ರಾಯಚೂರು: ತುಂಗಭದ್ರಾ ನದಿಗೆ ನೀರು ಬಿಡುಗಡೆ ಮಾಡಿರುವ ಹಿನ್ನೆಲೆಯಲ್ಲಿ, ರಾಯಚೂರು ಜಿಲ್ಲೆಯ ತುಂಗಭದ್ರಾ ನದಿ ದಂಡೆ ಗ್ರಾಮಗಳಲ್ಲಿ ಪ್ರವಾಹ ಭೀತಿ ಎದುರಾಗಿದೆ.
ಮಂತ್ರಾಲಯದ ಬಳಿ ಅಪಾಯದ ಮಟ್ಟ ಮೀರಿ ನದಿ ಹರಿಯುತ್ತಿದ್ದು, ರಾಯರ ಭಕ್ತರು ನದಿ ದಂಡೆಗೆ ತೆರಳದಂತೆ ಕಟ್ಟೆಚ್ಚರ ವಹಿಸಲಾಗಿದೆ. ನದಿ ನೀರು ಹೆಚ್ಚಾದ ಕಾರಣ ಹಾವು ಸೇರಿದಂತೆ ಹಲವು ಜಲಚರಗಳು ನದಿ ದಂಡೆಯಲ್ಲಿ ಪ್ರತ್ಯಕ್ಷವಾಗಿದ್ದು, ಸಿಂಧನೂರ, ಮಾನವಿ ಮತ್ತು ರಾಯಚೂರು ತಾಲ್ಲೂಕಿನ ವ್ಯಾಪ್ತಿಯಲ್ಲಿ ಪ್ರವಾಹ ಆತಂಕ ಶುರುವಾಗಿದೆ. ಅಪಾಯದ ಮುನ್ನೆಚ್ಚರಿಕೆ ಅರಿತು ನದಿ ತೀರದ ಗ್ರಾಮಗಳಲ್ಲಿ ಕಂದಾಯ ಪೊಲೀಸ್ ಅಧಿಕಾರಿಗಳನ್ನು ನಿಯೋಜನೆ ಮಾಡಲಾಗಿದೆ.
ರಾಯರ ಏಕಶಿಲಾ ಬೃಂದಾವನ ಜಲಾವೃತ : ತುಂಗಭದ್ರಾ ಜಲಾಶಯದಿಂದ ನದಿಗೆ ನೀರು ಬಿಡುಗಡೆ ಮಾಡಿರುವ ಹಿನ್ನೆಲೆಯಲ್ಲಿ ರಾಯಚೂರು ತಾಲ್ಲೂಕಿನ ಬಿಚ್ಚಾಲಿ ಗ್ರಾಮದಲ್ಲಿರುವ ರಾಯರ ಏಕಶಿಲಾ ಬೃಂದಾವನ ಜಲಾವೃತವಾಗಿದೆ. ತುಂಗಭದ್ರಾ ನದಿ ನೀರು ಜಪದಕಟ್ಟೆ ಸುತ್ತವರಿದಿದೆ.