ಭಟ್ಕಳ: ಶಿವ ತಾಣ ಶ್ರೀ ಮುರುಡೇಶ್ವರನ ಅಂಗಳದಲ್ಲಿ ಶಿವ ಜಾಗರಣೆಯೊಂದಿಗೆ ಮಹಾಶಿವರಾತ್ರಿ ಆಚರಿಸಲು ಜಿಲ್ಲಾಡಳಿತ ಸಕಲ ಸಿದ್ಧತೆ ನಡೆಸಿದೆ.
ಈ ಕುರಿತು ಭಟ್ಕಳ ಸಹಾಯಕ ಆಯುಕ್ತೆ ಡಾ. ನಯನ ಮಾಧ್ಯಮದವರೊಂದಿಗೆ ಮಾತನಾಡಿದ್ದಾರೆ. ಮುರುಡೇಶ್ವರ ಶಿವ ಸನ್ನಿಧಾನಕ್ಕೆ ಹೊಂದಿಕೊಂಡು ಮಾ.8ರ ಮಹಾಶಿವರಾತ್ರಿಯಂದು ಭವ್ಯ ರಂಗ ಸಜ್ಜಿಕೆ ನಿರ್ಮಾಣಕ್ಕೆ ತಯಾರಿ ನಡೆದಿದೆ. ಅಮವಾಸ್ಯೆಯ ಸಮುದ್ರ ಉಬ್ಬರವನ್ನು ಗಮನದಲ್ಲಿ ಇರಿಸಿಕೊಂಡು ಕಡಲ ಕಿನಾರೆಯ ಆಸುಪಾಸಿನಲ್ಲಿ ವೇದಿಕೆ ನಿರ್ಮಿಸಲು ತೀರ್ಮಾನಿಸಲಾಗಿದೆ ಎಂದರು.
ಸೋಜಿಗದ ಸೂಜು ಮಲ್ಲಿಗೆ ಹಾಡಿನ ಖ್ಯಾತಿಯ, ನಾಡಿನ ಖ್ಯಾತ ಗಾಯಕಿ ಅನನ್ಯ ಭಟ್ ಅವರನ್ನು ಆಹ್ವಾನಿಸಲು ಜಿಲ್ಲಾಡಳಿತ ಚಿಂತನೆ ನಡೆಸಿದೆ. ಖರ್ಚು ವೆಚ್ಚ, ಕಲಾವಿದರ ವೇಳಾಪಟ್ಟಿಯ ಆಧಾರದಲ್ಲಿ ಇನ್ನೂ ಹಲವು ಕಲಾವಿದರನ್ನು ಸಂಭಾವ್ಯ ಆಹ್ವಾನಿತರ ಪಟ್ಟಿಗೆ ಸೇರಿಸಿಕೊಳ್ಳಲಾಗಿದೆ. ಅಲ್ಲದೇ ಸ್ಥಳೀಯ ಕಲಾವಿದರಿಗೂ ಅವಕಾಶ ನೀಡಲಾಗುತ್ತಿದೆ. ಪ್ರತಿಭಾವಂತ ಕಲಾವಿದರು ತಮ್ಮ ವಿಶಿಷ್ಟ ಕಲಾ ಪ್ರದರ್ಶನ ಮಾಡಲಿದ್ದಾರೆ. ಕಲಾವಿದರಿಗೆ ಊಟ, ವಸತಿ ಸೌಕರ್ಯ ಮಾಡಲಾಗುತ್ತದೆ ಎಂದರು.
ಲೇಸರ್ ಕಿರಣಗಳೊಂದಿಗೆ ಮಹಾಶಿವನ ಕಥಾ ಚಿತ್ರಣವನ್ನು ಲೇಸರ್ ಕಿರಣಗಳೊಂದಿಗೆ ಪ್ರದರ್ಶಿಸುವ ಪ್ರಸ್ತಾಪವೂ ಇದ್ದು, ಪ್ರಾಯೋಜಕರ ಲಭ್ಯತೆಯನ್ನು ನೋಡಿಕೊಂಡು ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ಮಹಾಶಿವರಾತ್ರಿಯ ಅಂಗವಾಗಿ ರಾಜ್ಯದ ವಿವಿಧೆಡೆಯಿಂದ ಭಕ್ತರು ಮುರುಡೇಶ್ವರದೆಡೆಗೆ ಮುಖ ಮಾಡಲಿದ್ದಾರೆ. ಮಹಾಶಿವರಾತ್ರಿ ವಿಶೇಷ ಕಾರ್ಯಕ್ರಮ ವೀಕ್ಷಿಸಲು ಸಹಸ್ರಾರು ಜನರು ಸೇರುವ ನಿರೀಕ್ಷೆ ಇದೆ ಎಂದು ಹೇಳಿದರು.