“ನಾನು ವಿದ್ಯಾರ್ಥಿ ನಾಯಕನಾಗಿದ್ದಾಗ ವಕೀಲನಾಗಬೇಕು ಎಂದು ಆಸೆ ಇತ್ತು. ಆ ಸಮಯದಲ್ಲಿ ನನಗೆ ಪಕ್ಷದ ವತಿಯಿಂದ ಟಿಕೆಟ್ ನೀಡಲಾಗಿತ್ತು. ದೇವರಾಜ ಅರಸು ಹಾಗೂ ಗುಂಡೂರಾವ್ ಅವರ ಕಾಲದಲ್ಲಿ ವಿದ್ಯಾರ್ಥಿ ನಾಯಕತ್ವಕ್ಕೆ ಬಹಳ ಪ್ರಾಮುಖ್ಯತೆ ಇತ್ತು. ನಾನು ವಕೀಲನಾಗಲಿಲ್ಲ. ಆದರೆ ನನಗೀಗ ದಿನನಿತ್ಯ ಇಡಿ, ಆದಾಯ ತೆರಿಗೆ, ಸಿಬಿಐ ನೋಟೀಸ್ ಬರುತ್ತಿವೆ. ನನ್ನ ಕೈತುಂಬಾ ಈ ಸಂಸ್ಥೆಗಳ ನೋಟೀಸ್ ಗಳಿವೆ. ಈ ನೋಟೀಸ್ ಗಳನ್ನು ಓದಬೇಕು ಎಂಬ ಕಾರಣಕ್ಕೆ ನನ್ನ ಮಗನಿಗೆ ಕಾನೂನು ವ್ಯಾಸಂಗ ಮಾಡಿಸುತ್ತಿದ್ದೇನೆ” ಎಂದು ಡಿಸಿಎಂ ಡಿಕೆ ಶಿವಕುಮಾರ್ ತಿಳಿಸಿದರು.
ಬೆಂಗಳೂರು :
“ಬಿಜೆಪಿಯವರು ಕತ್ತರಿಯಂತೆ ಸಮಾಜವನ್ನು ಇಬ್ಭಾಗ ಮಾಡುತ್ತಾರೆ. ಕಾಂಗ್ರೆಸ್ ಸೂಜಿಯಂತೆ ಸಮಾಜವನ್ನು ಪರಸ್ಪರ ಬೆಸೆಯುತ್ತದೆ. ಇದು ಕಾಂಗ್ರೆಸ್ ಪಕ್ಷದ ಶಕ್ತಿ” ಎಂದು ಡಿಸಿಎಂ ಡಿ. ಕೆ. ಶಿವಕುಮಾರ್ ಅವರು ಅಭಿಪ್ರಾಯಪಟ್ಟರು.ಕೆಪಿಸಿಸಿ ಕಚೇರಿಯ ಭಾರತ ಜೋಡೋ ಸಭಾಂಗಣದಲ್ಲಿ ನಡೆದ “ಭಾರತದ ಸಂವಿಧಾನ ಅಂಗೀಕಾರ ದಿನ” ಕಾರ್ಯಕ್ರಮದಲ್ಲಿ ಶಿವಕುಮಾರ್ ಅವರು ಮಂಗಳವಾರ ಭಾಗವಹಿಸಿ ಮಾತನಾಡಿದರು. ಈ ವೇಳೆ ಅವರು ಹೇಳಿದ್ದಿಷ್ಟು;
“ನಾವು ಭಾರತ ಜೋಡೋ ಯಾತ್ರೆ ಮಾಡಿದ್ದು ಕೂಡ ದೇಶವನ್ನು ಒಟ್ಟಾಗಿಡುವ ಉದ್ದೇಶದಿಂದ. ಇಂದಿರಾ ಗಾಂಧಿ ಅವರು ಸಂವಿಧಾನದಲ್ಲಿ ಸಮಾಜವಾದ ಹಾಗೂ ಜಾತ್ಯಾತೀತ ತತ್ವ ಪದಗಳನ್ನು ಸೇರಿಸಿದ್ದರು. ಇದರ ವಿರುದ್ಧ ಅನೇಕರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಈ ವಿಚಾರವಾಗಿ ಸುಪ್ರೀಂ ಕೋರ್ಟ್ ಸೋಮವಾರವಷ್ಟೇ ಆದೇಶ ಹೊರಡಿಸಿದ್ದು, ಈ ಪದಗಳನ್ನು ಸಂವಿಧಾನದಿಂದ ತೆಗೆಯಲು ಸಾಧ್ಯವಿಲ್ಲ ಎಂದು ಸ್ಪಷ್ಟವಾಗಿ ಹೇಳಿದೆ. ಸಂವಿಧಾನಕ್ಕೆ ಅಪಾಯವಿದೆ ಎಂದು ನಾವು ಹೋರಾಟ ಮಾಡುತ್ತಿದ್ದೇವೆ. ನಮ್ಮ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಹುಲ್ ಗಾಂಧಿ ಅವರು ಈ ವಿಚಾರವಾಗಿ ಪ್ರಬುದ್ಧವಾಗಿ ವಾದ ಮಂಡಿಸಿದ್ದಾರೆ.
ಕಬ್ಬಿಣದಲ್ಲಿ ಕತ್ತರಿಯನ್ನೂ ಮಾಡಬಹುದು, ಸೂಜಿಯನ್ನು ಮಾಡಬಹುದು. ಕತ್ತರಿ ಬಟ್ಟೆಯನ್ನು ಹರಿಯಲು ಬಳಸಿದರೆ, ಸೂಜಿಯನ್ನು ಬಟ್ಟೆ ಹೊಲಿಯಲು ಬಳಸಲಾಗುವುದು. ಕಾಂಗ್ರೆಸ್ ಪಕ್ಷ ದೇಶವನ್ನು ಒಟ್ಟಾಗಿ ತೆಗೆದುಕೊಂಡು ಹೋಗುತ್ತಿದೆ.”
ಸರ್ವರಿಗೂ ಸಮಬಾಳು, ಸಮಪಾಲು ನಮ್ಮ ಸಂವಿಧಾನದ ಮೂಲತತ್ವ
“ಸರ್ವರಿಗೂ ಸಮಬಾಳು, ಸಮಪಾಲು ನಮ್ಮ ಸಂವಿಧಾನದ ಮೂಲತತ್ವ. ಸಂವಿಧಾನದಲ್ಲಿ ಜಾತ್ಯಾತೀತ, ಸಮಾಜವಾದ ಪದ ತೆಗೆಯಲು ಸಾಧ್ಯವಿಲ್ಲ ಎಂಬ ಸುಪ್ರೀಂ ಕೋರ್ಟ್ ತೀರ್ಪು ನೀಡಿದ್ದು, ಇಂಧಿರಾ ಗಾಂಧಿ ಅವರ ತೀರ್ಮಾನವನ್ನು ಯಾರೂ ಬದಲಿಸಲಾಗುವುದಿಲ್ಲ ಎಂಬುದಕ್ಕೆ ಸಾಕ್ಷಿ.
ನಾನು ನಂಬಿರುವ ಶಕ್ತಿ ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದ ವಿಶ್ವಕ್ಕೆ ಶಾಂತಿ ಎಂದು ತತ್ವ ನೀಡಿದ್ದಾರೆ. ಬಾಬಾ ಸಾಹೇಬ್ ಅಂಬೇಡ್ಕರ್ ಹಾಗೂ ಕಾಂಗ್ರೆಸ್ ಪಕ್ಷ ನೀಡಿರುವ ಸಂವಿಧಾನದ ಮೂಲತತ್ವ ಎಲ್ಲಾ ಧರ್ಮದ ಆಚಾರ ವಿಚಾರವನ್ನು ಒಳಗೊಂಡಿದೆ. ಹೀಗಾಗಿ ನಮ್ಮ ಪಾಲಿಗೆ ಸಂವಿಧಾನ ಪವಿತ್ರವಾದ ಗ್ರಂಥವಾಗಿದೆ.
ಸರ್ವರಿಗೂ ಸಮಬಾಳು, ಸಮಪಾಲು ಎಂಬ ತತ್ವದ ಮೂಲ ಸಂವಿಧಾನದ ಪೀಠಿಕೆಯಾಗಿದೆ. ಅಂಬೇಡ್ಕರ್ ಅವರು ಒಂದು ಮಾತು ಹೇಳಿದ್ದಾರೆ. ನೀನು ಹೋರಾಟ ಮಾಡದೇ ಇದ್ದರೂ ಮಾರಾಟವಾಗಬೇಡ ಎಂದಿದ್ದಾರೆ. ರಾಜಕಾರಣಿಗಳು ಮಾರಾಟವಾಗಿರುವ ಬಗ್ಗೆ ಮಾಧ್ಯಮಗಳಲ್ಲಿ ನೋಡಿದ್ದೇವೆ. 140 ಕೋಟಿ ಜನರ ರಕ್ಷಾ ಕವಚವೇ ಸಂವಿಧಾನ. ಇದನ್ನು ಬದಲಾವಣೆ ಮಾಡುವುದಾಗಿ ಬಿಜೆಪಿ ಕೇಂದ್ರ ಮಂತ್ರಿಗಳು, ಸಂಸದರು ಹೇಳುತ್ತಿದ್ದರು. ಅದು ಎಂದಿಗೂ ಸಾಧ್ಯವಿಲ್ಲ.
ಕಾಂಗ್ರೆಸ್ ಶಕ್ತಿ ದೇಶದ ಶಕ್ತಿ, ಕಾಂಗ್ರೆಸ್ ಇತಿಹಾಸ, ದೇಶದ ಇತಿಹಾಸ, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ಎಲ್ಲಾ ವರ್ಗಗಳು ಅಧಿಕಾರಕ್ಕೆ ಬಂದಂತೆ. ಎಲ್ಲಾ ವರ್ಗದ ಜನರಿಗೆ ಕಾರ್ಯಕ್ರಮ ನೀಡುತ್ತದೆ. ಚಿಕ್ಕ ಮಕ್ಕಳಿಂದ, ವಿದ್ಯಾರ್ಥಿಗಳು, ಯುವಕರು, ಮಹಿಳೆಯರು, ಬಡವರು, ಮಧ್ಯಮ ವರ್ಗ ಸೇರಿದಂತೆ ಎಲ್ಲರಿಗೂ ಕಾರ್ಯಕ್ರಮ ನೀಡಿದ್ದೇವೆ. ನಮ್ಮ ಪಾಲಿನ ರಾಮಾಯಣ, ಭಗವದ್ಗೀತೆ, ಬೈಬಲ್ ಎಲ್ಲವೂ ಸಂವಿಧಾನ.
ನಮ್ಮ ದೇಶದಲ್ಲಿ ಮುಕ್ಕೋಟಿ ದೇವರನ್ನು ಪೂಜಿಸುತ್ತೇವೆ. ಸ್ವಾತಂತ್ರ್ಯ ಬಂದ ನಂತರ ನಾವು ಮಹಾತ್ಮಾ ಗಾಂಧಿ ಅವರನ್ನು ರಾಷ್ಟ್ರಪಿತ ಎಂದು ಕರೆದು, ಅವರಿಗೆ ಗೌರವ ನೀಡುತ್ತಿದ್ದೇವೆ. ಈ ಸಂವಿಧಾನ ಜಾರಿಯಾದ ನಂತರ ದೇಶದೆಲ್ಲೆಡೆ ಅಂಬೇಡ್ಕರ್ ಅವರ ಪ್ರತಿಮೆ ಸ್ಥಾಪಿಸಿ ಅವರಿಗೆ ಗೌರವ ಸಲ್ಲಿಸುತ್ತಿದ್ದೇವೆ. ನಮ್ಮ ದೇಶದಲ್ಲಿ ರಾಮನ ತಂದೆ ದಶರಥ ಮಹಾರಾಜನ ದೇವಾಲಯವಿಲ್ಲ, ಆದರೆ ರಾಮನ ಭಂಟ ಹನುಮಂತನ ದೇವಾಲಯ ಹೆಚ್ಚಾಗಿದೆ. ಸೇವೆ ಮಾಡುವವರಿಗೆ ಸಮಾಜ ಗುರುತಿಸಲಿದೆ ಎಂಬುದಕ್ಕೆ ಇದೇ ಸಾಕ್ಷಿ.
ಪಕ್ಷದ ಇತಿಹಾಸವೇ ನಮ್ಮ ಶಕ್ತಿ:
ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಮಹದೇವಪ್ಪ ಅವರು ಸಮಾಜಕಲ್ಯಾಣ ಇಲಾಖೆ ಜವಾಬ್ದಾರಿ ವಹಿಸಿಕೊಂಡ ನಂತರ ಶಾಲಾ ಮಕ್ಕಳಿಗೆ ಸಂವಿಧಾನ ಪೀಠಿಕೆ ಓದಿಸುವ ಕಾರ್ಯಕ್ರಮ ತಂದಿದ್ದಾರೆ. ನಾನು ಕೆಪಿಸಿಸಿ ಅಧ್ಯಕ್ಷನಾಗಿ ಅಧಿಕಾರ ಸ್ವೀಕಾರ ಕಾರ್ಯಕ್ರಮ ಮಾಡುವಾಗ ಸಂವಿಧಾನ ಪೀಠಿಕೆ ಓದಿ, ಪ್ರತಿಜ್ಞೆ ತೆಗೆದುಕೊಂಡಿದ್ದೆ.
ಇತಿಹಾಸ ಮರೆತವ, ಇತಿಹಾಸ ಸೃಷ್ಟಿಸಲಾರ ಎಂದು ಅಂಬೇಡ್ಕರ್ ಹೇಳಿದ್ದಾರೆ. ಕಾಂಗ್ರೆಸಿಗರಿಗೆ ಪಕ್ಷದ ಇತಿಹಾಸವೇ ದೊಡ್ಡ ಶಕ್ತಿ. ನಮಗೆ ಇರುವ ಇತಿಹಾಸ ಬೇರೆ ಯಾರಿಗೂ ಇಲ್ಲ. ಬಿಜೆಪಿಯವರಿಗೆ ನಮ್ಮ ರೀತಿ ತ್ಯಾಗ ಬಲಿದಾನದ ಇತಿಹಾಸವಿಲ್ಲ. ಮಹಾತ್ಮಾ ಗಾಂಧಿ, ಇಂದಿರಾ ಗಾಂಧಿ, ರಾಜೀವ್ ಗಾಂಧಿ ಅವರು ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ್ದಾರೆ. ಸೋನಿಯಾ ಗಾಂಧಿ ಅವರು ಕೂಡ ದೇಶಕ್ಕಾಗಿ 2 ಬಾರಿ ಪ್ರಧಾನಮಂತ್ರಿ ಹುದ್ದೆಯನ್ನು ತ್ಯಾಗ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷ ಕಷ್ಟಕಾಲದಲ್ಲಿದ್ದಾಗ ನಮ್ಮ ಒತ್ತಾಯದ ಮೇರೆಗೆ ಸೋನಿಯಾ ಗಾಂಧಿ ಅವರು ಕಾಂಗ್ರೆಸ್ ಪಕ್ಷ ಜವಾಬ್ದಾರಿ ವಹಿಸಿಕೊಳ್ಳುತ್ತಾರೆ. ನಂತರ 2 ಅವಧಿಗೆ ಯುಪಿಎ ಸರ್ಕಾರ ರಚಿಸಿ ದೇಶದ ಆರ್ಥಿಕ ತಜ್ಞನನ್ನು ಪ್ರಧಾನಮಂತ್ರಿಯನ್ನಾಗಿ ಮಾಡುತ್ತಾರೆ. ರಾಹುಲ್ ಗಾಂಧಿ ಕೂಡ ಮಂತ್ರಿಯಾಗಬಹುದಿತ್ತು, ಪ್ರಧಾನಮಂತ್ರಿಯಾಗಬಹುದಿತ್ತು. ಅವರೂ ಕೂಡ ತ್ಯಾಗ ಮಾಡಿದ್ದಾರೆ.
ನೀನು ಸಿಖ್, ಜಾಟ್, ರಜಪೂತ ಯಾರೇ ಆಗಿರು, ಮೊದಲು ನೀನು ಭಾರತೀಯನಾಗಿರು ಎಂದು ಸರ್ದಾರ್ ವಲ್ಲಭಬಾಯಿ ಪಟೇಲ್ ಅವರು ಹೇಳಿದ್ದಾರೆ. ಇಂದು ಏರ್ಪಡಿಸಿರುವ ಚರ್ಚಾ ಸ್ಪರ್ಧೆಯಲ್ಲಿ ಯುವಕರ ಅಭಿಪ್ರಾಯ ಸಲಹೆಗಳನ್ನು ಎಲ್ಲರೂ ಕೇಳಿ. ಇಂದಿನ ಪೀಳಿಗೆಯ ಯುವಕರು ಬಹಳ ಬುದ್ಧಿವಂತರಾಗಿದ್ದಾರೆ. ಕಾನೂನು ವಿಭಾಗದಲ್ಲಿ ಯುವಕರಿಗೆ ಆದ್ಯತೆ ನೀಡಲು ಈ ಕಾರ್ಯಕ್ರಮ ರೂಪಿಸಲಾಗಿದೆ. ನಮಗೆ ಹೋರಾಟಗಾರರು ಬೇಕು. ಕಾನೂನು ವಿಭಾಗದವರು ಕೂಡ ಹೋರಾಟಗಾರರಾಗಿರಬೇಕು.
ಗಾಂಧೀಜಿ ಅವರು ಕಾಂಗ್ರೆಸ್ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿ ನೂರು ವರ್ಷಗಳು ಪೂರೈಸಿದ್ದು, ಹೆಚ್.ಕೆ ಪಾಟೀಲ್ ಅವರು ಬೆಳಗಾವಿಯಲ್ಲಿ ಯಾವ ರೀತಿ ಕಾರ್ಯಕ್ರಮ ಮಾಡಬೇಕು ಎಂದು ರೂಪುರೇಷೆ ಸಿದ್ಧಪಡಿಸುತ್ತಿದ್ದಾರೆ.”
ಸಂವಿಧಾನ ಬದಲಾಯಿಸುತ್ತೇವೆ ಎಂದ ಬಿಜೆಪಿಯನ್ನೇ ಜನ ಬದಲಾಯಿಸಿದರು: ಡಿಸಿಎಂ ಡಿ.ಕೆ.ಶಿವಕುಮಾರ್
“ಸಂವಿಧಾನವನ್ನು ಕಿತ್ತು ಹಾಕುತ್ತೇವೆ, ಹರಿದು ಹಾಕುತ್ತೇವೆ, ಬದಲಾಯಿಸುತ್ತೇವೆ ಎಂದು ಬಿಜೆಪಿಯವರನ್ನೇ ಜನರು ಬದಲಾಯಿಸಿದರು. ಸಂವಿಧಾನ ಬದಲಾವಣೆ ಮಾಡುತ್ತೇವೆ ಎಂದು ಹೇಳಿದವರೆಲ್ಲ ಮನೆಗೆ ಹೋಗಿದ್ದಾರೆ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು.
ನಗರದ ವಸಂತ ನಗರದಲ್ಲಿರುವ ಅಂಬೇಡ್ಕರ್ ಭವನದಲ್ಲಿ ಮಂಗಳವಾರ ನಡೆದ ʼಸಂವಿಧಾನ ದಿನಾಚರಣೆʼಯಲ್ಲಿ ಮಾತನಾಡಿದ ಅವರು, “ಸಂವಿಧಾನದ ಬದಲಾವಣೆ ಬಗ್ಗೆ ಮಾತನಾಡಿದ ಬಿಜೆಪಿಯವರಿಗೆ ತಿರುಗೇಟು ನೀಡಲು ರಾಹುಲ್ ಗಾಂಧಿ ಅವರು ತಮ್ಮ ಎಲ್ಲಾ ಭಾಷಣದ ವೇಳೆಯೂ ಸಂವಿಧಾನದ ಪ್ರತಿ ಹಿಡಿದು ಮಾತು ಪ್ರಾರಂಭಿಸುತ್ತಿದ್ದರು. ಇದರಿಂದ ಪ್ರಧಾನ ಮಂತ್ರಿಗಳು ಸಂವಿಧಾನ ಪ್ರತಿಗೆ ನಮಸ್ಕರಿಸಿ ಪ್ರಮಾಣ ವಚನ ತೆಗೆದುಕೊಳ್ಳುವಂತಹ ಸಂದರ್ಭ ಸೃಷ್ಟಿಯಾಯಿತು. ನಮ್ಮ ಇಂಡಿಯಾ ಒಕ್ಕೂಟದ ಸಂಸದರು ಸಂವಿಧಾನದ ಪ್ರತಿ ಹಿಡಿದು ಪ್ರಮಾಣ ವಚನ ಸ್ವೀಕರಿಸಿದ್ದು ಇತಿಹಾಸ” ಎಂದರು.
ಇತಿಹಾಸದಿಂದ ಪಾಠ ಕಲಿತು ಪ್ರತಿಯೊಬ್ಬರು ಸಾಕ್ಷಿಗುಡ್ಡೆಗಳನ್ನು ನಿರ್ಮಾಣ ಮಾಡಬೇಕು
“ಹೋರಾಟ ಮಾಡದೇ ಇದ್ದರೂ ಪರವಾಗಿಲ್ಲ ಮಾರಾಟ ಮಾತ್ರ ಆಗಬೇಡ ಎನ್ನುವ ಕಿವಿಮಾತನ್ನು ರಾಜಕಾರಣಿಗಳಿಗೆ ಅಂಬೇಡ್ಕರ್ ಅವರು ಹೇಳಿದ್ದಾರೆ. ನಾವುಗಳು ಇತಿಹಾಸದಿಂದ ಪಾಠ ಕಲಿಯದೇ ಯಾವುದೇ ಬದಲಾವಣೆ ಮಾಡಲು ಸಾಧ್ಯವಿಲ್ಲ. ಆದ ಕಾರಣ ಪ್ರತಿಯೊಬ್ಬರು ಇತಿಹಾಸದಿಂದ ಪಾಠ ಕಲಿಯಬೇಕು ಎನ್ನುವ ಸಂದೇಶವನ್ನು ಬಾಬಾ ಸಾಹೇಬ್ ಅಂಬೇಡ್ಕರ್ ಅವರು ನಮಗೆ ನೀಡಿದ್ದಾರೆ” ಎಂದು ಹೇಳಿದರು.
“ಅನೇಕ ರಾಜ್ಯಗಳಲ್ಲಿ ಜನರಿಂದ ಆಯ್ಕೆಯಾದ ಶಾಸಕರು ಮಾರಾಟವಾಗಿರುವ ನಿದರ್ಶನಗಳನ್ನು ನೋಡಿದ್ದೇವೆ. ಇದು ನಮ್ಮೆಲ್ಲರ ಬದುಕಿಗೂ ಸಂಬಂಧ ಪಡುತ್ತದೆ ಎನ್ನುವ ಕಿವಿಮಾತನ್ನು ನಮಗೆ ಅಂಬೇಡ್ಕರ್ ಅವರು ಬಿಟ್ಟು ಹೋಗಿದ್ದಾರೆ” ಎಂದರು.
“ಇತಿಹಾಸ ಮರೆತವನು ಇತಿಹಾಸ ಸೃಷ್ಟಿಸಲು ಸಾಧ್ಯವಿಲ್ಲ. ಧರ್ಮ ಗ್ರಂಥಗಳನ್ನು ಆಯಾಯ ಧರ್ಮದವರು ಪವಿತ್ರ ಎಂದು ಹೇಳುತ್ತಾರೆ. ಇಡೀ ಭಾರತಕ್ಕೆ ಸಂವಿಧಾನವೇ ಪವಿತ್ರ ಗ್ರಂಥ. ಇದು ನಮ್ಮೆಲ್ಲರನ್ನು ರಕ್ಷಣೆ ಮಾಡುತ್ತಿದೆ” ಎಂದು ಹೇಳಿದರು.
ನಮ್ಮ ರಾಜಕೀಯ ಆಯಸ್ಸು ಇನ್ನು 10- 15 ವರ್ಷ
“ನಮ್ಮ ರಾಜಕೀಯ ಆಯಸ್ಸು ಇನ್ನು 10- 15 ವರ್ಷ. ವಿದ್ಯಾರ್ಥಿಗಳು ಮುಂದಿನ 60- 70 ವರ್ಷಗಳ ಕಾಲ ಈ ದೇಶವನ್ನು ಮುನ್ನಡೆಸುವವರು. ಅವರಿಗೆ ಸಂವಿಧಾನದ ಬಗ್ಗೆ ಅಡಿಪಾಯ ಹಾಕಬೇಕು ಎನ್ನುವ ಕಾರಣಕ್ಕೆ ಜಾಗೃತಿ ಮೂಡಿಸುವ ಕೆಲಸವನ್ನು ಸರ್ಕಾರ ಮಾಡುತ್ತಿದೆ. ಅಮೆರಿಕಾದ ಮಾಜಿ ಅಧ್ಯಕ್ಷರಾದ ಬರಾಕ್ ಬಬಾಮ ಅವರು ಭಾರತದ ಸಂವಿಧಾನ ಇಡೀ ವಿಶ್ವಕ್ಕೆ ಮಾದರಿಯಾಗಿದೆ ಎಂದು ಹೇಳಿದ್ದಾರೆ” ಎಂದು ತಿಳಿಸಿದರು.
“ಕಾಂಗ್ರೆಸ್ ಪಕ್ಷ ಈ ದೇಶದ ಚುಕ್ಕಾಣಿ ಹಿಡಿದ ಸಂದರ್ಭದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನ ಕರಡು ಸಮಿತಿಯ ಅಧ್ಯಕ್ಷರಾದರು. ಅಂಬೇಡ್ಕರ್ ಅವರು ಇಡೀ ಪ್ರಪಂಚವೇ ಸ್ಮರಿಸಿಕೊಳ್ಳುವಂತಹ ಮಹಾನ್ ಗ್ರಂಥ ನಮಗೆ ನೀಡಿದ್ದಾರೆ” ಎಂದು ಹೇಳಿದರು.
ಮಹದೇವಪ್ಪ ಅವರನ್ನು ಸಂದರ್ಶಕ ಉಪನ್ಯಾಸಕರನ್ನಾಗಿ ಕಳುಹಿಸಬೇಕು
“ಸಚಿವ ಎಚ್.ಸಿ. ಮಹದೇವಪ್ಪ ಅವರು ಸಮಾಜ ಕಲ್ಯಾಣ ಇಲಾಖೆಗೆ ಹೊಸ ರೂಪವನ್ನು ನೀಡಿದ್ದಾರೆ. ರಾಜಕೀಯದಿಂದ ನಿವೃತ್ತಿ ಪಡೆದ ಮೇಲೆ ಮಹದೇವಪ್ಪ ಅವರನ್ನು ನಮ್ಮ ವಿಶ್ವವಿದ್ಯಾನಿಲಯಗಳಿಗೆ ಸಂದರ್ಶಕ ಉಪನ್ಯಾಸಕರನ್ನಾಗಿ ಕಳುಹಿಸಬೇಕು ಎನ್ನುವ ಅಭಿಲಾಷೆ ಅವರ ಮಾತುಗಳನ್ನು ಕೇಳಿದಾಗ ಅನ್ನಿಸಿತು” ಎಂದರು.
“ಗುಣಕ್ಕೆ ಮತ್ಸರವಿಲ್ಲ ಎನ್ನುವ ರೀತಿ ನಮ್ಮ ಸಂವಿಧಾನವೇ ನಮ್ಮ ಧರ್ಮ. ಈ ಚಿಕ್ಕ ಮಕ್ಕಳಿಗೂ ಅರ್ಥವಾಗುವ ರೀತಿ ಅವರು ಸಂವಿಧಾನದ ಬಗ್ಗೆ ತಿಳಿಸಿಕೊಟ್ಟಿದ್ದಾರೆ. ಸಂವಿಧಾನ ಪೀಠಿಕೆಯನ್ನು ಶಾಲಾ, ಕಾಲೇಜುಗಳಲ್ಲಿ ಪಠಿಸಬೇಕು ಎನ್ನುವ ಹೊಸ ಆಚರಣೆಗೆ ನಾಂದಿ ಹಾಡಿದವರು. ಇದಕ್ಕಾಗಿ ಅವರಿಗೆ ಅಭಿನಂದನೆ ತಿಳಿಸುತ್ತೇನೆ” ಎಂದರು.
ಗ್ಯಾರಂಟಿ ಯೋಜನೆ ನಿಲ್ಲುವುದಿಲ್ಲ, ಶಾಸಕ ಗವಿಯಪ್ಪ ಅವರಿಗೆ ಶೋಕಾಸ್ ನೋಟೀಸ್ ನೀಡುತ್ತೇವೆ: ಡಿಸಿಎಂ ಡಿ.ಕೆ. ಶಿವಕುಮಾರ್
“ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವುದಿಲ್ಲ. ಈ ವಿಚಾರವಾಗಿ ಹೇಳಿಕೆ ನೀಡಿರುವ ಶಾಸಕ ಗವಿಯಪ್ಪ ಅವರಿಗೆ ಕಾಂಗ್ರೆಸ್ ಪಕ್ಷದ ವತಿಯಿಂದ ಶೋಕಾಸ್ ನೋಟೀಸ್ ನೀಡಲಾಗುವುದು” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.
ಅಂಬೇಡ್ಕರ್ ಭವನದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಮಂಗಳವಾರ ಪ್ರತಿಕ್ರಿಯೆ ನೀಡಿದರು.
ಗ್ಯಾರಂಟಿ ನಿಲ್ಲಿಸಿ ಅನುದಾನ ಕೊಡಿ ಎಂದು ಸಿದ್ದರಾಮಯ್ಯ ಅವರನ್ನು ಕೇಳುತ್ತಿದ್ದೇವೆ ಎಂಬ ಶಾಸಕ ಗವಿಯಪ್ಪ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ಅವರು ಈ ರೀತಿ ಹೇಳಿದ್ದಾರೆ ಎಂದು ನಾನು ನಂಬುವುದಿಲ್ಲ. ಒಂದು ವೇಳೆ ಅವರು ಈ ಹೇಳಿಕೆ ಕೊಟ್ಟಿದ್ದೇ ಆಗಿದ್ದರೆ ವಿವರಣೆ ಕೇಳಿ ನೋಟೀಸ್ ನೀಡುತ್ತೇವೆ. ನಾವು ಗ್ಯಾರಂಟಿ ವಿಚಾರದಲ್ಲಿ ರಾಜ್ಯದ ಜನರಿಗೆ ಮಾತು ಕೊಟ್ಟಿದ್ದು, ಎಂತಹದೆ ಪರಿಸ್ಥಿತಿ ಬಂದರೂ ನಾವು ಅದಕ್ಕೆ ಬದ್ಧವಾಗಿದ್ದೇವೆ. ಕಾಂಗ್ರೆಸ್ ಪಕ್ಷದ ಯಾವುದೇ ಶಾಸಕರು ಗ್ಯಾರಂಟಿ ಯೋಜನೆಗಳ ಬಗ್ಗೆ ಪ್ರಶ್ನೆ ಮಾಡಬಾರದು. ಪ್ರಶ್ನೆ ಮಾಡಿದರೆ ಶಿಸ್ತುಕ್ರಮ ಜರುಗಿಸಲಾಗುವುದು. ಅನರ್ಹರು ಇದರ ಲಾಭ ಪಡೆಯುತ್ತಿದ್ದರೆ, ಅದನ್ನು ಪರಿಶೀಲಿಸಿ ಸರಿಪಡಿಸಲಾಗುವುದು. ಈ ಯೋಜನೆಗಳಿಂದ ಪ್ರತಿ ಕ್ಷೇತ್ರಕ್ಕೆ 250 ಕೋಟಿಯಷ್ಟು ಹಣ ಹೋಗುತ್ತಿದೆ. ಇದು ಆ ಕ್ಷೇತ್ರದ ಜನರ ಅಭಿವೃದ್ಧಿಯಲ್ಲವೇ? ಅಭಿವೃದ್ಧಿ ಕಾರ್ಯಗಳಿಗೂ ನಾವು ಅನುದಾನ ನೀಡುತ್ತಿದ್ದೇವೆ” ಎಂದು ಖಾರವಾಗಿ ಪ್ರತಿಕ್ರಿಯಿಸಿದರು.
ದೆಹಲಿ ಪ್ರವಾಸದ ಬಗ್ಗೆ ಕೇಳಿದಾಗ, “ನಾನು ದೆಹಲಿಗೆ ಭೇಟಿ ನೀಡುತ್ತಿರುವುದು ಮಹದಾಯಿ ವಿಚಾರವಾಗಿ ಕೇಂದ್ರ ಸಚಿವರನ್ನು ಭೇಟಿ ಮಾಡಲು ಹಾಗೂ ಆ ಭಾಗದ ಸಂಸದರನ್ನು ಭೇಟಿಯಾಗಲು. ಜೊತೆಗೆ ಜಾರ್ಖಂಡ್ ನಲ್ಲಿ ಹೇಮಂತ್ ಸೊರೇನ್ ಅವರ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಭಾಗವಹಿಸಲಾಗುವುದು. ಇನ್ನು ಗಾಂಧೀಜಿ ಅವರು ಬೆಳಗಾವಿಯಲ್ಲಿ ನಡೆದಿದ್ದ ಕಾಂಗ್ರೆಸ್ ಅಧಿವೇಶನದಲ್ಲಿ ಪಕ್ಷದ ಅಧ್ಯಕ್ಷರಾಗಿ ಅಧಿಕಾರವಹಿಸಿಕೊಂಡು ನೂರು ವರ್ಷಗಳಾಗಿರುವ ಹಿನ್ನೆಲೆಯಲ್ಲಿ ಆ ಕಾರ್ಯಕ್ರಮದ ರೂಪುರೇಷೆ ವಿಚಾರವಾಗಿ ಚರ್ಚೆ ಮಾಡಲು ತೆರಳುತ್ತಿದ್ದೇನೆ” ಎಂದು ತಿಳಿಸಿದರು.
ಆದಷ್ಟು ಬೇಗ ಮಹದಾಯಿ ಯೋಜನೆಗೆ ಅನುಮತಿ ನೀಡುತ್ತೇವೆ ಎಂಬ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ಬಹಳ ಸಂತೋಷ. ಮಹದಾಯಿ ಯೋಜನೆಗೂ ಅನುಮತಿ ಕೊಡಿಸಲಿ, ಮಾನ್ಯ ದೇವೇಗೌಡರು ಮೇಕೆದಾಟು ಯೋಜನೆಗೂ ಅನುಮತಿ ಕೊಡಿಸುವುದಾಗಿ ಹೇಳಿದ್ದು, ಅದನ್ನೂ ಕೊಡಿಸಲಿ. ನಮ್ಮ ರಾಜ್ಯಕ್ಕೆ ಒಳ್ಳೆಯದಾಗಲು ಸಹಕಾರ ಕೊಟ್ಟರೆ ನಾವು ಅದನ್ನು ಬಳಸಿಕೊಳ್ಳಲು ಸಿದ್ಧ” ಎಂದು ತಿಳಿಸಿದರು.
ಹೈಕಮಾಂಡ್ ನಾಯಕರ ಭೇಟಿ ಮಾಡುತ್ತೀರಾ ಎಂದು ಕೇಳಿದಾಗ, “ಖಂಡಿತಾ, ಕಾಂಗ್ರೆಸ್ ಕಚೇರಿ ನಮ್ಮ ಪಾಲಿನ ದೇವಾಲಯ. ಅಲ್ಲಿಗೆ ಹೋದ ಮೇಲೆ ನಾಯಕರನ್ನು ಭೇಟಿ ಮಾಡುತ್ತೇವೆ” ಎಂದು ತಿಳಿಸಿದರು.
ಸಚಿವ ಸಂಪುಟ ಪುನರ್ ರಚನೆ ಬಗ್ಗೆ ಕೇಳಿದಾಗ, “ನನಗೆ ಈ ವಿಚಾರ ಗೊತ್ತಿಲ್ಲ. ಗೊತ್ತಾದಾಗ ಮಾತನಾಡುತ್ತೇನೆ. ಈ ಬಗ್ಗೆ ಮುಖ್ಯಮಂತ್ರಿಗಳು ಹಾಗೂ ನಮ್ಮ ಎಐಸಿಸಿ ಪ್ರಧಾನ ಕಾರ್ಯದರ್ಶಿಗಳನ್ನು ಕೇಳಿ” ಎಂದು ತಿಳಿಸಿದರು.
ಸಚಿವರಿಗೂ ತಮ್ಮ ಸ್ಥಾನ ಬಿಡಲು ಹೇಳಿರುವುದಾಗಿ ಭಾಷಣದಲ್ಲಿ ಪ್ರಸ್ತಾಪ ಮಾಡಿದಿರಿ ಎಂದು ಕೇಳಿದಾಗ “ಅದು ತಕ್ಷಣಕ್ಕೆ ಅಲ್ಲ. ಅದಕ್ಕೆ ಇನ್ನು ಸಮಯಾವಕಾಶವಿದೆ” ಎಂದು ತಿಳಿಸಿದರು.