ಉಡುಪಿ: ಬೈಂದೂರು ತಾಲೂಕಿನ ಬೋಳಂಬಳ್ಳಿಯ ಪಾರ್ಶ್ವನಾಥ ಸ್ವಾಮಿ ಮತ್ತು ಪದ್ಮಾವತಿ ಅಮ್ಮನವರ ಬಸದಿಯ ಪರಿಸರದಲ್ಲಿ ಭಗವಾನ್ ಆದಿನಾಥ ಸ್ವಾಮಿ ಪಂಚಕಲ್ಯಾಣ, ನೂತನ ಬಾಹುಬಲಿ ಸ್ವಾಮಿಯ ಪ್ರತಿಷ್ಠಾ ಪೂರ್ವಕ ಮಹಾಮಸ್ತಕಾಭಿಷೇಕ, ವಾರ್ಷಿಕ ರಥೋತ್ಸವ, ಸಿದ್ದಕೇವಲಿ ಭಗವಾನ್ ಶ್ರೀರಾಮಚಂದ್ರ ದೇವರ ಪ್ರತಿಷ್ಠಾಪನಾ ಪೂಜಾ ಮಹೋತ್ಸವ ಮೇ 4ರಿಂದ 9ರವರೆಗೆ ನಡೆಯಲಿದೆ ಎಂದು ದೇವಸ್ಥಾನದ ಟ್ರಸ್ಟಿ ಆಕಾಶ್‌ರಾಜ್‌ ಜೈನ್‌ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಅವರು, ಭಗವಾನ್ ಬಾಹುಬಲಿಗೆ ಮಹಾ ಮಸಕಾಭಿಷೇಕವು ಮೇ 7ರಿಂದ 9ರವರೆಗೆ ಪ್ರತಿದಿನ ಸಂಜೆ 4ರಿಂದ ಜರುಗಲಿದೆ ಎಂದರು.

ಶ್ರೀಕ್ಷೇತ್ರ ಹೊಂಬುಜ ಜೈನ ಮಠದ ದೇವೇಂದ್ರಕೀರ್ತಿ ಭಟ್ಟಾಕರ ಸ್ವಾಮೀಜಿ ಅವರ ನೇತೃತ್ವದಲ್ಲಿ ಹಾಗೂ 108 ಗುಲಾಬ್‌ಭೂಷಣ್ ಮುನಿಮಹಾರಾಜರ ಮಾರ್ಗದರ್ಶನದಲ್ಲಿ ಧಾರ್ಮಿಕ ಕಾರ್ಯಕ್ರಮ ನಡೆಯಲಿವೆ. ಬಾಹುಬಲಿ ಮತ್ತು ರಾಮಚಂದ್ರ ದೇವರ ಮೂರ್ತಿಯನ್ನು ಮೇ 9ರಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವಿರೇಂದ್ರ ಹೆಗ್ಗಡೆ ಲೋಕಾರ್ಪಣೆಗೊಳಿಸಲಿದ್ದಾರೆ ಎಂದರು.

ಭಗವಾನ್ ಬಾಹುಬಲಿಯ ಏಕಶಿಲಾ ಮೂರ್ತಿ 27 ಅಡಿ ಎತ್ತರ ಹಾಗೂ ಶ್ರೀರಾಮಚಂದ್ರ ದೇವರ ಏಕಶಿಲಾ ಮೂರ್ತಿ 21 ಅಡಿ ಎತ್ತರವಿದೆ ಎಂದು ವಿವರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ರಾಜಶೇಖ‌ರ್ ಹೆಬ್ಬಾ‌ರ್, ಪದ್ಮಪ್ರಸಾದ್‌ ಜೈನ್ ನೆಲ್ಲಿಕಾರ್, ರಾಜೇಶ್ ಜೈನ್ ಕೊಕ್ಕರ್ಣೆ ಇದ್ದರು.