ನವದೆಹಲಿ: ದೆಹಲಿ ಬಿಜೆಪಿ ಅಧ್ಯಕ್ಷ ವೀರೇಂದ್ರ ಸಚ್‌ದೇವ ಅವರು ಕಲುಷಿತ ಯಮುನಾ ನದಿಯಲ್ಲಿ ಮುಳುಗಿ ಪ್ರತಿಭಟಿಸಿದ್ದ ಕೆಲವೇ ದಿನಗಳಲ್ಲಿ ರಾಮಮನೋಹರ ಲೋಹಿಯಾ(ಆರ್‌ಎಂಎಲ್) ಆಸ್ಪತ್ರೆಗೆ ದಾಖಲಾಗಿದ್ದಾರೆ.
ಕಲುಷಿತಗೊಂಡಿರುವ ಯಮುನಾ ನದಿಯನ್ನು ಶುಚಿಗೊಳಿಸುವ ಭರವಸೆ ನೀಡಿ ಅಧಿಕಾರಕ್ಕೆ ಬಂದ ವೇಳೆ ಈವರೆಗೂ ಯಮುನಾ ನದಿಯನ್ನು ಶುಚಿಗೊಳಿಸದ ಆಪ್ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದ ಬಿಜೆಪಿ ರಾಜ್ಯಾಧ್ಯಕ್ಷ ವೀರೇಂದ್ರ ಸಚದೇವ ಈಗ ಅನಾರೋಗ್ಯಕ್ಕೆ ಒಳಗಾಗಿ ಶುಕ್ರವಾರ(ಅ.25) ಆಸ್ಪತ್ರೆಗೆ ದಾಖಲಾಗಿದ್ದಾರೆ.
ದೆಹಲಿ ಸರ್ಕಾರದ ಭ್ರಷ್ಟಾಚಾರದ ವಿರುದ್ಧದ ಪ್ರತಿಭಟನಾರ್ಥವಾಗಿ ಎರಡು ದಿನಗಳ ಹಿಂದೆ ಯಮುನಾ ನದಿಯಲ್ಲಿ ಮುಳುಗೆದ್ದಿದ್ದ ಅವರಿಗೆ ಉಸಿರಾಟದ ತೊಂದರೆ ಹಾಗೂ ತೀವ್ರವಾದ ಚರ್ಮ ತುರಿಕೆ ಆರಂಭವಾಗಿದೆ. ಹೀಗಾಗಿ ಆರ್‌ಎಂಎಲ್ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಹೇಳಲಾಗಿದೆ.
ದೆಹಲಿಯಲ್ಲಿ ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ ಆಗ ಮುಖ್ಯಮಂತ್ರಿಯಾಗಿದ್ದ ಅರವಿಂದ ಕೇಜ್ರಿವಾಲ್ 2025 ರ ವೇಳೆಗೆ ಯಮುನಾ ನದಿಯನ್ನು ಸ್ವಚ್ಛಗೊಳಿಸುವ ಭರವಸೆಯನ್ನು ನೀಡಿದ್ದರು, ಆದರೆ ಅಧಿಕಾರಕ್ಕೆ ಬಂದಾಗಿನಿಂದ ಇದುವರೆಗೂ ಯಮುನಾ ನದಿಯನ್ನು ಆಪ್ ಸರ್ಕಾರ ಸ್ವಚ್ಛಗೊಳಿಸಿಲ್ಲ. ಈ ನಡುವೆ ನದಿಯ ಪರಿಸ್ಥಿತಿ ಪರಿಶೀಲಿಸುವಂತೆ ಮುಖ್ಯಮಂತ್ರಿ ಅತಿಶಿ ಹಾಗೂ ಅರವಿಂದ್ ಕೇಜ್ರಿವಾಲ್ ಅವರಿಗೆ ಅಕ್ಟೋಬರ್ 24 ರಂದು ಬಿಜೆಪಿ ನಾಯಕ ಸಚದೇವ ಸವಾಲು ಹಾಕಿದ್ದರು. ಆದರೆ ಆಪ್ ನಾಯಕರು ಯಮುನಾ ನದಿ ತೀರಕ್ಕೆ ಬಂದಿರಲಿಲ್ಲ.
ಈ ಹಿನ್ನೆಲೆಯಲ್ಲಿ ಆಡಳಿತ ಪಕ್ಷದ ವಿರುದ್ಧ ಕಿಡಿಕಾರಿದ ದೆಹಲಿ ಬಿಜೆಪಿ ರಾಜ್ಯಾಧ್ಯಕ್ಷ ಸಚದೇವ ಅವರು ಕೇಜ್ರಿವಾಲ್ ಅವರ ಪಾಪಗಳಿಗೆ ಪ್ರಾಯಶ್ಚಿತ್ತ ಮಾಡಿಕೊಳ್ಳಲು ತಾನು ಯಮುನಾ ನದಿಯಲ್ಲಿ ಸ್ನಾನ ಮಾಡುತಿದ್ದೇನೆ ಇದರ ಜೊತೆಗೆ ಕೇಂದ್ರ ಸರ್ಕಾರ ಯಮುನಾ ನದಿ ಶುಚಿಗೊಳಿಸಲು ನೀಡಿದ್ದ ಕೋಟ್ಯಂತರ ರೂ.ಗಳನ್ನು ದುರುಪಯೋಗಪಡಿಸಿಕೊಂದಿರುವುದಕ್ಕೆ ತಾಯಿ ಯಮುನಾ ಅವರನ್ನು ಕ್ಷಮಿಸಲಿ ಎಂದು ಹೇಳಿಕೊಂಡು ಕಲುಷಿತಗೊಂಡಿರುವ ಯಮುನಾ ನದಿಯಲ್ಲಿ ಮುಳುಗೆದ್ದಿದ್ದರು. ಇದರ ನಂತರ ಕೆಲ ಸಮಯದಲ್ಲಿ ಅವರಿಗೆ ಮೈಯಲ್ಲಿ ತುರಿಕೆ, ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದೆ, ಕೂಡಲೇ ಅವರನ್ನು ದೆಹಲಿಯ ರಾಮ ಮನೋಹರ ಲೋಹಿಯಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ವೀರೇಂದ್ರ ಸಚ್‌ದೇವ ಆರೋಗ್ಯ ಈಗ ಸ್ಥಿರವಾಗಿದೆ ಎಂದು ಬಿಜೆಪಿ ತಿಳಿಸಿದೆ.