
ಬಂಟ್ವಾಳ: ಪಾಣೆಮಂಗಳೂರಿನಲ್ಲಿ ನೇತ್ರಾವತಿ ನದಿಯಲ್ಲಿ ಮೃತದೇಹವೊಂದು ಗುರುವಾರ ಪತ್ತೆಯಾಗಿದೆ.
ಪತ್ತೆಯಾದ ಮೃತದೇಹವು ಪುತ್ತೂರು ನಗರಸಭೆಯ ಬಿಜೆಪಿ ಸದಸ್ಯ ರಮೇಶ್ ರೈ ನೆಲ್ಲಿಕಟ್ಟೆ ಅವರದ್ದು ಎಂದು ಗೊತ್ತಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಪಾಣೆಮಂಗಳೂರು ಹಳೆ ಸೇತುವೆ ಬಳಿ ವ್ಯಕ್ತಿಯೊಬ್ಬರ ಬೈಕ್, ಮೊಬೈಲ್, ಅಂಗಿ ಹಾಗೂ ಚಪ್ಪಲಿ ಅನಾಥವಾಗಿ ಬಿದ್ದಿತ್ತು. ಯಾರೋ ಅಂಗಿ ಕಳಚಿಟ್ಟು ನದಿಗೆ ಹಾರಿರಬಹುದು ಎಂಬ ಶಂಕೆಯಿಂದ ಸ್ಥಳೀಯ ಈಜುಗಾರರು ಹಾಗೂ ಅಗ್ನಿಶಾಮಕ ಮತ್ತು ತುರ್ತು ಸೇವೆಯ ಸಿಬ್ಬಂದಿ ನೇತ್ರಾವತಿ ನದಿಯಲ್ಲಿ ಹುಡುಕಾಟ ನಡೆಸಿದ್ದರು. ಅಲ್ಲಿ ಪತ್ತೆಯಾದ ಮೊಬೈಲ್ ಮತ್ತಿತರ ಸ್ವತ್ತುಗಳು ಪುತ್ತೂರು ನಗರ ಸಭಾ ಸದಸ್ಯ ರಮೇಶ್ ರೈ ನೆಲ್ಲಿಕಟ್ಟೆ ಅವರದ್ದು ಎಂದು ಗೊತ್ತಾಗಿತ್ತು. ಸ್ವಲ್ಪ ಹೊತ್ತಿನಲ್ಲೇ ಮೃತದೇಹವು ಪತ್ತೆಯಾಯಿತು.
ಪುತ್ತೂರು ನಗರ ಸಭೆಯ ನೆಲ್ಲಿಕಟ್ಟೆ ವಾರ್ಡ್ ಸದಸ್ಯರಾಗಿದ್ದ ಶಕ್ತಿ ಸಿನ್ಹ ಅವರು ಮೃತಪಟ್ಟಿದ್ದರಿಂದ ತೆರವಾದ ಸ್ಥಾನಕ್ಕೆ ಇತ್ತೀಚಿಗೆ ಉಪಚುನಾವಣೆ ನಡೆದಿತ್ತು. ರಮೇಶ್ ರೈ ಅವರು ಬಿಜೆಪಿಯಿಂದ ಗೆದ್ದಿದ್ದರು. ಬಿಜೆಪಿ ಮುಖಂಡರಾದ ಸಂಜೀವ ಮಠದೂರು, ಅರುಣ್ ಕುಮಾರ್ ಪುತ್ತಿಲ ಮತ್ತಿತರರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.