ಪೆರ್ಡೂರು ಶ್ರೀ ಅನಂತಪದ್ಮನಾಭ ದೇವರು ಕದಳಿ ಪ್ರಿಯ. ಈ ದೇವಸ್ಥಾನ ವಿಶೇಷ ಸಾನಿಧ್ಯ ಶಕ್ತಿಯನ್ನು ಹೊಂದಿದೆ. ಹಿಂದಿನಿಂದಲೂ ದೇವಸ್ಥಾನದ ಸುತ್ತ ರಥ ಬೀದಿ ಇದ್ದು ಜಾತ್ರಾ ಮಹೋತ್ಸವದಲ್ಲಿ ರಥೋತ್ಸವಗಳು ಇದೇ ಬೀದಿಯಲ್ಲಿ ಸಾಗಿಬರುತ್ತದೆ. ಕ್ರಮೇಣ ಅದೇ ರಸ್ತೆಯಲ್ಲಿ ವಾಹನ ಸಂಚರಿಸಿ ಮುಖ್ಯ ರಸ್ತೆಯಾಗಿದೆ. ಸಿಂಹ ಸಂಕ್ರಮಣ, ರಥೋತ್ಸವ, ಅಷ್ಟಮಿ, ಗಣೇಶೋತ್ಸವ ಮುಂತಾದ ಕಾರ್ಯಕ್ರಮಗಳಲ್ಲಿ ಸಾವಿರಾರು ಭಕ್ತರು ದೇವಸ್ಥಾನಕ್ಕೆ ಆಗಮಿಸುವುದು ಇಲ್ಲಿಯ ಪೌರಾಣಿಕ ಐಹಿತ್ಯಕ್ಕೆ ಸಾಕ್ಷಿ ಎನ್ನಬಹುದು.

——————-

 

ಪೆರ್ಡೂರು : ಪೆರ್ಡೂರು ಶ್ರೀ ಅನಂತಪದ್ಮನಾಭ ದೇವಸ್ಥಾನ ಅತ್ಯಂತ ಪುರಾತನ ಹಿನ್ನೆಲೆ ಹೊಂದಿದೆ.

ರಾಜ್ಯದ ಅತ್ಯಂತ ಶಕ್ತಿಶಾಲಿ ದೇವಸ್ಥಾನಗಳಲ್ಲಿ ಒಂದು ಎಂಬ ಹಿರಿಮೆಯನ್ನು ಪಡೆದುಕೊಂಡಿದೆ. ಇಲ್ಲಿನ ಸಂಕ್ರಮಣ ಅತ್ಯಂತ ಜನಪ್ರಿಯವಾಗಿದ್ದು ಅಪಾರ ಸಂಖ್ಯೆಯಲ್ಲಿ ಭಕ್ತ ಸಮೂಹ ಆಗಮಿಸಿ ದೇವರಿಗೆ ನಡೆದುಕೊಳ್ಳುತ್ತದೆ.

ಆದರೆ, ಇದೀಗ ಪೆರ್ಡೂರು ಮಾರ್ಗವಾಗಿ ಹಾದು ಹೋಗುವ ರಾಷ್ಟೀಯ ಹೆದ್ದಾರಿಯಿಂದಾಗಿ ದೇವಸ್ಥಾನ ಸುದ್ದಿಯಲ್ಲಿದೆ. ಶ್ರೀ ಅನಂತಪದ್ಮನಾಭ ದೇವಸ್ಥಾನ ಸಾವಿರಾರು ವರ್ಷಗಳ ಇತಿಹಾಸ ಹೊಂದಿದೆ. ಶ್ರೀ ಅನಂತಪದ್ಮನಾಭ ದೇವಸ್ಥಾನಕ್ಕೆ ಸಂಬಂಧಿಸಿದ ನಾಗವನ ಹಾಗೂ ವಾಸ್ತು ಪರಿಧಿಗೆ ಧಕ್ಕೆ ಆಗದಂತೆ ಇದೀಗ ಕರ್ನಾಟಕ ಹೈಕೋರ್ಟ್ ಗ್ರಾಮದಲ್ಲಿ ಹಾದು ಹೋಗಲಿರುವ ರಾಷ್ಟ್ರೀಯ ಹೆದ್ದಾರಿ 169 ಎ ಕಾಮಗಾರಿ ನಡೆಸಲು ಸಾಧ್ಯವೇ ಎಂದು ಪರಿಶೀಲಿಸಲು ಹೆದ್ದಾರಿ ಇಲಾಖೆಗೆ ಸಲಹೆ ನೀಡಿರುವುದು ಭಕ್ತರಲ್ಲಿ ತುಸು ನೆಮ್ಮದಿಗೆ ಕಾರಣವಾಗಿದೆ.

ಮಲ್ಪೆ-ಶಿವಮೊಗ್ಗ ರಾಷ್ಟ್ರೀಯ ಹೆದ್ದಾರಿ ದೇವಸ್ಥಾನಕ್ಕೆ ಸನಿಹದಲ್ಲಿ ಹಾದು ಹೋಗುತ್ತದೆ. ಆ ರೀತಿಯಲ್ಲಿ ನೀಲ ನಕ್ಷೆಯನ್ನು ಈಗಾಗಲೇ ತಯಾರಿಸಲಾಗಿದೆ‌ ಇದು ಭಕ್ತ ಸಮೂಹವನ್ನು ಅತ್ಯಂತ ಬೇಸರಕ್ಕೆ ತಳ್ಳಿದೆ.

ಕೊನೆಗೂ ಈ ನಿಟ್ಟಿನಲ್ಲಿ ನ್ಯಾಯ ಕೋರಿ ಸ್ಥಳೀಯರಾದ ರಂಜಿತ್ ಪ್ರಭು ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದಾರೆ. ದೇವಾಲಯಕ್ಕೆ ಧಕ್ಕೆ ಆಗದಂತೆ ಕಾಮಗಾರಿಗೆ ತಡೆ ನೀಡುವಲ್ಲಿ ದೇವಸ್ಥಾನದ ಆಡಳಿತ ಮಂಡಳಿ ಸಹ ನ್ಯಾಯಾಲಯದ ಮೊರೆ ಹೋಗಿದೆ. ದೇವಾಲಯದ ರಥ ಬೀದಿ, ನಾಗವನ ಇರುವಲ್ಲಿ ನಕ್ಷೆ ಪ್ರಕಾರ ಹೆದ್ದಾರಿ ಹಾದು ಹೋಗಲಿದೆ. ಇದರಿಂದಾಗಿ ಈ ಪ್ರಾಚೀನ ಇತಿಹಾಸ ಹೊಂದಿರುವ ದೇವಾಲಯದ ಮೂಲ ಸ್ವರೂಪಕ್ಕೆ ಹಾಗೂ ವಾಸ್ತುವಿಗೆ ಧಕ್ಕೆಯಾಗಲಿದೆ. ಆದ್ದರಿಂದ ಪರ್ಯಾಯವಾಗಿ ಸಾಧ್ಯ ಸಾಧ್ಯತೆಗಳ ಬಗ್ಗೆ ಪರಿಶೀಲಿಸಲು ಮನವಿ ಮಾಡಿಕೊಂಡಿದ್ದರು. ಇದೀಗ ಮನವಿ ಪುರಸ್ಕರಿಸಿರುವ ನ್ಯಾಯಾಲಯ ಪುರಾತನ ಇತಿಹಾಸ ಹೊಂದಿರುವ ದೇಗುಲವನ್ನು ರಕ್ಷಿಸಬೇಕಾಗಿದ್ದು, ಈ ನಿಟ್ಟಿನಲ್ಲಿ ಪರ್ಯಾಯ ಮಾರ್ಗವನ್ನು ಪರಿಶೀಲಿಸುವಂತೆ ಸೂಚನೆ ರವಾನಿಸಿರುವುದು ಅತ್ಯಂತ ಮಹತ್ತರವಾದ ಬೆಳವಣಿಗೆ. ನ್ಯಾಯಾಲಯ ಈಗ ದೇವಸ್ಥಾನದ ಪರ ಅಭಿಪ್ರಾಯ ವ್ಯಕ್ತಪಡಿಸಿರುವುದರಿಂದ ದೇವಾಲಯದ ವಾಸ್ತು ಮತ್ತು ಮೂಲ ಸ್ವರೂಪವನ್ನು ಯಥಾ ಸ್ಥಿತಿಯಲ್ಲಿ ಉಳಿಸಲು ಸಾಧ್ಯವಾಗಲಿದ್ದು ಭಕ್ತರು ಸಹ ಈ ನಿಟ್ಟಿನಲ್ಲಿ ಕೈಜೋಡಿಸುವ ಅವಶ್ಯಕತೆ ಇದೆ. ಪೆರ್ಡೂರು ಮೇಲ್ಪೇಟೆಯಿಂದ ದೇವಸ್ಥಾನಕ್ಕೆ ಸಂಬಂಧಿಸಿದ ಖಾಲಿ ಜಾಗದ ಮೂಲಕ ಹಾದು ಹೋಗುವ ಪ್ರಾಥಮಿಕ ಆರೋಗ್ಯ ಕೇಂದ್ರದ ಸನಿಹ ಮುಖ್ಯ ರಸ್ತೆಯನ್ನು ಪರ್ಯಾಯ ಮಾರ್ಗವನ್ನು ಸಹ ಬಳಸಬಹುದು. ಸ್ಥಳೀಯರು ಹೆದ್ದಾರಿ ಇಲಾಖೆಗೆ ಈ ಬಗ್ಗೆ ತಿಳಿಸಿದರು. ಇಲ್ಲಿಯೂ ಸಹ ದೇವಸ್ಥಾನದ ಶೇಕಡ 80 ರಷ್ಟು ಜಾಗ ರಸ್ತೆಗೆ ಹೋಗುತ್ತದೆ. ಆದರೆ ದೇಗುಲದ ವಾಸ್ತುವಿಗೆ ಹಾನಿಯಾಗದು. ಆದರೆ, ಇಲಾಖೆಯ ನೀಲನಕ್ಷೆ ಪ್ರಕಾರ ಕಾಮಗಾರಿ ನಡೆಸಿದರೆ ಈಗ ಇಲ್ಲಿರುವ ಅಂಗಡಿ, ಮನೆ, ರಾಮಮಂದಿರ ಮುಂತಾದವುಗಳಿಗೆ ತೊಂದರೆ ಆಗಲಿದೆ. ಈ ನಿಟ್ಟಿನಲ್ಲಿ ಭಕ್ತರ ಆಶಯ ಹಾಗೂ ಒತ್ತಾಸೆಯಂತೆ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ ಗಮನ ಹರಿಸಿದರೆ ಭಕ್ತರ ನಂಬಿಕೆಗೆ ಪುರಸ್ಕಾರ ಸಿಕ್ಕಂತಾಗುತ್ತದೆ.