ಬೆಂಗಳೂರು: ಅಂಕೋಲಾ ತಾಲೂಕಿನ ಶಿರೂರು ಬಳಿಯ ರಾಷ್ಟ್ರೀಯ ಹೆದ್ದಾರಿ ಮೇಲೆ ಗುಡ್ಡ ಕುಸಿತ ಸಂಭವಿಸಿ ಒಂದು ವಾರ ಕಳೆದಿದೆ. ಆದರೂ ಇದುವರೆಗೆ ಕೇರಳ ಮೂಲದ ಲಾರಿ ಹಾಗೂ ಅದರ ಚಾಲಕ ಪತ್ತೆಯಾಗಿಲ್ಲ. ಇದೀಗ ಲಾರಿ ಚಾಲಕನ ಕುಟುಂಬ ಕರ್ನಾಟಕ ಸರ್ಕಾರದ ವಿರುದ್ಧವೇ ಹೈಕೋರ್ಟ್ ಮೆಟ್ಟಿಲೇರಿದೆ.

ಸ್ಥಳದಲ್ಲಿ ನಾಪತ್ತೆಯಾಗಿರುವವರಿಗೆ ತೀವ್ರ ಶೋಧ ಕಾರ್ಯ ನಡೆಯುತ್ತಿದೆ. ಮಂಗಳವಾರ ಎಂಟನೇ ಶವ ಪತ್ತೆಯಾಗಿದೆ. ಇದು ವೃದ್ದೆಯ ಶವ ಎಂದು ಗುರುತಿಸಲಾಗಿದೆ. ಆದರೆ, ಈ ನಡುವೆ ಕೇರಳ ಮೂಲದ ಲಾರಿ ಚಾಲಕ ಅರ್ಜುನ್ ಕುಟುಂಬಸ್ಥರು ಕರ್ನಾಟಕ ಸರಕಾರದ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ್ದು ಈ ಬಗ್ಗೆ ಅರ್ಜಿ ಸಲ್ಲಿಕೆಯಾಗಿದೆ. ಘಟನಾ ಸ್ಥಳದಲ್ಲಿ ಲಾರಿಯ ಜಿಪಿಆರ್ಎಸ್ ಕೊನೆಯ ಲೊಕೇಶನ್ ಪತ್ತೆಯಾಗಿದೆ. ಆದರೆ, ಕಾರ್ಯಾಚರಣೆ ಅವೈಜ್ಞಾನಿಕ ಮತ್ತು ವಿಳಂಬವಾಗಿ ನಡೆಯುತ್ತಿದೆ ಎಂದು ಲಾರಿ ಚಾಲಕನ ಕುಟುಂಬ ಕರ್ನಾಟಕ ಸರ್ಕಾರದ ವಿರುದ್ಧ ಆರೋಪಿಸಿದ್ದು ಹೈಕೋರ್ಟ್ ಈ ಬಗ್ಗೆ ಸರ್ಕಾರದಿಂದ ವರದಿ ಕೇಳಿದೆ. ಪ್ರಕರಣ ಬುಧವಾರ ವಿಚಾರಣೆ ಬರಲಿದೆ. ಜೊತೆಗೆ ಕೇರಳ ಸರ್ಕಾರವು ಕರ್ನಾಟಕ ಸರ್ಕಾರದ ವಿರುದ್ಧ ಈ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಜೊತೆಗೆ ಘಟನಾ ಸ್ಥಳಕ್ಕೆ ವರದಿಗೆ ಬಂದ ಕೇರಳದ ಮಾಧ್ಯಮಗಳು ಸಹಾ ಕರ್ನಾಟಕ ಸರ್ಕಾರ ಮತ್ತು ಪೊಲೀಸರ ಧೋರಣೆ ವಿರುದ್ಧ ಕೆಂಡಕಾರಿವೆ.