾಡಿದ್ದೆ. ಇಂದು ಅದನ್ನೇ ಹೇಳುತ್ತಿದ್ದೇನೆ. ಈ ಜಯ ನನಗಿಂತ ಹೆಚ್ಚಾಗಿ ಕರ್ನಾಟಕ ರಾಜ್ಯದ ಸರ್ಕಾರಕ್ಕೆ ಸಲ್ಲಬೇಕು. ನಮ್ಮ ಮುಖ್ಯಮಂತ್ರಿಗಳು ಈ ಪ್ರಕರಣವನ್ನು ಸಿಬಿಐಗೆ ವಹಿಸಿರುವುದು ಸರಿಯಲ್ಲ. ಪ್ರಕರಣದ ತನಿಖೆ ನಡೆಯಲಿ, ಎಲ್ಲಾ ಪ್ರಕರಣಗಳಂತೆ ಈ ಪ್ರಕರಣವೂ ಲೋಕಾಯುಕ್ತದಲ್ಲಿ ತನಿಖೆಯಾಗಲಿ ಎಂದು ವರ್ಗಾವಣೆ ಮಾಡಿದರು. ಈಗ ಲೋಕಾಯುಕ್ತ ಸಂಸ್ಥೆ ತನಿಖೆ ಮಾಡುತ್ತಿದ್ದು, ನನಗೆ ಅವರು ಸಮನ್ಸ್ ಮಾಡಿ ವಿಚಾರಣೆ ನಡೆಸಿದ್ದಾರೆ. ನಾನು ಎಲ್ಲಾ ಅಗತ್ಯ ದಾಖಲೆಗಳನ್ನು ಸಲ್ಲಿಸಿದ್ದೇನೆ” ಎಂದು ತಿಳಿಸಿದರು.
“ಈ ಮಧ್ಯೆ, ಸಿಬಿಐನವರು ಈ ಪ್ರಕರಣವನ್ನು ನಾವೇ ತನಿಖೆ ಮಾಡಬೇಕು ಎಂದು ವಾದ ಮಂಡಿಸಿದ್ದಾರೆ. ಸಿಬಿಐ ಶೇ.90 ರಷ್ಟು ತನಿಖೆ ಪೂರ್ಣಗೊಂಡಿದೆ ಎಂದು ಹೇಳಿದ್ದರು. ಅವರು ನನ್ನ ವಿಚಾರಣೆ ಮಾಡದೇ ಹೇಗೆ ಅರ್ಧ ವಿಚಾರಣೆ ಪೂರ್ಣಗೊಳಿಸಲು ಸಾಧ್ಯ? ಅವರು ಕೊಟ್ಟ ನೊಟೀಸ್ ಗೆ ದಾಖಲೆ ಒದಗಿಸಿದ್ದೆ. ನನ್ನ ಆಸ್ತಿ ಎಷ್ಟಿದೆ ಎಂದು ನನಗೆ ಗೊತ್ತಿದೆ. ನಾವು ಈ ವಿಚಾರವಾಗಿ ದಾಖಲೆ ಕೊಟ್ಟಿದ್ದೇವೆ. ಆ ದಾಖಲೆಗಳನ್ನು ಬದಲಿಸಲು ಸಾಧ್ಯವಿಲ್ಲ. ಆದರೆ ತೊಂದರೆ ಕೊಡಬೇಕು ಎಂಬ ಉದ್ದೇಶವಿದ್ದರೆ ತೊಂದರೆ ನೀಡಬಹುದು. ಈ ಮಧ್ಯೆ ಮತ್ತೊಬ್ಬ ನಾಯಕ ಈ ವಿಚಾರದಲ್ಲಿ ಅರ್ಜಿ ಹಾಕಿದ್ದರು. ಅವರು ನನ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಳ್ಳು ಹೇಳಿಕೆ ನೀಡಿರುವ ಹಿನ್ನೆಲೆಯಲ್ಲಿ ಮಾನಹಾನಿ ಮೊಕದ್ದಮೆ ಹೂಡಿದ್ದೇನೆ” ಎಂದರು.
*ಯತ್ನಾಳ್ ಗೂ ಈ ಪ್ರಕರಣಕ್ಕೂ ಏನು ಸಂಬಂಧ?*
ಸುಪ್ರೀಂ ಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸುತ್ತೇನೆ ಎಂಬ ಬಗ್ಗೆ ಕೇಳಿದಾಗ, “ಅದಕ್ಕೆ ನಾನು ಬೇಡ ಎನ್ನುವುದಿಲ್ಲ. ಯತ್ನಾಳ್ ಗೂ ಈ ಪ್ರಕರಣಕ್ಕೂ ಏನು ಸಂಬಂಧ. ನನ್ನ ಪ್ರಕಾರ ಸಿಬಿಐಗೂ ಈ ಪ್ರಕರಣಕ್ಕೂ ಸಂಬಂಧವಿಲ್ಲ. ಸಿಬಿಐ ಕೂಡ ಪೊಲೀಸ್ ಠಾಣೆ ಇದ್ದಂತೆ. ಸಿಬಿಐ ಸರ್ಕಾರ ಅಲ್ಲ. ಇದು ಸರ್ಕಾರಗಳ ವಿಚಾರ” ಎಂದು ತಿಳಿಸಿದರು.
*ಸಾಯುವ ತನಕ ಈ ಹೋರಾಟ ಇದ್ದದ್ದೆ*
ಇದನ್ನು ರಿಲೀಫ್ ಎಂದು ಭಾವಿಸುತ್ತೀರಾ ಅಥವಾ ಮತ್ತೊಂದು ಹೋರಾಟವೆಂದು ಭಾವಿಸುತ್ತೀರಾ ಎಂದು ಕೇಳಿದಾಗ, “ನಾನು ಸಾಯುವವರೆಗೂ ನನ್ನ ವಿರುದ್ಧ ಪಿತೂರಿ ಇರಲಿದೆ. ಇದರ ವಿರುದ್ದ ನನ್ನ ಹೋರಾಟ ಇರಲಿದೆ. ನನ್ನ ಸ್ನೇಹಿತರು ಕೊನೆವರೆಗೂ ನನಗೆ ಈ ರೀತಿ ತೊಂದರೆ ಕೊಡುತ್ತಲೇ ಇರುತ್ತಾರೆ. ಇದನ್ನು ನಾವು ಎದುರಿಸಿ ಹೋರಾಟ ಮಾಡಲೇಬೇಕು” ಎಂದು ತಿಳಿಸಿದರು.
ಯತ್ನಾಳ್ ಹಿಂದಿರುವ ನಾಯಕರು ಯಾರು ಎಂದು ಕೇಳಿದಾಗ, “ಯಾರಾದರೂ ಇದ್ದುಕೊಳ್ಳಲಿ” ಎಂದು ತಿಳಿಸಿದರು.
*ಮಾನಸಿಕವಾಗಿ ಅಂದು, ಇಂದು, ಮುಂದೆ ಕುಗ್ಗಲ್ಲ*
ನಿಮ್ಮನ್ನು ಹಾಗೂ ಸಿಎಂ ಅವರನ್ನು ರಾಜಕೀಯವಾಗಿ ಎದುರಿಸಲಾಗದೇ ಕಾನೂನು ಹೋರಾಟ ಮಾಡುತ್ತಿದ್ದಾರಾ ಎಂದು ಕೇಳಿದಾಗ, “ಖಂಡಿತ, ಸಿಎಂ ಪ್ರಕರಣದಲ್ಲಿ ಯಾವ ತಪ್ಪಿದೆ. ಅವರ ಅಧಿಕಾರ ಅವಧಿಯಲ್ಲಿ ಏನಾದರೂ ಸಹಿ ಮಾಡಿದ್ದಾರಾ? ಅವರನ್ನು ಮಾನಸಿಕವಾಗಿ ದುರ್ಬಲಗೊಳಿಸಬೇಕು ಎಂಬ ಕಾರಣಕ್ಕೆ ಈ ರೀತಿ ಮಾಡುತ್ತಿದ್ದಾರೆ. ನಾನಂತೂ ಮಾನಸಿಕವಾಗಿ ಕುಗ್ಗುವುದಿಲ್ಲ. ನಾನು ತಿಹಾರ್ ಜೈಲಲ್ಲಿ ಇದ್ದಾಗಲೂ ಕುಗ್ಗಿರಲಿಲ್ಲ. ಅವತ್ತೂ ಕುಗ್ಗಿಲ್ಲ, ಇಂದೂ ಕುಗ್ಗಿಲ್ಲ, ಮುಂದೆಯೂ ಕುಗ್ಗುವುದಿಲ್ಲ. ಗುರುವಾರ ಸಂಜೆ 4.30ಕ್ಕೆ ತೀರ್ಪು ಇದೆ ಎಂದು ಗೊತ್ತಿದ್ದರೂ ನಾನು ಕಂಗೆಟ್ಟಿರಲಿಲ್ಲ. ನನಗೆ ನ್ಯಾಯ ಸಿಗುವ ನಂಬಿಕೆ ಇತ್ತು. ಸರ್ಕಾರ ತಾನು ತನಿಖೆಗೆ ಕೊಟ್ಟ ಅನುಮತಿಯನ್ನು ಹಿಂಪಡೆದು ಬೇರೆ ಸಂಸ್ಥೆಗೆ ನೀಡಿದೆಯೇ ಹೊರತು, ತನಿಖೆಯನ್ನೇ ಹಿಂಪಡೆದಿಲ್ಲ. ಸರ್ಕಾರ ಅನೇಕ ಕಾನೂನು ಅಭಿಪ್ರಾಯ ಸಂಗ್ರಹಿಸಿಯೇ ಈ ತೀರ್ಮಾನ ಮಾಡಿರುತ್ತದೆ” ಎಂದು ತಿಳಿಸಿದರು.