ಬೆಳಗಾವಿ:
ನಾಗನೂರು ರುದ್ರಾಕ್ಷಿ ಮಠದ ಕೀರ್ತಿಯನ್ನು ನಾಡಿನ ಉದ್ದಕ್ಕೂ ಪಸರಿಸಿದ ಶ್ರೇಯ
ಲಿಂಗೈಕ್ಯ ಶಿವಬಸವ ಶ್ರೀಗಳಿಗೆ ಸಲ್ಲುತ್ತದೆ ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಫ.ಗು. ಸಿದ್ದಾಪುರ ಹೇಳಿದರು.
ನಾಗನೂರು ರುದ್ರಾಕ್ಷಿ ಮಠದ ಲಿಂಗೈಕ್ಯ ಕಾಯಕಯೋಗಿ, ಮಹಾಪ್ರಸಾದಿ, ಡಾ.ಶಿವಬಸವ
ಮಹಾಸ್ವಾಮಿಗಳವರ 134 ನೆಯ ಜಯಂತಿ ಮಹೋತ್ಸವದಲ್ಲಿ ಶ್ರೀ ಮಠದಿಂದ ನೀಡಲಾದ ಸನ್ಮಾನ
ಸ್ವೀಕರಿಸಿ ಮಾತನಾಡುತ್ತಿದ್ದರು. ಗಡಿ ಭಾಗವಾದ ಬೆಳಗಾವಿಯಲ್ಲಿ ಕನ್ನಡದ ಭಾಷೆಯ ಬೆಳವಣಿಗೆ ಮತ್ತು ಉಳಿವಿಗಾಗಿ ಲಿಂಗೈಕ್ಯ ಶಿವಬಸವ ಶ್ರೀಗಳು ಮಾಡಿದ ಸೇವೆ ಅದ್ವಿತೀಯವಾಗಿದೆ, ಕನ್ನಡ ಭಾಷೆಯ ಹೋರಾಟಕ್ಕಾಗಿ ಕನ್ನಡದ ಮಕ್ಕಳನ್ನು ಸನ್ನದ್ಧಗೊಳಿಸಿದ ಶಿವಬಸವ ಶ್ರೀಗಳು ಯಾವ ಬೆದರಿಕೆಗೂ ಹೆದರಲಿಲ್ಲ ಎಂದ ಅವರು ನಾಗನೂರಿನಿಂದ ಅವರನ್ನು ಹೊರಹಾಕಲು ಕುಹತ್ತಿಗಳು ಮಾಡಿದ ಕುತಂತ್ರಕ್ಕೆ ಮಣಿಯದೆ
ಕುಗ್ಗದೆ ಸೇವೆ ಮುಂದುವರಿಸಿದರು. ಯಾವ ಕಿರಿಕಿರಿಗೂ ಅಂಜದೆ ಅಲ್ಲಮನ ಪ್ರಸಾದವೆಂದು ಸ್ವೀಕರಿಸಿ ಮುನ್ನಡೆದ ಅವರಿಂದಾಗಿ ರುದ್ರಾಕ್ಷಿ ಮಠವಿಂದು ನಾಡಿನ ಉದ್ದಕ್ಕೂ ತನ್ನ ಸೇವೆಯನ್ನು ಮುಂದುವರಿಸುವಂತಾಗಿದೆ ಎಂದವರು ಹೇಳಿದರು.

ಸ್ವಾತಂತ್ರ‍್ಯ ಹೋರಾಟಗಾರರಿಗಾಗಿ ಅವರು ಮಾಡಿದ ಸಹಾಯ ಮತ್ತು ಸೇವೆ ಅದ್ವಿತೀಯ, ಗಾಂಧೀಜಿಯವರು ಬೆಳಗಾವಿಗೆ ಬಂದಾಗ ಅವರ ಮತ್ತು ಶ್ರೀಗಳ ಭೇಟಿಯನ್ನು ನೆನಪಿಸಿಕೊಂಡ ಸಿದ್ದಾಪುರ ಅವರು ಅಂದಿನಿಂದ ಶ್ರೀಗಳು ಖಾದಿ ದಾರಿಯಾದರೂ ಎಂದರು.

ಶ್ರೀಗಳು ಸ್ಥಾಪಿಸಿದ ಪ್ರಸಾದ ನಿಲಯದಿಂದಾಗಿ ಅಲ್ಲಿ ಉಂಡು ಬೆಳೆದು ನಾಡಿನಲ್ಲಿಡೆ ಅತ್ಯುತ್ತಮ
ಸೇವೆ ಸಲ್ಲಿಸುತ್ತಿರುವ ಹಲವಾರು ಮಹನೀಯರನ್ನು ಅವರು ನೆನಪಿಸಿಕೊಂಡರು.

ನೇತೃತ್ವವನ್ನು ಬೆಳಗಾವಿ ನಾಗನೂರು ರುದ್ರಾಕ್ಷಿ ಮಠದ ಪೀಠಾಧಿಕಾರಿ ಡಾ.
ಅಲ್ಲಮಪ್ರಭು ಮಹಾಸ್ವಾಮೀಜಿಯವರು ವಹಿಸಿದ್ದರು.
ಬೆಳಗಾವಿ ಶಿವಬಸವ ನಗರದಲ್ಲಿರುವ ಆರ್.ಎನ್. ಶೆಟ್ಟಿ ಪಾಲಿಟೆಕ್ನಿಕ್ ಕಾಲೇಜಿನ
ಆವರಣದಲ್ಲಿ ನಡೆಯುತ್ತಿರುವ ಕಾರ್ಯಕ್ರಮಕ್ಕೆ ಶೇಗುಣಸಿ
ವಿರಕ್ತಮಠದ ಶ್ರೀ ಮಹಾಂತಪ್ರಭು ಸ್ವಾಮೀಜಿಯವರು ಷಟಸ್ಥಲ ಧ್ವಜಾರೋಹಣ
ನೆರವೇರಿಸುವುದರೊಂದಿಗೆ ನಾಲ್ಕು ದಿನಗಳ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು.

ಸಾನ್ನಿಧ್ಯವನ್ನು ಬೆಳಗಾವಿ ಕಾರಂಜಿ ಮಠದ ಶ್ರೀ
ಗುರುಸಿದ್ಧ ಸ್ವಾಮೀಜಿಯವರು ವಹಿಸಿದ್ದರು. ಅಧ್ಯಕ್ಷತೆಯನ್ನು ಹುಕ್ಕೇರಿ
ವಿರಕ್ತಮಠದ ಶ್ರೀ ಶಿವಬಸವ ಸ್ವಾಮಿಜಿಯವರು ವಹಿಸಿದ್ದರು.ಸಮ್ಮುಖದಲ್ಲಿ ಶಿವಪುರ
ಕೆ.ಎಚ್. ನ ಶಿವಲಿಂಗೇಶ್ವರ ಮಠದ ಶ್ರೀ.ಅಭಿನವ ಶಿವಲಿಂಗ ಮಹಾಸ್ವಾಮಿಗಳು
ಉಪಸ್ಥಿತರಿದ್ದರು. ಮುದುಗಲ್ ತಿಮ್ಮಾಪುರದ ಕಲ್ಯಾಣಾಶ್ರಮದ ಶ್ರೀ ಮಹಾಂತ ಸ್ವಾಮೀಜಿ
ಅವರಿಗೆ ಗೌರವ ಸನ್ಮಾನ ನೀಡಲಾಯಿತು. ರಾಜ್ಯೋತ್ಸವ ಪ್ರಶಸ್ತಿ
ಪುರಸ್ಕೃತರಾದ ವಿಜಯಪುರದ ಫ.ಗು. ಸಿದ್ದಾಪುರ, ಇಳಕಲ್ಲದ ಡಾ. ಶಂಭು ಬಳಿಗಾರ,
ಎಂ.ಕೆ.ಹುಬ್ಬಳ್ಳಿಯ ಡಾ.ಬಾಳೇಶ ಭಜಂತ್ರಿ ಅವರನ್ನು ಸನ್ಮಾನಿಸಲಾಯಿತು.
ಶ್ರೀ ಮಠದಿಂದ ಕೊಡ ಮಾಡಲಾಗುವ ಕನ್ನಡ ನುಡಿಶ್ರೀ ಪ್ರಶಸ್ತಿಯನ್ನು ನಿಪ್ಪಾಣಿಯ
ಮಿಥುನ್ ಅಂಕಲಿ , ಅಥಣಿಯ ಚನ್ನಯ್ಯ ಹಿಟ್ನಾಳಮಠ, ಬೆಳಗಾವಿಯ
ಮಹಬೂಬ್ ಮಕಾಂದರ್, ಸಂಕ್ ಗ್ರಾಮದ ಆರ್. ಜಿ. ಬಿರಾದರ್ ಅವರಿಗೆ
ಪ್ರದಾನ ಮಾಡಲಾಯಿತು.

ಕಲಾವಿದರಾದ ಅಮರೇಶ ಗವಾಯಿಗಳು, ವಿದ್ವಾನ್ ರವಿಕುಮಾರ್ ,
ಹನುಮಂತರಾಯ ಟೆಕ್ಕೋಟ್ನೆಕಲ್ ಅವರಿಗೆ ಗೌರವ ಸನ್ಮಾನ ನೀಡಲಾಯಿತು. ಪ್ರಾಚಾರ್ಯ
ಎ.ಎಲ್. ಪಾಟೀಲ ಸ್ವಾಗತಿಸಿದರು. ಪ್ರೊ. ಮಂಜುನಾಥ ಶರಣಪ್ಪನವರ ನಿರೂಪಿಸಿದರು, ರಾಜಶೇಖರ ಪಾಟೀಲ ವಂದಿಸಿದರು.ಶಾಸಕ ಮಹಾಂತೇಶ ಕೌಜಲಗಿ, ಎಫ್.ವಿ.
ಮಾನ್ವಿ, ಡಾ. ಬಸವರಾಜ ಜಗಜಂಪಿ, ಸುರೇಶ ಗಾಡವಿ, ಬಸವರಾಜ ರೊಟ್ಟಿ, ಅಶೋಕ
ಮಳಗಲಿ,ಸಂಗೀತ ವಿದೂಷಿ ನೈನಾ ಗಿರಿಗೌಡರ, ಮಾಜಿ ನಗರಸೇವಕಿ ಸರಳಾ ಹೇರಕರ , ಅಶೋಕ
ಚಂದರಗಿ ಸೇರಿ ಹಲವು ಗಣ್ಯರು ಉಪಸ್ಥಿತರಿದ್ದರು. ಪ್ರಭುದೇವ ಮಾತೃ ಮಂಡಳಿಯಿಂದ ವಚನ
ಗಾಯನ ಪ್ರಾರ್ಥನೆಯೊಂದಿಗೆ ಮತ್ತು ಜೈಜಗದೀಶ್ವರಿ ಮಾತೃ ಮಂಡಳಿಯ ಸದಸ್ಯರಿಂದ
ನಾಡಗೀತೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು.