
ಬೆಳಗಾವಿ : ಮರಳಿ ಬನ್ನಿ ಶಾಲೆಗೆ, ನವೋತ್ಸವ ತನ್ನಿ ಶಿಕ್ಷಣಕ್ಕೆ
ಶಾಲಾ ಪ್ರಾರಂಭೋತ್ಸವ ಹಿನ್ನೆಲೆಯಲ್ಲಿ ಬೈಲಹೊಂಗಲ ತಾಲೂಕಿನ ಗಣಿಕೊಪ್ಪ ಗ್ರಾಮದ ಸರಕಾರಿ ಹಿರಿಯ ಕನ್ನಡ ಪ್ರಾಥಮಿಕ ಶಾಲೆಯಲ್ಲಿ ಇಂದು ಶಾಲೆಯನ್ನು ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು. ಮಕ್ಕಳ ಗಮನ ಶಾಲೆಗೆ ಸೆಳೆಯಲು ಟ್ರಾಕ್ಟರ್‌ಗೆ ಬಲೂನ್‌ಗಳಿಂದ ಸಿಂಗರಿಸಿಲಾಗಿ, ವಿಶೇಷವಾಗಿ ಗ್ರಾಮದ ಮಹಿಳೆಯರು ಕುಂಭ ಕೊಡ ಹೊತ್ತು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ಶಾಲೆಗೆ ಆಗಮಿಸಿದರು. ಗ್ರಾಮದಲ್ಲಿ ಒಂದು ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತಿ ಸದಸ್ಯೆ ರೋಹಿಣಿ ಪಾಟೀಲ ಮಾತನಾಡಿ, ಹಳ್ಳಿಯ ಶಾಲೆಗಳು ಇನ್ನಷ್ಟು ಅಭಿವೃದ್ದಿಯಾಗಲು ಎಲ್ಲರ ಸಹಕಾರ ಇಂದಿನ ದಿನಗಳಲ್ಲಿ ಅಗತ್ಯವಾಗಿದೆ. ಈ ಶಾಲೆಗೆ ಡಿಜಿಟಲ್ ಶಿಕ್ಷಣಕ್ಕೆ ಬೇಕಾದ ಎಲ್ಲ ಸೌಕರ್ಯಗಳನ್ನು ಮಾಡಿಕೊಡುವುದಾಗಿ ಹೇಳಿದರು.ನಂತರ ಕೇತ್ರ ಶಿಕ್ಷಣಾಧಿಕಾರಿ ಎ. ಎನ್. ಪ್ಯಾಟಿ ಮಾತನಾಡಿ, ಗಣಿಕೊಪ್ಪ ಶಾಲೆಯು ಸಾಕಷ್ಟು ಅಭಿವೃದ್ದಿ ಹೊಂದಿದ್ದು ಒಂದು ಮಾದರಿ ಶಾಲೆಯಾಗಿ ಹೊರಹೊಮ್ಮುತ್ತಿದೆ, ಮಕ್ಕಳನ್ನು ಸೆಳೆಯಲು ಒಳ್ಳೆಯ ಶಿಕ್ಷಣದ ವ್ಯವಸ್ಥೆಯನ್ನು ಈ ಶಾಲಾ ಶಿಕ್ಷಕರು, ಶಿಕ್ಷಕಿಯರು ಮಾಡುತ್ತಿರುವುದು ಹೆಮ್ಮೆಯ ಸಂಗತಿ ಇಂದಿನ ದಿನಮಾನಗಳಲ್ಲಿ ಸರಕಾರಿ ಶಾಲೆಗಳು ಎಂದರೆ ಅಸಡ್ಡೆ ಮಾಡುವ ಕಾಲದಲ್ಲಿ ಅದನ್ನು ಮೀರಿ ಈ ಶಾಲೆಯು ಬೆಳೆಯುತ್ತಿದೆ ಎಂದರು.
ಬೈಲಹೊಂಗಲ ಕ್ಷೇತ್ರ ಸಮನ್ವಯಾಧಿಕಾರಿ ಬಿ. ಎನ್. ಕಸಾಲೆ, ಶಿಕ್ಷಣ ಸಂಯೋಜಕ ಎಸ್. ಪಿ ಯರಗಟ್ಟಿ, ಬಿಆರ್ಪಿಗಳಾದ ಚಳಕೊಪ್ಪ, ಎಸ್. ಎನ್. ಮುಲ್ಲಾ, ಶಾಲೆಯ ಪ್ರಧಾನ ಗುರುಗಳಾದ ಚಡಿಚಾಳ, ಶಾಲಾ ಶಿಕ್ಷಕವೃಂದ, ಎಸ್‌ಡಿಎಂಸಿ ಸದಸ್ಯರು, ಹಳೆಯ ವಿದ್ಯಾರ್ಥಿ ಬಳಗ ಹಾಗೂ ಗ್ರಾಮದ ಗುರು ಹಿರಿಯರು ಉಪಸ್ಥಿತರಿದ್ದರು. ಸುನಿತಾ ಬನಸಿ ಸ್ವಾಗತಿಸಿದರು, ಶ್ರೀದೇವಿ ಕಾಜಗಾರ ನಿರೂಪಿಸಿದರು, ಭರಮಣ್ಣವರ ವಂದಿಸಿದರು.